ಶನಿವಾರಸಂತೆ : ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಸಮಿಪದ ಮಾಲಂಬಿ ಗ್ರಾಮದಲ್ಲಿರುವ ಶ್ರೀ ಮಳೆಮಲ್ಲೇಶ್ವರ ಬೆಟ್ಟದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಮಾಲಂಬಿ ಮಳೆ ಮಲ್ಲೇಶ್ವರ ದೇವಾಲಯ ಸಮಿತಿ ಹಾಗೂ ದಾನಿಗಳ ಸಹಕಾರದೊಂದಿಗೆ ಬೆಟ್ಟದಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತು. ಬೆಟ್ಟದ ಮೇಲಿರುವ ಶ್ರೀ ಮಳೆ ಮಲ್ಲೇಶ್ವರ ದೇವಾಲಯದಲ್ಲಿ ಸೋಮವಾರ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12-30 ರವರೆಗೆ ಶ್ರೀ ಮಳೆ ಮಲ್ಲೇಶ್ವರ ಸ್ವಾಮಿ, ಶ್ರೀ ಗಣಪತಿ ಮತ್ತು ಶ್ರೀ ಬಸವಣ್ಣ ದೇವರುಗಳಿಗೆ ವಿಶೇಷ ಹೂವಿನ ಅಭಿಷೇಕ, ದೇವತಾ ಮಹಾ ಪೂಜೆ, ಮಹಾ ಮಂಗಳಾರತಿ ಮುಂತಾದ ಪೂಜಾ ವಿದಿ ವಿಧಾನವನ್ನು ನೆರವೇರಿಸಲಾಯಿತು.
ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಸೋಮವಾರ ಮುಂಜಾನೆ 6 ಗಂಟೆಯಿಂದ ಸಂಜೆ 4 ಗಂಟೆಯ ತನಕ ತಂಡೋಪ ತಂಡವಾಗಿ ಸಾವಿರಾರು ಭಕ್ತರು ಮಾಲಂಬಿ ಮಳೆ ಮಲ್ಲೇಶ್ವರ ಬೆಟ್ಟವನ್ನೇರಿ ಮಳೆ ಮಲ್ಲೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸ್ಥಳೀಯ ಭಕ್ತರು ಸೇರಿದಂತೆ ಜಿಲ್ಲೆ ಪಕ್ಕದ ಹಾಸನ ಜಿಲ್ಲೆ ಮತ್ತು ಮೈಸೂರು ಜಿಲ್ಲೆಗಳಿಂದ 10 ಸಾವಿರಕ್ಕಿಂತ ಹೆಚ್ಚಿನ ಭಕ್ತರು ಮಳೆ ಮಲ್ಲೇಶ್ವರ ಬೆಟ್ಟವನ್ನೇರಿ ದೇವರಿಗೆ ಪೂಜೆ ಸಲ್ಲಿಸಿದರು.
ದೇಗುಲ ಸಮಿತಿ ದಾನಿಗಳಿಂದ ಭಕ್ತಾದಿಗಳಿ ಅನ್ನದಾನವನ್ನು ಏರ್ಪಡಿಸಲಾಗಿತು. ಬೆಟ್ಟದ ಮಾರ್ಗದಲ್ಲಿ ಭಕ್ತರಿಗೆ ಮಜ್ಜಿಗೆ, ಕುಡಿಯುವ ನೀರನ್ನು ವಿತರಿಸಲಾಯಿತು.
ಶಿವರಾತ್ರಿ ಹಬ್ಬದ ಪ್ರಯುಕ್ತ ಬೆಟ್ಟದ ಕೆಳ ಭಾಗದಲ್ಲಿ ಸಂಜೆ 5 ಗಂಟೆಯವರೆಗೆ ಪುಟ್ಟ ಜಾತ್ರೆಯನ್ನು ನಡೆಸಲು ದೇವಾಲಯ ಸಮಿತಿ ಅವಕಾಶ ಮಾಡಿಕೊಟ್ಟಿತು. ದೇಗುಲದ ಅರ್ಚಕ ಎಂ.ಎಸ್.ಚಂದ್ರಪ್ಪ ನೇತೃತ್ವದಲ್ಲಿ ಅರ್ಚಕರಾದ ನಂಜುಂಡಯ್ಯ, ನಂದ ಪೂಜಾ ವಿಧಿ ವಿಧಾನ ನೆರವೇರಿಸಿದರು.
ಸೋಮವಾರಪೇಟೆ ಸಿಐ ನಂಜುಂಡೇಗೌಡ ಮತ್ತು ಶನಿವಾರಸಂತೆ ಎಸ್‌ಐ ತಿಮ್ಮಶೆಟ್ಟಿ ನೇತೃತ್ವದಲ್ಲಿ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಯಿತು. ಈ ಸಂದರ್ಭದಲ್ಲಿ ದೇಗುಲ ಸಮಿತಿ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ದೇಗುಲ ಸಮಿತಿ ಪ್ರಮುಖರಾದ ಎಚ್.ಪಿ. ದಿವಾಕರ್, ಎಚ್.ಕೆ. ಸದಾಶಿವ, ಎಚ್.ಕೆ. ಹಾಲಪ್ಪ, ಎಸ್.ಸಿ. ಶರತ್‌ಶೇಖರ್, ಎಸ್.ಎಂ.ಮಹಂತೇಶ್, ಎನ್.ಬಿ. ವಿರೂಪಾಕ್ಷ, ಎಚ್.ಆರ್.ಮುತ್ತಣ್ಣ, ಎಂ.ಇ. ವೆಂಕಟೇಶ್, ಎಂ.ಎಂ. ಮಲ್ಲೇಶ್ ಮೊದಲಾದವರಿದ್ದರು.