Advertisement

High Court: ಮಲಗುಂಡಿ ಸ್ವಚ್ಛತೆ ಪ್ರಕರಣ: ವಿಚಾರಣೆ ವೇಳೆ ಸಿಜೆ ಭಾವುಕ

12:45 AM Jan 04, 2024 | Team Udayavani |

ಬೆಂಗಳೂರು: ನಿಷೇಧ ಇದ್ದರೂ ರಾಜ್ಯದಲ್ಲಿ ಮಲ ಹೊರುವ ಪದ್ಧತಿ ಜೀವಂತವಿರುವ ಬಗ್ಗೆ ಹೈಕೋರ್ಟ್‌ ಕಳವಳ ವ್ಯಕ್ತಪಡಿಸಿದೆ. ಈ ಬಗ್ಗೆ ವಿಚಾರಣೆ ನಡೆಸುವ ವೇಳೆ ನ್ಯಾಯಪೀಠದಲ್ಲಿ ಇದ್ದ ಮುಖ್ಯ ನ್ಯಾ| ಪ್ರಸನ್ನ ಬಿ. ವರಾಲೆ ಅವರು ಗದ್ಗದಿತರಾದ ಘಟನೆಯೂ ಬುಧವಾರ ನಡೆದಿದೆ.

Advertisement

ಮಾಧ್ಯಮ ವರದಿಯನ್ನು ಆಧರಿಸಿ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿದ ಹೈಕೋರ್ಟ್‌ ಈ ಬಗ್ಗೆ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಂಡಿದೆ.
ಬುಧವಾರ ಮು| ನ್ಯಾ| ಪ್ರಸನ್ನ ಬಿ. ವರಾಲೆ ಹಾಗೂ ನ್ಯಾ| ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾ ಗೀಯ ನ್ಯಾಯಪೀಠದ ಕಲಾಪ ಆರಂಭ ವಾಗುತ್ತಿದ್ದಂತೆ, ಮಾಧ್ಯಮ ವರದಿ ಯನ್ನು ಉಲ್ಲೇಖೀಸಿದ ಮುಖ್ಯ ನ್ಯಾಯಮೂರ್ತಿ ಗಳು, ಇದೊಂದು ನಾಚಿಕೆಗೇಡಿನ ಹಾಗೂ ಆತ್ಮಸಾಕ್ಷಿಯನ್ನು ಕೆಣಕುವ ಸಂಗತಿ ಎಂದರು. ವಿಷಯವನ್ನು ಪ್ರಸ್ತಾವಿಸುವಾಗ ಮುಖ್ಯ ನ್ಯಾಯಮೂರ್ತಿಗಳು ಗದ್ಗದಿತರಾದರು.

ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಿದ್ಧಪಡಿಸಿ ಸೋಮವಾರ (ಜ.8)ರಂದು ವಿಚಾರಣೆಗಾಗಿ ನ್ಯಾಯಪೀಠದ ಮುಂದೆ ಮಂಡಿಸುವಂತೆ ರಿಜಿಸ್ಟ್ರಾರ್‌ ಜನರಲ್‌ಗೆ ನಿರ್ದೇಶನ ನೀಡಿದರು.

ಜತೆಗೆ ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೆರವು ನೀಡಲು ವಕೀಲ ಶ್ರೀಧರ ಪ್ರಭು ಅವರನ್ನು “ಅಮಿಕಸ್‌ ಕ್ಯೂರಿ’ (ನೆರವುಗಾರ)ಯನ್ನಾಗಿ ನಿಯೋಜಿಸಿ ವಿಚಾರಣೆ ಮುಂದೂಡಿದರು.

ಆತ್ಮಸಾಕ್ಷಿ ಬಡಿದೆಬ್ಬಿಸುತ್ತದೆ
ಇದಕ್ಕೂ ಮೊದಲು ವಿಷಯ ಪ್ರಸ್ತಾವಿಸಿದ ಮುಖ್ಯ ನ್ಯಾಯಮೂರ್ತಿ, “ಇದೊಂದು ಆಘಾತಕಾರಿ, ಆತಂಕಕಾರಿ, ಕಳವಳಕಾರಿ ಸಂಗತಿ. ಇದು ಪ್ರತಿಯೊಬ್ಬರ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸುತ್ತದೆ. ಸ್ವಾತಂತ್ರ್ಯ ಬಂದು 60 ವರ್ಷ ಕಳೆದರೂ, ನಿರ್ದಿಷ್ಟ ಜಾತಿ-ಸಮುದಾಯದಲ್ಲಿ ಜನಿಸಿದ, ದುರದೃಷ್ಟಕ್ಕೆ ಒಂದು ವರ್ಗ ಮನುಷ್ಯನ ತ್ಯಾಜ್ಯವನ್ನು ಸ್ವತ್ಛಗೊಳಿಸುವ ಕೆಲಸ ಮಾಡಬೇಕಾಗಿದೆ ಎಂದಾದರೆ ಅದು ಮಾನವೀಯತೆಗೆ ನಾಚಿಕೆಗೇಡಿನ ಸಂಗತಿ. ಇಂತಹ ಕಾರಣಕ್ಕೆ ನಾವೆಲ್ಲ ಇಲ್ಲಿ ಇದ್ದೇವೆಯೇ’ ಎಂದು ತೀವ್ರ ನೋವು ವ್ಯಕ್ತಪಡಿಸಿದರು.

Advertisement

“ಯಾರೋ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದ ಮಾತ್ರಕ್ಕೆ ಪ್ರಾಣಿಗಿಂತ ಕೆಟ್ಟ ಬದುಕು ಬದುಕಬೇಕೆ? ನಾವೆಲ್ಲರೂ ದೇವರ ಮಕ್ಕಳೇ? ಇದೇನಿದು? ಇಂದು ಯಂತ್ರೋಪಕರಣಗಳಿದ್ದು, ಮಲಗುಂಡಿ ಸ್ವತ್ಛಗೊಳಿಸಲು ಒಂದು ತಾಸಿಗೆ ಎರಡು ಸಾವಿರ ರೂಪಾಯಿ ವೆಚ್ಚವಾಗುತ್ತದೆಯಷ್ಟೇ? ಹಾಗಿದ್ದೂ ಮನುಷ್ಯರು ಆ ಕೆಲಸ ಮಾಡುತ್ತಾರೆ ಎಂದಾದರೆ ನಾವು ಎಂತಹ ಸಮಾಜದಲ್ಲಿ ಇದ್ದೇವೆ’ ಎಂದು ಮುಖ್ಯ ನ್ಯಾಯಮೂರ್ತಿ ಬೇಸರ ವ್ಯಕ್ತಪಡಿಸಿದರು.

ನ್ಯಾ| ಕೃಷ್ಣ ದೀಕ್ಷಿತ್‌ ಅವರು, ಇದರ ಬಗ್ಗೆ ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್‌ ಸ್ಪಷ್ಟ ಆದೇಶ ನೀಡಿದೆ. ಇದರ ವಿಚಾರವಾಗಿ ಸ್ವತಃ ನಾನೇ ಈ ಹಿಂದೆ ಒಂದು ಆದೇಶ ಕೊಟ್ಟಿದ್ದೇನೆ. ಇದು ಯಂತ್ರಗಳ ಸಮಸ್ಯೆಯಲ್ಲ, ಸಾಮಾಜಿಕ ಮನಸ್ಥಿತಿಯ ಸಮಸ್ಯೆ ಎಂದರು

ಆಗ ಮುಖ್ಯ ನ್ಯಾಯಮೂರ್ತಿಗಳು, ಇದನ್ನೆಲ್ಲ ನೋಡಿದರೆ ನಿದ್ದೆಯೇ ಬರುವುದಿಲ್ಲ. ಎರಡು ತಿಂಗಳ ಹಿಂದೆಯಷ್ಟೇ ಯಶಸ್ವಿ ಚಂದ್ರಯಾನ ಆಗಿದೆ. ತಂತ್ರಜ್ಞಾನದ ಬೆಳವಣಿಗೆಯಿಂದ ನಾವು ಚಂದ್ರನ ಮೇಲೆ ತಲುಪಿದ್ದೇವೆ. ಆದರೆ ಮತ್ತೂಂದು ಕಡೆ ಒಂದು ವರ್ಗವನ್ನು ನಾವು ತುಂಬಾ ಕೀಳಾಗಿ ಕಾಣುತ್ತಿದ್ದೇವೆ. ನಮ್ಮ ಸಹೋದರನ್ನು ಮನುಷ್ಯರಾಗಿ ನಾವು ಕಾಣುತ್ತಿಲ್ಲ ಎಂದು ವೇದನೆ ಹೊರಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next