Advertisement
ಇದನ್ನೂ ಓದಿ: ಬಣ್ಣದ ವೈಭವ-3: ರಾವಣ, ಘಟೋತ್ಕಚನಂತಹ ಪಾತ್ರಗಳೂ ಬಣ್ಣದ ವೇಷದ ಸ್ಥಾನಮಾನ ಕಳೆದುಕೊಂಡಿವೆ…
Related Articles
Advertisement
ಶುಭ್ರವಾದ ಬೆಳ್ಳಗಿನ ಚಿಟ್ಟೆಗಳು ಮುಳ್ಳುಮುಳ್ಳಾಗಿ ರಕ್ಕಸ ರೂಪದ ಭೀಕರತೆಯನ್ನು ತೋರಿಸುತ್ತವೆ. ಅದು ಕಲಾವಿದನ ಸಾಮರ್ಥ್ಯ ದ ಮೇಲೆ ಗಾತ್ರವನ್ನು, ಅಂದವನ್ನೂ ಪಡೆದುಕೊಳ್ಳುತ್ತಿತ್ತು. ರಾಕ್ಷಸ ಮುಖವರ್ಣಿಕೆಯಲ್ಲಿ ವಿಭಿನ್ನತೆಯನ್ನೂ ಕಾಣಬಹುದು. ಏಕ ಸುಳಿ ಅಂದರೆ ಒಂದು ಸುಳಿ ಶಾಪಕ್ಕೆ ಗುರಿಯಾದ ಗಂಧರ್ವರಿಗೆ ಸಾಮಾನ್ಯವಾಗಿ ಕಂಸ ಜನ್ಮದಲ್ಲಿ ಬರುವ ಧ್ರುಮಿಳ ಗಂಧರ್ವನಿಗೆ ಈ ರೀತಿಯಲ್ಲಿ ಮುಖವರ್ಣಿಕೆ ಮಾಡಲಾಗುತ್ತದೆ. ದ್ವಿಸುಳಿ (ಎರಡು ಸುಳಿ) ಪಾತ್ರಗಳನ್ನು ಮಾಡಲಾಗುತ್ತದೆ. ಪಾತ್ರಗಳಿಗನುಗುಣವಾಗಿ ತ್ರಿಸುಳಿ(ಮೂರು ಸುಳಿ)ಯನ್ನು ಬರೆಯುವ ಕ್ರಮವಿದೆ ಎಂದು ವೈಶಿಷ್ಟ್ಯತೆಗಳ ಬಗ್ಗೆ ಹೇಳಿದರು.
ಚೇಳು ಸುಳಿ ಕಾಟು ಬಣ್ಣದ ವೇಷಗಳಿಗೆ ಬಳಸುವ ಕ್ರಮವಿದೆ. ಕವಿ ಮುದ್ದಣ ವಿರಚಿತ ರತ್ನಾವತಿ ಕಲ್ಯಾಣದಲ್ಲಿ ಬರುವ ಕಾಟು ಬಣ್ಣದ ವೇಷವಾದ ವಿದ್ಯುಲ್ಲೋಚನ ನ ಪಾತ್ರ ಅಂತಹ ವೇಷಗಳಲ್ಲಿ ಒಂದು. ಈಗ ರಂಗದಲ್ಲಿ ಆ ಪಾತ್ರ ಮರೆಯಾಗಿದ್ದು, ನಾಟಕೀಯ ಪಾತ್ರಗಳಲ್ಲೋ , ಪುಂಡು ವೇಷಧಾರಿಗಳ ಕೈಯಲ್ಲಿಯೋ ಮಾಡಿಸುತ್ತಿರುವುದು ಹೊಸತನಕ್ಕೆ ಸಾಕ್ಷಿಯಾಗಿದ್ದು, ಪ್ರೇಕ್ಷಕರಿಗೆ ರಾಕ್ಷಸ ವೇಷದ ಸವಿಯನ್ನು ಕಾಣಲು ಅಸಾಧ್ಯವಾಗಿದೆ ಎಂದರು.
ಪಾತಾಳದಲ್ಲಿರುವ ರಾಕ್ಷಸರಿಗೆ ಸರ್ಪ ಸುಳಿ ಬರೆಯುವ ಕ್ರಮವೂ ಇತ್ತು. ಬಣ್ಣದ ವೇಷದ ಪಾತ್ರಗಳ ಕಲ್ಪನೆಯೇ ಬಡಗುತಿಟ್ಟಿನಲ್ಲಿ ಮರೆಯಾಗುತ್ತಿರುವ ವೇಳೆ ಇನ್ನು ಆ ವಿಶೇಷತೆಗಳ ಕುರಿತು ಚಿಂತಿಸುವತ್ತ ಕಲಾವಿದರು ಮುಂದಾಗುತ್ತಿಲ್ಲ. ದೇವಿ ಮಾಹಾತ್ಮೆಯಲ್ಲಿ ಬರುವ ವಿದ್ಯುನ್ಮಾಲಿಯಂತಹ ಪ್ರಮುಖ ಪಾತ್ರ ವನ್ನು ಆ ರೀತಿ ಮಾಡಬಹುದು. ಆ ಪಾತ್ರವನ್ನು ಮುಂಡಾಸು ವೇಷವಾಗಿ ಮಾಡಲಾಗುತ್ತಿದೆ. ದೇವಿ ಮಾಹಾತ್ಮೆ ಪ್ರಸಂಗದಲ್ಲಿ ಬಣ್ಣದ ವೇಷಗಳಿಗೆ ಸಾಕಷ್ಟು ಅವಕಾಶವಿದೆ.ಸಾಂಪ್ರದಾಯಿಕ ವೇಷಗಳನ್ನು ತೋರಿಸಿಕೊಳ್ಳುವ ಅವಕಾಶವಿದೆ. ಆದರೆ ಬಡಗಿನಲ್ಲಿ ಆ ಪ್ರಯತ್ನ ಯಾರೂ ಮಾಡುತ್ತಿಲ್ಲ ಎಂದು ನೋವು ಹೊರ ಹಾಕಿದರು.
ಹೆಣ್ಣು ಬಣ್ಣ ದ ವೇಷಗಳಿಗೆ ಸಣ್ಣ ಚಿಟ್ಟೆ ಇಡುವುದು ಸಾಮಾನ್ಯವಾಗಿತ್ತು. ಶೂರ್ಪನಖಿ, ಅಜೋಮುಖಿ ಸೇರಿದಂತೆ ಇತರ ಪಾತ್ರಗಳು ತನ್ನದೇ ವಿಶಿಷ್ಟತೆ ಹೊಂದಿದ್ದವು. ಬಣ್ಣದ ವೇಷ ಮಾಡುವಲ್ಲಿ ಹೆಚ್ಚು ಶ್ರಮ ಮತ್ತು ಸಮಯ ಅಗತ್ಯವಾಗಿರುತ್ತದೆ. ಮುಖವರ್ಣಿಕೆಗೇ ಹೆಚ್ಚು ಸಮಯ ತಗಲುತ್ತದೆ. ತಾಳ್ಮೆ ಬಣ್ಣದ ವೇಷಧಾರಿಗೆ ಇರಲೇ ಬೇಕಾಗುತ್ತದೆ. ಆಗ ಮಾತ್ರ ಮುಖವರ್ಣಿಕೆಯಲ್ಲಿ ವಿಶೇಷತೆಯನ್ನು ತೋರಬಹುದು ಎಂದು ಎಳ್ಳಂಪಳ್ಳಿಯವರು ಹೇಳಿದರು.
ಮುಂದುವರಿಯುವುದು…
ಬರಹ : ವಿಷ್ಣುದಾಸ್ ಪಾಟೀಲ್