Advertisement

ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಕಡ್ಡಾಯಗೊಳಿಸಿ

09:09 PM Jan 22, 2020 | Team Udayavani |

ಹನೂರು: ರಾಜ್ಯದ ಗಡಿ ತಾಲೂಕು ಹನೂರಿನಲ್ಲಿ ಚಾಮರಾಜನಗರ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ಮತ್ತು ನಾಳೆ ನಡೆಯಲಿದೆ. ನೂತನ ತಾಲೂಕು ಕೇಂದ್ರವಾದ ಹನೂರಿಗೆ ಮತ್ತೂಂದು ಹಿರಿಮೆಯಾಗಿದೆ.

Advertisement

ಚಾಮರಾಜನಗರ ಜಿಲ್ಲೆಯಲ್ಲಿ ಈವರೆಗೂ 9 ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದ್ದು, ಇದೀಗ ನೂತನ ತಾಲೂಕು ಕೇಂದ್ರವಾಗಿಯೂ ಘೋಷಣೆಯಾಗಿರುವುದರಿಂದ ಹನೂರು ಪಟ್ಟಣದಲ್ಲಿ ಚೊಚ್ಚಲ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುತ್ತಿರುವುದು ನಮ್ಮ ಸೌಭಾಗ್ಯವಾಗಿದೆ. 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಮಕ್ಕಳ ಸಾಹಿತಿ ಚಾಮಶೆಟ್ಟಿ.ಸಿ ಅವರು ಉದಯವಾಣಿಯೊಂದಿಗೆ ಮಾತನಾಡಿದ್ದಾರೆ.

* ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೀರಿ. ಇದಕ್ಕೆ ನಿಮ್ಮ ಅಭಿಪ್ರಾಯ?
ನಾನು ಓರ್ವ ದೈಹಿಕ ಶಿಕ್ಷಕನಾಗಿ, ದೈಹಿಕ ಶಿಕ್ಷಣ ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದೇನೆ. 21 ನಾಟಕಗಳು, 6 ಕವನ ಸಂಕಲನಗಳನ್ನು ರಚಿಸಿದ್ದೇನೆ. ಅಲ್ಲದೆ, ನಾನು ಕೊಳ್ಳೇಗಾಲ ತಾಲೂಕಿನವನೇ ಆಗಿರುವುದರಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳು ನನ್ನನ್ನು ಅಭಿಮಾನದಿಂದ ಆಯ್ಕೆ ಮಾಡಿದ್ದಾರೆ. ಇದರಿಂದ ನನಗೆ ತುಂಬಾ ಸಂತಸವಾಗಿದೆ.

* ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಈ ಬಗ್ಗೆ ನಿಮ್ಮ ಅಭಿಪ್ರಾಯ?
ಕನ್ನಡ ಭಾಷೆ ಎಂಬುದು ತಾಯಿ ಭಾಷೆ, ಕರುಳ ಭಾಷೆಯಾಗಿರುವುದರಿಂದ ನಮಗೆ ಬಹಳ ಪ್ರಮುಖವಾದ ಭಾಷೆಯಾಗಿದೆ. ಆದ್ದರಿಂದ 1-7ನೇ ತರಗತಿವರೆಗೆ ಕನ್ನಡ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು. ಬಳಿಕ ಆಂಗ್ಲ ಭಾಷೆಯಲ್ಲಿ ಶಿಕ್ಷಣ ನೀಡಬಹುದು. ಅಲ್ಲದೆ, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಹೆಚ್ಚು ಆಕರ್ಷಿಸಲು ಉತ್ತಮವಾದ ಪರಿಸರವನ್ನು ಕಲ್ಪಿಸಬೇಕು. ಗುಣಮಟ್ಟದ ಶಾಲಾ ಕಟ್ಟಡಗಳನ್ನು ನಿರ್ಮಿಸಿ, ಉತ್ತಮ ಶಿಕ್ಷಕರನ್ನು ನಿಯೋಜನೆ ಮಾಡಬೇಕು. ಈ ರೀತಿಯ ಕಾರ್ಯಗಳು ನಡೆದಾಗ ಮಾತ್ರ, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಅನುಕೂಲವಾಗುತ್ತದೆ.

* ಹಿಂದಿ ಭಾಷೆ ಹೇರಿಕೆ ಯತ್ನ ನಡೆಯುತ್ತಿದೆ?
ನಾನು ಈ ಮೊದಲೇ ಹೇಳಿದಂತೆ ಕನ್ನಡ ಭಾಷೆಗೆ ಪ್ರಥಮ ಪ್ರಾಮುಖ್ಯತೆಯನ್ನು ನೀಡಬೇಕು. ಹಿಂದಿ ಭಾಷೆಯೂ ಕೂಡ ನಮ್ಮ ರಾಷ್ಟ್ರೀಯ ಭಾಷೆಯಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿ ಮುಕ್ಕಾಲು ಜನರು ಹಿಂದಿ ಭಾಷೆಯನ್ನು ಮಾತನಾಡುತ್ತಾರೆ. ಕೇವಲ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿ ಮಾತ್ರ ಪ್ರಾದೇಶಿಕ ಭಾಷೆ ಹೆಚ್ಚಾಗಿ ಉಳಿದಿದೆ. ಈ ಭಾಷೆಯ ಜೊತೆಗೆ ಹಿಂದಿ ಭಾಷೆಯನ್ನು ಕಲಿಯುವುದರಿಂದ ಯಾವುದೇ ತೊಂದರೆಯಿಲ್ಲ. ನಾವೂ ಕೂಡ ವಿವಿಧ ರಾಜ್ಯಗಳಿಗೆ ಹೋಗಿ ವ್ಯವಹಾರ ಮಾಡುವ ಸಾಮರ್ಥ್ಯ ಬರಲಿದೆ.

Advertisement

* ಖಾಸಗಿ ಶಾಲೆಗಳ ಹಾವಳಿಯಿಂದ ಕನ್ನಡ ಅವನತಿಯತ್ತ ಸಾಗುತ್ತಿದೆ ಎಂಬ ದೂರಿದೆ?
ಖಾಸಗಿ ಶಾಲೆಗಳಲ್ಲಿ ನರ್ಸರಿಯಿಂದ ವಿದ್ಯಾಭ್ಯಾಸ ನೀಡುತ್ತಿದ್ದು, ಮಕ್ಕಳನ್ನು ಆಕರ್ಷಿಸುತ್ತಿವೆ. ಅವರಿಂದ ಡೊನೇಷನ್‌ ಪಡೆದು ಅಭಿವೃದ್ಧಿ ಹೊಂದುತ್ತಿದ್ದಾರೆ. ಅಲ್ಲದೆ, ಮಕ್ಕಳು ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆದು, ಇಂಗ್ಲಿಷ್‌ ಕಲಿತರೆ ವಿದೇಶಕ್ಕೆ ಹೋಗಬಹುದು ಎಂಬ ಭಾವನೆ ಪೋಷಕರಲ್ಲಿ ಇದೆ. ಆದ್ದರಿಂದ ಖಾಸಗಿ ಶಾಲೆಗಳಂತೆಯೇ ಸರ್ಕಾರಿ ಶಾಲೆಗಳಲ್ಲಿಯೂ ನರ್ಸರಿಯಿಂದ ವಿದ್ಯಾಭ್ಯಾಸ ನೀಡುವಂತಾಗಬೇಕು. ಒಂದೊಮ್ಮೆ ಇದೇ ರೀತಿಯಲ್ಲಿ ಖಾಸಗಿ ಶಾಲೆಗಳು ಹೆಚ್ಚುತ್ತಿದ್ದರೆ, ಕನ್ನಡ ಭಾಷೆ ಅವನತಿಯತ್ತ ಸಾಗಲಿದೆ.

* ಕನ್ನಡಿಗರಿಗೆ ಉದ್ಯೋಗ ದೊರೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ?
ಕನ್ನಡಿಗರಿಗೆ ಸರಿಯಾದ ಉದ್ಯೋಗ ಸಿಗುತ್ತಿಲ್ಲ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದೀಗ ಐಎಎಸ್‌ ಮತ್ತು ಐಪಿಎಸ್‌ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಬ್ಯಾಂಕುಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಬೇಕು. ಅಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿ ಕನ್ನಡದಲ್ಲಿಯೇ ವ್ಯವಹಾರ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳು ಬ್ಯಾಂಕ್‌ ಮತ್ತು ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸುವ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾಗಿದೆ.

* ವಿನೋದ್‌ ಎನ್‌ ಗೌಡ

Advertisement

Udayavani is now on Telegram. Click here to join our channel and stay updated with the latest news.

Next