Advertisement

ಆದ್ಯತೆ ಮೇರೆಗೆ ಮಲಪ್ರಭಾ ಯೋಜನೆ ಕಾಮಗಾರಿ

10:14 AM May 20, 2020 | Suhan S |

‌ಸವದತ್ತಿ: ಮಲಪ್ರಭಾ ಯೋಜನಾ ವಲಯದಲ್ಲಿ ಚಾಲನೆಯಲ್ಲಿರುವ ಇರುವ ವಿವಿಧ ಕಾಮಗಾರಿಗಳು, ದುರಸ್ತಿ ಮತ್ತು ವಸತಿ ಗೃಹಗಳ ನವೀಕರಣಕ್ಕೆ ಸಾವಿರಾರು ಕೋಟಿ ರೂಪಾಯಿ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಮೂರು ವರ್ಷಗಳಲ್ಲಿ ಹಂತ ಹಂತವಾಗಿ ಕೈಗೊಳ್ಳಬೇಕು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಸವದತ್ತಿ ತಾಲೂಕಿನ ನವಿಲುತೀರ್ಥ ಜಲಾಶಯದ ಬಳಿಯ ಮಲಪ್ರಭಾ ಯೋಜನಾ ವಲಯದ ಅಧೀಕ್ಷಕ ಎಂಜಿನೀಯರ್‌ ಕಚೇರಿಯಲ್ಲಿ ಮಂಗಳವಾರ ಮಲಪ್ರಭಾ ಯೋಜನಾ ವಲಯದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಶಾಸಕರು ಶಿಫಾರಸು ಮಾಡಿರುವ ಎಲ್ಲ ನೀರಾವರಿ ಯೋಜನೆ, ದುರಸ್ತಿ ಕೆಲಸ ಮತ್ತು ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಮಲಪ್ರಭಾ ಆಧುನೀಕರಣ ಯೋಜನೆ, ಕೆರೆಗೆ ನೀರು ತುಂಬುವ ಕಾಮಗಾರಿ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವರು ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರಿಗೆ ನೀಡಬೇಕಾದ ಪರಿಹಾರದ ಮೊತ್ತವನ್ನು ಪಾವತಿಸಲು ಅನುಕೂಲವಾಗುವಂತೆ ಪ್ರತಿವರ್ಷದ ಅನುದಾನದಲ್ಲಿ ನಿರ್ದಿಷ್ಟ ಮೊತ್ತವನ್ನು ಮೀಸಲಿಡಲಾಗುವುದು ಎಂದರು.

ಗುತ್ತಿಗೆದಾರರ ವಿರುದ್ಧ ಕ್ರಮ: ನೀರಾವರಿ ಯೋಜನೆಗಳ ಕಾಮಗಾರಿಯನ್ನು ವಿಳಂಬಗೊಳಿಸುವ ಗುತ್ತಿಗೆದಾರರಿಗೆ ನೋಟಿಸ್‌ ನೀಡುವಂತೆ ಸೂಚನೆ ನೀಡಿದ ಅವರು, ನೋಟಿಸ್‌ ನೀಡಿದಾಗ್ಯೂ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಭೂಸ್ವಾಧೀನ ಪ್ರಕರಣಗಳು ಹೊರತುಪಡಿಸಿ ಅನಾವಶ್ಯಕವಾಗಿ ಕಾಮಗಾರಿ ವಿಳಂಬಗೊಳಿಸುವ ಗುತ್ತಿಗೆದಾರರ ಧೋರಣೆಯನ್ನು ಸಹಿಸುವುದಿಲ್ಲ. ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುವುದರ ಜೊತೆಗೆ ತಾಂತ್ರಿಕ ಕಾರಣಗಳಿಂದ ಯಾವುದೇ ಯೋಜನೆ ಕುಂಠಿತಗೊಳ್ಳದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ರೈತರ ಪಾಲುದಾರಿಕೆಯೊಂದಿಗೆ ನೀರು ಸದ್ಬಳಕೆಗೆ ವಾಲ್ಮಿ ವತಿಯಿಂದ ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ. ರಾಜಸ್ತಾನ ಮತ್ತು ಮಹಾರಾಷ್ಟ್ರದ ಮಾದರಿಯಲ್ಲಿ ರೈತರ ಸಹಭಾಗಿತ್ವದಲ್ಲಿ ನೀರಾವರಿ ವ್ಯವಸ್ಥೆ ಅನುಷ್ಠಾನದ ಬಗ್ಗೆ ಅಧ್ಯಯನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ವಿವಿಧ ಮತಕ್ಷೇತ್ರಗಳ ಶಾಸಕರ ಬೇಡಿಕೆಗಳನ್ನು ಆಲಿಸಿದ ಸಚಿವ ರಮೇಶ್‌ ಜಾರಕಿಹೊಳಿ ಕೇಂದ್ರ ಜಲ ಆಯೋಗದಿಂದ ಅನುಮತಿ ದೊರೆತ ಎಲ್ಲ ಹೊಸ ಯೋಜನೆಗಳನ್ನು ಕೂಡಲೇ ಅನುಷ್ಠಾನಕ್ಕೆ ತರಲಾಗುತ್ತದೆ ಎಂದರು.

Advertisement

ಕರ್ನಾಟಕ ವಿಧಾನಸಭಾ ಉಪ ಸಭಾಪತಿ ಆನಂದ ಮಾಮನಿ ಮಾತನಾಡಿ, ಏತ ನೀರಾವರಿ ಯೋಜನಾ ಕಾಮಗಾರಿಗಳನ್ನು ಮೊದಲು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿರುವ ಏತ ನೀರಾವರಿ ಯೋಜನೆ ಮತ್ತು ಕೆರೆ ತುಂಬುವ ಯೋಜನೆಗಳ ಪ್ರಸ್ತಾಪಿಸಿದ ಶಾಸಕ ಮಹಾಂತೇಶ ಕೌಜಲಗಿ, ಮಹಾಂತೇಶ ದೊಡ್ಡಗೌಡ್ರ ಮತ್ತು ಮಹಾದೇವಪ್ಪ ಯಾದವಾಡ ಅವರು ಅನೇಕ ವರ್ಷಗಳಿಂದ ಬಾಕಿ ಉಳಿದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಚಿವರಿಗೆ ಮನವಿ ಮಾಡಿದರು.

ಧಾರವಾಡ ಜಿಲ್ಲೆಯ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳದಿಂದ ಸುಮಾರು 14 ಟಿಎಂಸಿ ನೀರು ಲಭಿಸಲಿದೆ. ಸೂಕ್ತ ಯೋಜನೆ ರೂಪಿಸುವ ಮೂಲಕ ಜನರಿಗೆ ಅನುಕೂಲ ಆಗುವಂತೆ ಮಾಡಬೇಕು ನವಲಗುಂದ ಶಾಸಕ ಶಂಕರ ಮುನೇನಕೊಪ್ಪ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಶೀಘ್ರದಲ್ಲೇ ಬೆಣ್ಣೆ ಹಳ್ಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

ಮಲಪ್ರಭಾ ಯೋಜನೆಯ ಅನುಷ್ಠಾನದ ಕುರಿತು ಮಾತನಾಡಿದ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಸುಮಾರು 3500 ಕೋಟಿ ರೂಪಾಯಿ ಅನುದಾನದ ಅಗತ್ಯವಿದೆ. ಈ ಯೋಜನೆಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಮಲಪ್ರಭಾ ಯೋಜನೆಯ ಮುಖ್ಯ ಎಂಜಿನಿಯರ್‌ ವಿ.ಕೆ. ಪೊದ್ದಾರ ಮಾತನಾಡಿ, ಮಲಪ್ರಭಾ ಯೋಜನೆ ವ್ಯಾಪ್ತಿಯಲ್ಲಿ ಇದುವರೆಗೆ 1.96 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಜಲಾಶಯದ ಉಪಯೋಗಿಸಲ್ಪಡುವ ನೀರಿನ ಸಂಗ್ರಹಣಾ ಸಾಮರ್ಥ್ಯ 33.34 ಟಿಎಂಸಿ ಇದ್ದು 1972-73 ರಲ್ಲಿ ನಿರ್ಮಾಣವಾದ ಜಲಾಶಯವು ಇಲ್ಲಿಯವರೆಗೆ ಐದು ಬಾರಿ ಮಾತ್ರ ಭರ್ತಿಯಾಗಿದೆ ಎಂದರು. ಯೋಜನಾ ವಲಯದ ವ್ಯಾಪ್ತಿಯಲ್ಲಿ ಬರುವ ಬೈಲಹೊಂಗಲ, ರಾಮದುರ್ಗ, ಸವದತ್ತಿ ಸೇರಿದಂತೆ ವಿವಿಧ ತಕ್ಷೇತ್ರಗಳ ಶಾಸಕರ ಬೇಡಿಕೆಯ ಮೇರೆಗೆ ಕೈಗೊಳ್ಳಲಾದ ವಿವಿಧ ಯೋಜನೆ ಮತ್ತು ಕಾಮಗಾರಿಗಳ ಪ್ರಗತಿಯನ್ನು ಅವರು ಸಭೆಗೆ ವಿವರಿಸಿದರು. ಸಭೆಯಲ್ಲಿ ಮಲಪ್ರಭಾ ಯೋಜನಾ ವಲಯದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next