Advertisement

ಕಡ್ಡಾಯ ಆನ್‌ಲೈನ್‌ ಬೋಧನೆಯತ್ತ ದಾಪುಗಾಲು

12:54 AM May 31, 2020 | Sriram |

ಬೆಂಗಳೂರು: ಕೋವಿಡ್-19 ಪರಿಸ್ಥಿತಿ ತಿಳಿಯಾದ ಅನಂತರವೂ ಪದವಿ ಶಿಕ್ಷಣದಲ್ಲಿ ಆನ್‌ಲೈನ್‌ ಬೋಧನೆ ಮತ್ತು ಕಲಿಕೆ ವ್ಯವಸ್ಥೆಯನ್ನು ಸಮರ್ಪಕವಾಗಿ ಮುಂದುವರಿಸಲು ಸರಕಾರವು ಗಂಭೀರ ಚಿಂತನೆ ನಡೆಸುತ್ತಿದೆ.

Advertisement

ಆನ್‌ಲೈನ್‌ ಶಿಕ್ಷಣದಿಂದ ವೆಚ್ಚ ಕಡಿಮೆ ಮಾಡಬಹುದು ಎಂಬುದಾಗಿ ತಜ್ಞರು ಉನ್ನತ ಶಿಕ್ಷಣ ಇಲಾಖೆಗೆ ಮಾಹಿತಿ ಒದಗಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ತರಗತಿ ಶಿಕ್ಷಣದ ಜತೆಗೆ ಆನ್‌ಲೈನ್‌ ಬೋಧನೆಯನ್ನು ಕಡ್ಡಾಯ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಉನ್ನತ ಮೂಲವೊಂದು “ಉದಯವಾಣಿ’ಗೆ ಖಚಿತಪಡಿಸಿದೆ.

ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್‌ ಮತ್ತು ರೀಚಾರ್ಜ್‌ ಸಮಸ್ಯೆ ಇದೆ ಎಂಬುದನ್ನು ಹೊರತು ಪಡಿಸಿದರೆ ಉಳಿದಂತೆ ಆನ್‌ಲೈನ್‌ ಬೋಧನೆಯನ್ನು ಸುಲಭವಾಗಿ ನಿರ್ವಹಣೆ ಮಾಡಬಹುದಾಗಿದೆ. ಆನ್‌ಲೈನ್‌ ಬೋಧನೆಯನ್ನು ಶಿಕ್ಷಣದ ಒಂದು ಭಾಗವಾಗಿ ಮುಂದುವರಿಸುವ ಬಗ್ಗೆ ಪ್ರಸ್ತಾವನೆಗಳು ಸಿದ್ಧವಾಗುತ್ತಿವೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ರಾಜ್ಯದ ಸರಕಾರಿ, ಖಾಸಗಿ ಮತ್ತು ಡೀಮ್ಡ್ ವಿ.ವಿ.ಗಳಲ್ಲಿ ಆನ್‌ಲೈನ್‌ ಬೋಧನೆ ನಡೆಯುತ್ತಿದೆ. ಅಲ್ಲದೆ ಸರಕಾರಿ ಪದವಿ ಕಾಲೇಜುಗಳಲ್ಲೂ ಆನ್‌ಲೈನ್‌ ಬೋಧನೆ ಮತ್ತು ಕೆಲವು ಸರಕಾರಿ ವೆಬ್‌ಸೈಟ್‌ ಮೂಲಕ ಕಲಿಕಾ ಸಾಮಗ್ರಿ ಒದಗಿಸಲಾಗುತ್ತಿದೆ. ಇದನ್ನೇ ಇನ್ನಷ್ಟು ಅಭಿವೃದ್ಧಿಪಡಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅನುಷ್ಠಾನ ಹೇಗೆ?
ಇದನ್ನು ಒಂದೇಟಿಗೆ ಅನುಷ್ಠಾನ ಮಾಡುವುದಿಲ್ಲ. ಈಗಾಗಲೇ ಪ್ರವೇಶ ಪ್ರಕ್ರಿಯೆ, ಫ‌ಲಿತಾಂಶ ಪ್ರಕಟನೆ ಆನ್‌ಲೈನ್‌ ಆಗಿವೆ. ಬೋಧನೆಯನ್ನು ಹಂತಹಂತವಾಗಿ ಅನುಷ್ಠಾನಿಸಲಾಗುತ್ತದೆ. ಶೇ.20ರಷ್ಟು ಅಳವಡಿಸಿಕೊಂಡರೂ ಅನುಕೂಲವಿದೆ. ಕೆಲವು ವಿಷಯಗಳಿಗೆ ತರಗತಿ ಬೋಧನೆಯೇ ಬೇಕಿದ್ದು, ಮುಂದುವರಿಸಲಾಗುತ್ತದೆ ಎಂದು ವಿ.ವಿ. ಉಪಕುಲಪತಿಯೊಬ್ಬರು ವಿವರ ನೀಡಿದ್ದಾರೆ.

Advertisement

ಆನ್‌ಲೈನ್‌ ಶಿಕ್ಷಣವು ಭವಿಷ್ಯದ
ಶಿಕ್ಷಣ ಪದ್ಧತಿ. ಪೂರ್ಣ ಪ್ರಮಾಣದಲ್ಲಿ ಅಲ್ಲವಾದರೂ ಸ್ವಲ್ಪ ಮಟ್ಟಿಗೆ ಅನುಷ್ಠಾನ ಮಾಡಿಕೊಳ್ಳಲೇಬೇಕಾಗುತ್ತದೆ. ಕೋವಿಡ್-19 ಕಾರಣದಿಂದ ಆನ್‌ಲೈನ್‌ ತರಗತಿಗಳು ಆರಂಭವಾಗಿ ಸಾಕಷ್ಟು ಸುಧಾರಣೆಯಾಗಿದೆ. ಸರಕಾರವು ಇನ್ನಷ್ಟು ಸಮರ್ಪಕವಾಗಿ ಇದನ್ನು ಅನುಷ್ಠಾನ ಮಾಡಿದರೆ ಉಪಯೋಗ ಹೆಚ್ಚಿದೆ. ಆನ್‌ಲೈನ್‌ ಬೋಧನೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಗತ್ಯವಾಗಬಹುದು.
ಪ್ರೊ| ಕೆ.ಆರ್‌. ವೇಣುಗೋಪಾಲ್‌,
ಬೆಂಗಳೂರು ವಿ.ವಿ. ಉಪಕುಲಪತಿ

Advertisement

Udayavani is now on Telegram. Click here to join our channel and stay updated with the latest news.

Next