ನಮ್ಮ ಜೀವಿತ ಕಾಲದಲ್ಲಿ ನಾವು ಎಷ್ಟೇ ಜೀವನಾನುಭವಗಳನ್ನು ಪಡೆದುಕೊಂಡರೂ ಅದು ನಮ್ಮಲ್ಲಿಗೇ ಮುಕ್ತಾಯವಾಗುತ್ತದೆ ಎನ್ನುವುದೇ ನಮ್ಮ ಬದುಕಿನ ಬಹಳ ದೊಡ್ಡ ವೈಚಿತ್ರ್ಯ. ಅನುಭವ ಮುಂದಿನ ಪೀಳಿಗೆಗೆ ದಾಟುವುದಿಲ್ಲ. ಬಿಸಿಯಾದ ಪಾತ್ರೆಯನ್ನು ಮುಟ್ಟಿದರೆ ಸುಡುತ್ತದೆ ಎನ್ನುವ ಅನುಭವವನ್ನು ನಮ್ಮ ಮಗು ತಾನು ಹುಟ್ಟಿದ ಬಳಿಕ ತಾನೇ ಅನುಭವಿಸಿ ಪಡೆದುಕೊಳ್ಳಬೇಕಷ್ಟೇ. ಇರುವೆ ಕಚ್ಚುತ್ತದೆ ಎನ್ನುವ ಅನುಭವ ನಮ್ಮಿಂದ ನಮ್ಮ ಮಕ್ಕಳಿಗೆ ದಾಟುವುದಿಲ್ಲ. ಅದನ್ನು ಅವರೇ ಅನುಭವಿಸಿ ತಿಳಿಯಬೇಕು. ಜೀವನಾನುಭವ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಹರಿದು ಬರುವುದಿಲ್ಲ.
ನಮ್ಮ ಜೀವಿತದಲ್ಲಿಯೇ, ಇಂದು ಬಹಳ ಪ್ರಾಮುಖ್ಯ, ಮಹತ್ತರವಾಗಿ ಕಾಣಿಸಿದ್ದು ಕೆಲವು ವರ್ಷಗಳ ಬಳಿಕ ಅತ್ಯಂತ ಕ್ಷುಲ್ಲಕ ಎಂದು ನಮಗೇ ಅನ್ನಿಸಿಬಿಡಬಹುದು. ಬದುಕಿನ ಯಾವುದೋ ಒಂದು ಕಾಲ ಘಟ್ಟದಲ್ಲಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಹಲವು ವರ್ಷಗಳ ಬಳಿಕ ನಮಗೆ ಪಶ್ಚಾತ್ತಾಪ ಆಗ ಬಹುದು, ನಗು ಬರ ಬಹುದು, ಅಸಹ್ಯ ಅನ್ನಿಸ ಬಹುದು. ಜೀವನದಲ್ಲಿ ಅನುಭವ ಗಳಿಸುತ್ತ ಹೋದಂತೆ ವ್ಯಕ್ತಿತ್ವ ಮಾಗು ತ್ತದೆ. ಹೀಗಾಗಿಯೇ “ಸತ್ಯದ ಗುಣಲಕ್ಷಣವೇನು’ ಎಂಬ ಪ್ರಶ್ನೆಗೆ ಶ್ರೀಕೃಷ್ಣ “ಅಮೃತದಂತೆ ಕಾಣಿಸಿದ್ದು ವಿಷವಾಗಿರಬಹುದು, ವಿಷದಂತೆ ಕಂಡು ಬಂದದ್ದು ಅಮೃತವಾಗಿರಬಹುದು’ ಎಂದದ್ದು. ನಾವೆಲ್ಲ ಜೀವನಾನುಭವ ಗಳಿಸಿ ಮಾಗುವ ಹೊತ್ತಿಗೆ ಬಹಳ ತಡವಾಗಿರುತ್ತದೆ. ಅಂದರೆ ವಯಸ್ಸಾಗಿರುತ್ತದೆ. ಅದು ಗಳಿಸಿದ ಜೀವನಾನುಭವ ಹೆಚ್ಚು ಪ್ರಯೋಜನಕ್ಕೆ ಬಾರದ ಹೊತ್ತು.
ಇದಕ್ಕಾಗಿಯೇ ಅನುಭವಿಸಿ ಬದುಕು ವುದನ್ನು ನಾವು ವೇಗವರ್ಧಿಸಬೇಕು. ಬದುಕಿನ ಪ್ರತೀ ಕ್ಷಣದಲ್ಲಿಯೂ ಜೀವನಾನು ಭವಕ್ಕಾಗಿ ಹಂಬಲಿಸಬೇಕು. 30 ವರ್ಷ ವಯಸ್ಸಿನಲ್ಲಿ ಜೀವನಾನುಭವಕ್ಕೆ ಹಾತೊರೆ ಯದೆ, ಆಗ ತೆಗೆದುಕೊಂಡ ಯಾವುದೋ ಒಂದು ನಿರ್ಧಾರ ತಪ್ಪು ಎಂಬುದು 60 ವರ್ಷ ವಯಸ್ಸಾದಾಗ ನಮಗೆ ಗೊತ್ತಾದರೆ, ನಡುವೆ ಸಂದ ಈ 30 ವರ್ಷಗಳು ಅತ್ಯಂತ ವ್ಯರ್ಥ ಅಲ್ಲವೆ!?
ಅನುಭವ ಎನ್ನುವುದು ತಲೆಯಲ್ಲಿ ಕೂದಲಿಲ್ಲದಾಗ ಸಿಕ್ಕಿದ ಬಾಚಣಿಗೆಯಂತಾಗ ಬಾರದು. ಹಲ್ಲಿರುವಾಗ ಕಡಲೆ ಸಿಗಲಿಲ್ಲ, ಕಡಲೆ ಸಿಕ್ಕಿದಾಗ ಹಲ್ಲುಗಳಿರಲಿಲ್ಲ ಎಂಬ ನಾಣ್ನುಡಿಯೂ ಇದನ್ನೇ ಹೇಳುತ್ತದೆ. ಜೀವನಾನುಭವದ ಅಮೃತ ಫಲ ನಾವು ಸುದೃಢರಾಗಿರುವಾಗಲೇ, ಹರದಾರಿ ದೂರದ ಬದುಕು ನಮ್ಮೆದುರು ಹಾಸಿಕೊಂಡಿ ರುವಾಗಲೇ ಸಿಗಬೇಕು.
ಇದಾಗಬೇಕು ಎಂದಾದರೆ ನಮ್ಮ ಗ್ರಹಿಕೆಗಳು ಸ್ಪಷ್ಟವಾಗಿರ ಬೇಕು. ನಮ್ಮ ಪಂಚೇಂದ್ರಿಯ ಗಳು, ನಮ್ಮ ಮನಸ್ಸು, ನಮ್ಮ ಆಲೋಚನೆಗಳು ಪ್ರತೀ ಕ್ಷಣವೂ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಈ ಜಗತ್ತನ್ನು ಕಟ್ಟಿಕೊಡುತ್ತವೆ. ಅವುಗಳ ನಡುವೆ ಯಾವುದು ನಿಜ ಎನ್ನುವುದನ್ನು ಸ್ಪಷ್ಟವಾಗಿ ಗ್ರಹಿಸುವುದು ಸಾಧ್ಯವಾಗಬೇಕು.
ಅನುಭವವನ್ನು ಗಳಿಸುವುದಲ್ಲ. ಅದಾಗಿ ಒದಗಬೇಕು. ಅದಕ್ಕಾಗಿ ಬದುಕನ್ನು ಸಂಪೂರ್ಣವಾದ ಮುಕ್ತ ಭಾವದಿಂದ ಸ್ವೀಕರಿಸಿದರೆ ಜೀವನಾನುಭವ ನಮ್ಮೊಳಗೆ ರಾಶಿ ಬೀಳುತ್ತದೆ. ಅದಕ್ಕಾಗಿ ಯಾವುದೇ ವಿಚಾರ, ತಣ್ತೀ, ಸಿದ್ಧಾಂತ ಇತ್ಯಾದಿಗಳ ಗೋಡೆಗಳನ್ನು ಕಟ್ಟಿ ಕೊಳ್ಳಬಾರದು. ತಾನಾಗಿ ಸಂಭವಿಸುವ ಜೀವನಕ್ಕೆ ಎದುರಾಗಿ ರಕ್ಷಣಾತ್ಮಕ ನಿಲುವು ಬೇಡ. ಎಲ್ಲದಕ್ಕೂ ತೆರೆದ ಮನವಿರಲಿ. ಈ ಜೀವ ಜೀವಿಸುವುದಕ್ಕಾಗಿ ಈ ಭೂಗ್ರಹದಲ್ಲಿ ಜನ್ಮ ತಾಳಿದೆ. ಅದಕ್ಕೆ ಬದುಕುವುದು ಬೇಕು. ಅದಕ್ಕೆ ಬದುಕುವ ಅಪೂರ್ವ ಅನುಭವ ಬೇಕು. ಅದನ್ನು ಸ್ವತ್ಛಂದವಾಗಿ ಬದುಕಲು ಬಿಡಿ.
( ಸಾರ ಸಂಗ್ರಹ)