ಮುಂಬಯಿ: ಆಧ್ಯಾತ್ಮಿಕ ನಂಬಿಕೆಯುಳ್ಳ ಅವಿಭಜಿತ ದಕ್ಷಿಣ ಕನ್ನಡಿಗರು ಎಲ್ಲೆಯೂ ನೆರೆಯೂರಿದರೂ ಧಾರ್ಮಿಕವಾಗಿ ತಾವು ಬೆಳೆದು ಇತರರನ್ನು ಆಧ್ಯಾತ್ಮಿಕ ಚಿಂತನೆಗೆ ಆಕರ್ಷಿಸುವ ಗುಣವುಳ್ಳವರು. ಧಾರ್ಮಿಕ ಕ್ಷೇತ್ರವಾದ ಈ ಶನಿ ಮಂದಿರವು ಜಾತಿಯುತ ಭೇದವಿಲ್ಲದೆ ಸದ್ಭಕ್ತಿಯಿಂದ ವಿಜೃಂಭಣೆಯಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸ್ತುತ್ಯರ್ಹ ಎಂದು ಬಂಟರ ಸಂಘ ಮುಂಬಯಿ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಡಾ| ಆರ್. ಕೆ. ಶೆಟ್ಟಿಯವರು ನುಡಿದರು.
ಫೆ. 10 ರಂದು ಮಲಾಡ್ ಪೂರ್ವದ ಕುರಾರ್ ವಿಲೇಜ್‌ನ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ 44 ನೇ ವಾರ್ಷಿಕ ಮಹಾಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಇವರು, ಹಿರಿಯ ಧಾರ್ಮಿಕ ಚಿಂತಕರು ಆಧ್ಯಾತ್ಮಿಕವಾಗಿ ಈ ಪರಿಸರದಲ್ಲಿ ತೊಡಗಿಸಿಕೊಂಡು, ಇಂದು ಈ ಕ್ಷೇತ್ರ ಮಲಾಡ್ ಪರಿಸರದಲ್ಲಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿ ಕಂಗೊಳಿಸುತ್ತಿದೆ. ದೇವರ ಪ್ರಸಾದ ನೀಡಿ ಅತಿಥಿಗಳನ್ನು ಸಮ್ಮಾನಿಸಿರುವುದು ಈ ಕ್ಷೇತ್ರದ ವಿಶೇಷತೆಯಾಗಿದೆ. ಈ ಕ್ಷೇತ್ರದಲ್ಲಿ ಧಾರ್ಮಿಕ, ಸಾಮಾಜಿಕ ಕೈಂಕರ್ಯಗಳು ನಿರಂತರವಾಗಿ ನಡೆಯುತ್ತಿರಲಿ ಎಂದರು.
ಇನ್ನೋರ್ವ ಧಾರ್ಮಿಕ ಚಿಂತಕ ಅಸಲ್ಫಾ ಶ್ರೀ ಗೀತಾಂಬಿಕಾ ಮಂದಿರದ ಅಧ್ಯಕ್ಷ, ಉದ್ಯಮಿ, ಸಮಾಜ ಸೇವಕ ಕಡಂದಲೆ ಸುರೇಶ್ ಭಂಡಾರಿ ಮಾತನಾಡಿ, ನಮ್ಮ ದೈನಂದಿನ ಬದುಕಿನ ಜಡತ್ವವನ್ನು ನೀಗಿ ನಮ್ಮಲ್ಲಿ ಚೈತನ್ಯ ನೀಡುವ ಶಕ್ತಿಯೆ ಧಾರ್ಮಿಕತೆ. ಧಾರ್ಮಿಕ ಸೇವೆಯ ಜೊತೆಗೆ ಹಿರಿಯರು ಈ ಕ್ಷೇತ್ರದಲ್ಲಿ ಸಾಮಾಜಿಕ, ಸಂಸ್ಕೃತಿ-ಸಂಸ್ಕಾರ ಉಳಿಸುವ ಮೂಲಕ ಧರ್ಮವನ್ನು ಭದ್ರಪಡಿಸಿದ್ದಾರೆ. ಧರ್ಮ ಆತ್ಮಕ್ಕೆ ಔಷಧಿಯಾದರೆ, ಹಣ ದೇಹಕ್ಕೆ ಸಂಬಂಧಿಸಿದ್ದು, ಶನಿದೇವರು ಮುಂದಿನ ಜನ್ಮಕ್ಕೂ ಸುಖ, ಶಾಂತಿ ನೀಡುವಂತಹ ದೈವಾತ್ಮ. ಮಹಾನಗರದಲ್ಲಿ ಅವಿಭಜಿತ ದಕ್ಷಿಣ ಕನ್ನಡಿಗರ ನೂರಾರು ಮಂದಿರ, ದೈವಸ್ಥಾನಗಳಿದ್ದು, ಅವೆಲ್ಲವೂ ಮನುಕುಲಕ್ಕೆ ಒಳ್ಳೆಯ ಕೆಲಸವನ್ನು ಮಾಡಲಿ. ಇತ್ತೀಚೆಗೆ ಬಿಡುಗಡೆಗೊಂಡ ಅಂಬರ್ ಕ್ಯಾಟರರ್ ಚಲನಚಿತ್ರದ ಬಗ್ಗೆ ಥಿಯೇಟರ್ ಮಾಲಿಕರು ದಿನಂಪ್ರತಿ ಶೋಗಳನ್ನು ನಿರಾಕರಿಸುವ ಮಲತಾಯಿ ಧೋರಣೆಯ ಬಗ್ಗೆ ವಿಷಾಧ ವ್ಯಕ್ತಪಡಿಸಿದ ಅವರು, ಇದರ ಬಗ್ಗೆ ತುಳು-ಕನ್ನಡ, ಜಾತೀಯ ಸಂಘಟನೆಗಳು ಒಗ್ಗಟ್ಟಾಗಿ ಆಂಧೋಲನ ನಡೆಸುವ ಬಗ್ಗೆ ಮನವಿ ಮಾಡಿದರು.
ಪ್ರಾರಂಭದಲ್ಲಿ ಮಹಿಳಾ ವಿಭಾಗದ ಸದಸ್ಯೆಯರು ಪ್ರಾರ್ಥನೆಗೈದರು. ಗಣ್ಯರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಗೌರವ ಅತಿಥಿಯಾಗಿ ಭಾರತ್ ಬ್ಯಾಂಕಿನ ನಿರ್ದೇಶಕ ಗಂಗಾಧರ ಜೆ. ಪೂಜಾರಿ ಉಪಸ್ಥಿತರಿದ್ದರು. ಸಮಿತಿಯ ಗೌರವ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಕೋಶಾಧಿಕಾರಿ ಹರೀಶ್ ಸಾಲ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೀತಲ್ ಕೋಟ್ಯಾನ್, ಮಂದಿರದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾರಾಯಣ ಶೆಟ್ಟಿ, ಸಮ್ಮಾನಿತರಾದ ಮುದ್ರಾಡಿ ದಿವಾಕರ ಶೆಟ್ಟಿ, ಹರೀಶ್ ಎನ್. ಶೆಟ್ಟಿ, ಡಾ| ಜಿ. ಪಿ. ಕುಸುಮಾ, ಸಮಿತಿಯ ಹಿರಿಯ ಸದಸ್ಯರುಗಳಾದ ರವೀಂದ್ರ ಶೆಟ್ಟಿ ಬಜೆಗೋಳಿ, ರಾಮಕೃಷ್ಣ ಶೆಟ್ಟಿಯಾನ್, ಚಂದ್ರಶೇಖರ ಸಾಲ್ಯಾನ್, ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ ಶೆಟ್ಟಿ, ಉಪಾಧ್ಯಕ್ಷ ಎಂ. ಡಿ. ಬಿಲ್ಲವ ಉಪಸ್ಥಿತರಿದ್ದರು.
ಕಾರ್ಯಕಾರಿ ಸಮಿತಿಯ ಸದಸ್ಯರು ಸಹಕರಿಸಿದರು. ಪತ್ರಕರ್ತ ದಿನೇಶ್ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು. ಮಾಜಿ ಅಧ್ಯಕ್ಷ ಬಾಬು ಜತ್ತನ್ ವಂದಿಸಿದರು. ಸಮಿತಿಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡಿತು. ಕೃಷ್ಣರಾಜ್ ಶೆಟ್ಟಿ ಮುಂಡ್ಕೂರು ನಿರ್ದೇಶನದಲ್ಲಿ, ಮರಾಠಿಯ ತುಳು ಅನುವಾದಿತ ಈ ರಾತ್ರೆಗ್ ಪಗೆಲ್Y ಯಾನ್ ತುಳು ನಾಟಕ ಪ್ರದರ್ಶನಗೊಂಡಿತು. ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಗಣಹೋಮ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಅನ್ನದಾನ, ಶನಿಗ್ರಂಥ ಪಾರಾಯಣ, ಶನಿಮಹಾಪೂಜೆ ಮೊದಲಾದ ಕಾರ್ಯಕ್ರಮಗಳು ಜರಗಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಆಧ್ಯಾತ್ಮಿಕ ಚಿಂತನೆ ಇಂದು ಶ್ರೀಕ್ಷೇತ್ರದಲ್ಲಿ ಶ್ರೇಷ್ಟವಾಗಿ ಮೂಡಿಬಂದಿದೆ. ಅದಕ್ಕೂ ಇಂದು ನಡೆದ ಪ್ರತಿಯೊಂದು ಕಾರ್ಯಕ್ರಮ ಅಚ್ಚುಕಟ್ಟುತನವೇ ಸಾಕ್ಷಿಯಾಗಿದೆ. ಭಕ್ತಾದಿ ಉತ್ಸಾಹ, ಹುರುಪು, ಎಲ್ಲಾ ವಿಧದ ಸಹಾಯ ಈ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿದೆ. ಸುಮಾರು ಏಳು ಸಾವಿರ ಜನರಿಗೆ ಇಂದು ಅನ್ನದಾನ ನೀಡುವ ಮೂಲಕ ಸದ್ಭಕ್ತರು ಹೆಗಲಿಗೆ ಹೆಗಲು ಕೊಟ್ಟು ಸಹಕರಿಸಿದ್ದಾರೆ. ಯುವಜನ, ಮಕ್ಕಳನ್ನು ಆಧ್ಯಾತ್ಮಿಕವಾಗಿ ಕೊಂಡೊಯ್ಯುವ ದೃಷ್ಟಿಯಿಂದ ಅಖಂಡ ಹರಿನಾಮ ಭಜನೆ, ಮಹಿಳೆಯರಿಗೆ ಪಾಕಸ್ಪರ್ಧೆ, ಆಟೋಟ, ಶೈಕ್ಷಣಿಕ, ವೈದ್ಯಕೀಯ ಸೌಲಭ್ಯಗಳನ್ನು ಈ ಕ್ಷೇತ್ರದಿಂದ ಆಯೋಜಿಸುತ್ತಿದ್ದು, ಮುಂದಿನ ವರ್ಷ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಸಹಕಾರವಿತ್ತು, ಸಮಾಜ ಸೇವೆಯೂ ಜೊತೆಗೆ ಧಾರ್ಮಿಕತೆಯ ಉನ್ನತಿಗೆ ಸಹಕರಿಸಬೇಕು
ಶ್ರೀನಿವಾಸ ಪಿ. ಸಾಫಲ್ಯ (ಅಧ್ಯಕ್ಷರು : ಶ್ರೀ ಶನಿಮಹಾತ್ಮ ಪೂಜಾ ಸಮಿತಿ ಮಲಾಡ್).
ಚಿತ್ರ-ವರದಿ : ರಮೇಶ್ ಉದ್ಯಾವರ