ಮುಂಬಯಿ: ಮಲಾಡ್ ಕನ್ನಡ ಸಂಘದ ವಾರ್ಷಿಕ ವಿಹಾರ ಕೂಟವು ಜ. 13 ರಂದು ಮಾರ್ವೆ ಮಡ್‌ರೋಡ್‌ನ ದೇಶ್ಪಾಂಡೆ ವಿಲ್ಹಾ ಇಲ್ಲಿ ವಿವಿಧ ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳೊಂದಿಗೆ ಜರಗಿತು.
ದಿನವಿಡೀ ಜರಗಿದ ವಿವಿಧ ವಿವಿಧ ಆಟೋಟ ಸ್ಪರ್ಧೆ ಹಾಗೂ ವಿವಿಧ ಮನೋರಂಜನೆ, ಊಟೋಪಚಾರದ ಆನಂತರ ಸಂಜೆ ಸ್ಥಳೀಯ ಗಣ್ಯರ ಉಪಸ್ಥಿತಿಯೊಂದಿಗೆ ಮಲಾಡ್ ಕನ್ನಡ ಸಂಘದ ಅಧ್ಯಕ್ಷ ಹರೀಶ್ ಎನ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ವಿಹಾರಕೂಟದ ಸದಸ್ಯರಿಗೆ ಅಭಿನಂದನ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸದಸ್ಯರಿಗೆ, ಮಕ್ಕಳಿಗೆ ಬಹುಮಾನ ವಿತರಣ ಕಾರ್ಯಕ್ರಮ ನಡೆಯಿತು.
ಸದಸ್ಯರನ್ನು ಉದ್ಧೇಶಿಸಿ ಮಾತನಾಡಿದ ಅಧ್ಯಕ್ಷ ಹರೀಶ್ ಎನ್. ಶೆಟ್ಟಿ ಅವರು, ಸದಸ್ಯರಿಗೆ, ಮಕ್ಕಳಿಗೆ, ಮಹಾನಗರದ ಯಾಂತ್ರಿಕ ಜೀವನದಲ್ಲಿ ವಿರಾಮಮಕ್ಕಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಎಲ್ಲರೂ ಒಂದಾಗಿ ಸಂತೋಷದಿಂದ ಪ್ರಶಾಂತ ವಾತಾವರಣದಲ್ಲಿ ಕಾಲ ಕಳೆದಿದ್ದಾರೆ. ಮಕ್ಕಳು ಹಲವಾರು ಹಿರಿಯ ಸದಸ್ಯರು, ಯುವಕರನ್ನು ಮೀರಿಸುವಂತಹ ವಿವಿಧ ಕ್ರೀಡೆಯಲ್ಲಿ ಭಾಗವಹಿಸಿದ್ದಾರೆ. ಇದೊಂದು, ಪ್ರೀತಿ, ಸೌಹಾರ್ಧತೆಯ ಕೂಟ. ಸಂಘದ ಕಾರ್ಯಕ್ರಮಗಳಲ್ಲಿ ಇನ್ನು ಹೆಚ್ಚಿನ ಪ್ರೋತ್ಸಾಹ, ಉತ್ಸಾಹದಿಂದ ಭಾಗವಹಿಸಬೇಕು. ಮಲಾಡ್ ಪ್ರದೇಶಕ ವಿಶಾಲ ಪ್ರದೇಶದಲ್ಲಿ ತುಳು-ಕನ್ನಡಿಗರ ನೋವು-ನಲಿವಿಗಾಗಿ ಸದಾ ಸ್ಪಂದಿಸುತ್ತಿರುವ ಮಲಾಡ್ ಕನ್ನಡ ಸಂಘಕ್ಕೆ ಇನ್ನಷ್ಟು ಸದಸ್ಯರು ಜೊತೆಗೂಡಿ ಸಹಾಯ ಹಸ್ತ ನೀಡುವ ಮೂಲಕ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ದುಡಿಯುವ ಸಂಸ್ಥೆಗೆ ಬೆನ್ನೆಲುಬಾಗಬೇಕು ಎಂದು ಹೇಳಿ ವಿಹಾರಕೂಟಕ್ಕೆ ಸಹಕಾರ ನೀಡಿ ಸರ್ವ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉದ್ಯಮಿ, ಗಾಣಿಗ ಸಮಾಜದ ಉಪಾಧ್ಯಕ್ಷ ಬಿ. ವಿ. ರಾವ್ ಅವರು ಮಾತನಾಡಿ, ವಿಹಾರಕೂಟವು ಯಾಂತ್ರಿಕ ಜೀವನದಲ್ಲಿ ಸಂತೋಷ, ವಿನಿಮಯ ಸಮಯ. ಪ್ರತಿನಿತ್ಯ ಜೀವನದ ಅಡಚಣೆಯಲ್ಲಿ ಮನುಷ್ಯ ಮಾನಸಿಕವಾಗಿ ಅಸಹಾಯಕತೆಯಲ್ಲಿ ಇಂತಹ ವಿಹಾರ ಕೂಟಗಳು ನೆಮ್ಮದಿಯ ಜೊತೆಗೆ ನಮ್ಮ ಸಮಸ್ಯೆಗಳನ್ನೂ ವಿನಿಮಯಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಇದೊಂದು ಶುಭ ಸಂದರ್ಭ. ಮಲಾಡ್ ಕನ್ನಡ ಸಂಘದ ಪ್ರತಿಯೊಂದು ಕಾರ್ಯಕ್ರಮವು ವೈವಿಧ್ಯತೆಯಿಂದ ಕೂಡಿದ್ದು, ಒಂದು ಜನಾಕರ್ಷಣೆಯ ಸಂಸ್ಥೆಯಾಗಿ ಬೆಳೆಯುತ್ತಿದೆ ಎಂದರು.
ಸ್ಥಳೀಯ ಉದ್ಯಮಿ, ಸಮಾಜ ಸೇವಕರಾದ ಜೋಸೆಫ್ ರೊಡ್ರಿಗಸ್ ಮತ್ತು ಏರ್ ಇಂಡಿಯಾ ನಿವೃತ್ತ ಎಂಜಿನೀಯರ್ ಮರಿಮುತ್ತು ಅವರು ಉಪಸ್ಥಿತರಿದ್ದು ಮಲಾಡ್ ಕನ್ನಡ ಸಂಘದ ಕಾರ್ಯಸಾಧನೆಯನ್ನು ಶ್ಲಾಘಿಸಿ ಶುಭಹಾರೈಸಿದರು.
ಗೌರವ ಕಾರ್ಯದರ್ಶಿ ಶಂಕರ ಡಿ. ಪೂಜಾರಿ ಅವರು ಸ್ವಾಗತಿಸಿ ಮಾತನಾಡಿ, ಸಾಂಘಿಕವಾಗಿ ಹಾಗೂ ಅನ್ಯೋನ್ಯತೆ, ಸೌಹಾರ್ಧಯುತವಾಗಿ ಬದುಕನ್ನು ನಮ್ಮದಾಗಿಸಿಕೊಳ್ಳಬೇಕು. ಮಲಾಡ್ ಕನ್ನಡ ಸಂಘದಿಂದ ದಾನಿಗಳಿಂದ ದೊರೆಯುವ ಸೌಲಭ್ಯವನ್ನು ತನ್ನದಾಗಿಸಿಕೊಳ್ಳುವ ಮೂಲಕ ಸಂಘದ ಪ್ರತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸಂಘದ ಕೀರ್ತಿ ಪತಾಕೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ನಾವೆಲ್ಲರು ಸಹಕರಿಸಬೇಕು ಎಂದು ನುಡಿದು ವಂದಿಸಿದರು.
ಯುವ ವಿಭಾಗದ ಮಾಜಿ ಕಾರ್ಯಾಧ್ಯಕ್ಷ ಸೂರಪ್ಪ ಕುಂದರ್ ವಿವಿಧ ಮನೋರಂಜನ, ಕ್ರೀಡಾ ಕಾರ್ಯಕ್ರಮದಲ್ಲಿ ಸಹಕರಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ಶಾಂಭವಿ ಬಿ. ಶೆಟ್ಟಿ ಬಹುಮಾನ ವಿಜೇತರ ಯಾದಿಯನ್ನು ಓದಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಬಾಲಕೃಷ್ಣ ಬಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತಿ ಬಾಲಚಂದ್ರ ರಾವ್, ಗೌರವ ಕೋಶಾಧಿಕಾರಿ ಪ್ರಕಾಶ್ ಎಸ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್ ಡಿ. ಪೂಜಾರಿ, ಜತೆ ಕೋಶಾಧಿಕಾರಿ ಶಂಕರ ಆರ್. ಶೆಟ್ಟಿ, ಜತೆ ಕಾರ್ಯದರ್ಶಿ ಅನಿತಾ ಎಸ್. ಪೂಜಾರಿ ಉಪಸ್ಥಿತರಿದ್ದರು. ಯುವ ವಿಭಾಗದ ಕಾರ್ಯದರ್ಶಿ ಶಂಕರ ಎಚ್. ಪೂಜಾರಿ ಮತ್ತು ಸದಸ್ಯರು ವಿಹಾರಕೂಟದ ಯಶಸ್ಸಿಗೆ ಸಹಕರಿಸಿದರು.
ತ್ರ-ವರದಿ: ರಮೇಶ್ ಉದ್ಯಾವರ