Advertisement

ಮಲಹಾನಿಕರೇಶ್ವರ ಸ್ವಾಮಿ ರಥೋತ್ಸವ

06:14 PM Mar 14, 2021 | Team Udayavani |

ಶೃಂಗೇರಿ: ಮಹಾಶಿವರಾತ್ರಿ ಅಂಗವಾಗಿ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಬೆಟ್ಟದ ಇತಿಹಾಸ ಪ್ರಸಿದ್ಧ ಶ್ರೀ ಮಲಹಾನಿಕರೇಶ್ವರ ಸ್ವಾಮಿ ರಥೋತ್ಸವ ಶನಿವಾರ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಂಭ್ರಮದಿಂದ ನಡೆಯಿತು.

Advertisement

ರಥೋತ್ಸವ ಅಂಗವಾಗಿ ಬೆಟ್ಟದ ಶ್ರೀ ಮಲಹಾನಿಕರೇಶ್ವರಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ ವಿವಿಧ  ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳು ಹಾಗೂ ಕಿರಿಯ ಯತಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಶ್ರೀ ಶಾರದಾ ಸನ್ನಿ ಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿದ  ಬಳಿಕ ಬೆಟ್ಟದ ಮಲಹಾನಿಕರೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿದರು. ಬೆಟ್ಟದಲ್ಲಿರುವ ಸ್ಥಂಭಗಣಪತಿಗೆ ಪೂಜೆ ಸಲ್ಲಿಸಿದ ಬಳಿಕ ಶ್ರೀ ಭವಾನಿ ಅಮ್ಮನವರ ಸನ್ನಿ ಧಿಯಲ್ಲಿ ಪೂಜೆ, ಮಹಾಮಂಗಳಾರತಿ  ನೆರವೇರಿಸಿದರು.

ಬಳಿಕ ಮಲಹಾನಿಕರೇಶ್ವರ ಸ್ವಾಮಿಗೆ ರುದ್ರಾಭಿಷೇಕ ಸಹಿತ ವಿಶೇಷ ಪೂಜೆ ನೆರವೇರಿಸಿದರು. ಅನಂತರ ಉತ್ಸವ ಮೂರ್ತಿಯನ್ನು ಮಂಗಳವಾದ್ಯದೊಂದಿಗೆ ಶ್ರೀ ಮಠದವರೆಗೆ ತಂದು ಅಲ್ಲಿ ಅಲಂಕೃತ ರಥಕ್ಕೆ ಮೂರು ಪ್ರದಕ್ಷಿಣೆ ಹಾಕಿ ನಂತರ ಪ್ರತಿಷ್ಠಾಪಿಸಲಾಯಿತು. ಕಿರಿಯ ಶ್ರೀಗಳು ರಥದ ಮುಂದೆ ಹೆಜ್ಜೆ ಹಾಕಿದರು.

ರಥೋತ್ಸವದ ಅಂಗವಾಗಿ ಪಟ್ಟಣದ ರಥಬೀದಿಯನ್ನು ಸcತ್ಛಗೊಳಿಸಿ ರಂಗೋಲಿ ಚಿತ್ತಾರಗಳಿಂದ ಸಿಂಗರಿಸಲಾಗಿತ್ತು. ಆನೆ, ಕುದುರೆ, ತಟ್ಟಿರಾಯ, ಛತ್ರಿ, ಚಾಮರ, ವಾದ್ಯಮೇಳ ರಥೋತ್ಸವಕ್ಕೆ ವಿಶೇಷ ಮೆರುಗು ನೀಡಿತು. ಶ್ರೀ ಸದ್ವಿದ್ಯಾ ಸಂಸ್ಕೃತ ಪಾಠಶಾಲೆ ವಿದ್ಯಾರ್ಥಿಗಳ ವೇದಘೋಷದೊಂದಿಗೆ ಭಕ್ತರು ರಥ ಎಳೆದರು. ರಥ ಸಾಗುವ ಮಾರ್ಗದುದ್ದಕ್ಕೂ ಸುಡುಬಿಸಿಲು ಲೆಕ್ಕಿಸದೆ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜನ ಭಕ್ತಿ ಭಾವದಿಂದ ಶ್ರೀ ಸ್ವಾಮಿಗೆ ನಮಿಸಿದರು. ಭಾರತೀ ಚೌಕದಲ್ಲಿರುವ ಕಟ್ಟೆಬಾಗಿಲು ಗಣಪತಿ  ದೇವಸ್ಥಾನದಲ್ಲಿ ಮಂಗಳಾರತಿ ನೆರವೇರಿಸಿದ ಬಳಿಕ ರಥವನ್ನು ಶ್ರೀ ಮಠದವರೆಗೂ ಎಳೆದು ತರಲಾಯಿತು.

ಸುಮಾರು 399 ವರ್ಷಗಳ ಇತಿಹಾಸವಿರುವ ಈ ರಥೋತ್ಸವವು ಮಹತ್ವಪೂರ್ಣದ್ದಾಗಿದೆ. ಕ್ರಿ.ಶ 1623-1663ರಲ್ಲಿ ಜಗದ್ಗರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಬೆಟ್ಟದಲ್ಲಿ ಭವಾನಿ ಅಮ್ಮನವರನ್ನು ಪ್ರತಿಷ್ಠಾಪಿಸಿದರು. ಅಂದಿನಿಂದ ಭವಾನಿ ಮಲಹಾನಿಕರೇಶ್ವರ ರಥೋತ್ಸವ ನಡೆಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next