Advertisement

ಮಾಳ ಅಪಘಾತ ಗಾಯಾಳುಗಳು ಮೈಸೂರಿಗೆ

10:01 AM Feb 18, 2020 | sudhir |

ಕಾರ್ಕಳ: ಮಾಳದ ಬಳಿ ಶನಿವಾರ ನಡೆದ ಬಸ್‌ ಅಪಘಾತದಲ್ಲಿ ಗಾಯಗೊಂಡು ಕಾರ್ಕಳದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳನ್ನು ಫೆ. 16ರಂದು ಮೈಸೂರು ಆಸ್ಪತ್ರೆಗೆ ವರ್ಗಾಯಿಸಲಾಗಿದೆ.

Advertisement

ಮೈಸೂರಿನ ಸೆಂಚುರಿ ವೈಟಲ್‌ ರೆಕಾರ್ಡ್ಸ್‌ ಕಂಪೆನಿಯ 35 ಮಂದಿ ಸಿಬಂದಿ ಮೈಸೂರಿನಿಂದ ಕುದುರೆಮುಖವಾಗಿ ಮಂಗಳೂರಿಗೆ ಸಾಗುತ್ತಿದ್ದ ವೇಳೆ ಈ ಅವಘಡ ನಡೆದಿದ್ದು, ಬಸ್‌ನಲ್ಲಿದ್ದ ಮೂವರು ಚಾಲಕರು, ಇಬ್ಬರು ಅಡುಗೆ ಸಿಬಂದಿ ಸೇರಿದಂತೆ ಕಂಪೆನಿಯ ನಾಲ್ವರು ಸಾವಿಗೀಡಾಗಿದ್ದರು.

ಮೃತಪಟ್ಟಿರುವ ಮೈಸೂರಿನ ಯೋಗೀಂದ್ರ ಆರ್‌. (24), ರಕ್ಷಿತಾ (27), ಅನುಜ್ಞಾ (26), ಶ್ರೀರಂಗಪಟ್ಟಣದ ವಿನುತಾ ವಿ. (28), ನಂಜನಗೂಡಿನ ಬಸವರಾಜ್‌ (24), ಮಹೇಶ್‌ ಹಾಗೂ ಮೈಸೂರಿನ ಪ್ರೀತಂ ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಬಿಟ್ಟುಕೊಡಲಾಯಿತು. ರಾಧಾರವಿ ಮತ್ತು ಮಾರುತಿ ಮೃತದೇಹದ ಮರಣೋತ್ತರ ಪರೀಕ್ಷೆ ಆಗಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುಗಳು ಚೇತರಿಕೆ
ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದು, ಕೆಲವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ, ಇನ್ನು ಕೆಲವರು ಮೈಸೂರಿನ ಆಸ್ಪತ್ರೆಗೆ ವರ್ಗಾವಣೆಗೊಂಡಿದ್ದಾರೆ.

ಸರಕಾರ ಪರಿಹಾರ ನೀಡಲಿ
ಇಂತಹ ಭೀಕರ ಅಪಘಾತದ ಸಂದರ್ಭ ಸರಕಾರ ಪರಿಹಾರ ಮೊತ್ತ ಘೋಷಣೆ ಮಾಡಬೇಕಿತ್ತು ಎಂದು ಗಾಯಾಳುಗಳನ್ನು ನೋಡಲು ಆಗಮಿಸಿದ್ದ ಮೈಸೂರು ಮೂಲದ ವಕೀಲರೋರ್ವರು ಅಭಿಪ್ರಾಯಪಟ್ಟರು.

Advertisement

ಕೃತಜ್ಞತೆ ಅರ್ಪಿಸಿದ ಗಾಯಾಳು
ಕಾರ್ಕಳದಲ್ಲಿ ವೈದ್ಯರು, ಆಸ್ಪತ್ರೆ ಸಿಬಂದಿ, ಪೊಲೀಸ್‌, ಕಂದಾಯ ಸಹಿತ ಎಲ್ಲ ಇಲಾಖೆಯವರು ಸಹಕರಿಸಿದ್ದಾರೆ. ಮಾತ್ರವಲ್ಲದೆ ಈ ಊರಿನ ಜನತೆ ಬಂಧುಗಳೆಂಬಂತೆ ನಮ್ಮನ್ನು ಕಂಡು ಉಪಚರಿಸಿದ್ದಾರೆ. ಕಷ್ಟ ಕಾಲದಲ್ಲಿ ನೀಡಿದ ನೆರವನ್ನು ಮರೆಯಲಾರೆವು ಎಂದು ಗಾಯಾಳು ನಂಜುಂಡಸ್ವಾಮಿ ಹೇಳಿದರು.

ನಿಧಾನವಾಗಿ ಹೋಗಲು ಹೇಳಿದ್ದೆವು
ಉಡುಪಿ -ಮಂಗಳೂರಿಗೆ ಪ್ರವಾಸ ಹೋಗುವವರಿದ್ದೆವು. ಮೈಸೂರಿನಿಂದ ಹೊರನಾಡು ತಲುಪಿ ಅಲ್ಲಿಂದ ಶನಿವಾರ ಬೆಳಗ್ಗೆ 11.30ರ ವೇಳೆ
ಹೊರಟಿದ್ದೆವು. ಬಸ್‌ ವೇಗವಾಗಿ ಸಾಗುತ್ತಿರುವುದನ್ನು ಕಂಡು ಚಾಲಕರಲ್ಲಿ ನಿಧಾನವಾಗಿ ಚಲಾಯಿಸುವಂತೆ ಕೆಲವರು ಸೂಚಿಸಿದ್ದರು. ಈ ದಾರಿಯಲ್ಲಿ ಹಲವಾರು ತಿರುವುಗಳೂ ಇದ್ದವು. ಬಸ್‌ ವೇಗಕ್ಕೆ ಸೀಟ್‌ನಲ್ಲಿದ್ದ ಆಹಾರ ಪೊಟ್ಟಣ ಕೆಳಗಡೆ ಬಿದ್ದಿರುವುದು ನನಗೆ ಗೊತ್ತಿದೆ. ಬೇರೇನೂ ನನಗೆ ನೆನಪಾಗುತ್ತಿಲ್ಲ. ಈಗ ನನ್ನ ಸಹೋದ್ಯೋಗಿಗಳನ್ನು ಕಳೆದುಕೊಂಡಿದ್ದೇವೆ ಎಂದು ಗದ್ಗದಿತರಾದರು ಗಾಯಾಳು ಮೈಸೂರಿನ ವಿದ್ಯಾ.

Advertisement

Udayavani is now on Telegram. Click here to join our channel and stay updated with the latest news.

Next