ರಾಯಚೂರು: ನಿಮ್ಮ ವೃತ್ತಿ ಜೀವನದ ಭದ್ರ ಬುನಾದಿಯೇ ತರಬೇತಿಗಳು. ಅದನ್ನು ಸದುಪ ಯೋಗ ಪಡೆದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಡಾ| ಟಿ.ರೋಣಿ ತಿಳಿಸಿದರು.
ಸಮೀಪದ ಯರಮರಸ್‌ನ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ನೂತನ ಪ್ರಶಿಕ್ಷಣಾರ್ತಿಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಎರಡು ವರ್ಷಗಳಿದ ಕೊವೀಡ್-19ನಿಂದಾಗಿ ಆನ್‌ಲೈನ್ ತರಬೇತಿಗಳು ಪ್ರಶಿಕ್ಷಣಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ಪರಿಣಾಮ ಬಿರಲಿಲ್ಲ. ಹಾಗಾಗಿ ಈ ವರ್ಷದಿಂದ ಆಫ್‌ಲೈನ್ ತರಬೇತಿಗಳನ್ನು ಪ್ರಾರಂಭಿಸಿದ ಮೊದಲ ದಿನವೇ 35ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದು, ತುಂಬಾ ಸಂತೋಷದ ವಿಷಯ. ಈ ತರಬೇತಿಯಲ್ಲಿ ಎಲ್ಲ ತರಹದ ಮಾರ್ಗದರ್ಶನ ನೀಡಲಾಗುವುದು. ಇದನ್ನು ನೀವು ಸಂಪೂರ್ಣವಾಗಿ ಅಳವಡಿಸಿಕೊಂಡಾಗ ಮಾತ್ರ ತಮ್ಮ ಕಚೇರಿಗಳಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯ ಎಂದರು.
ಸರ್ಕಾರಿ ದಾಖಲೆಗಳನ್ನು ಸೂಕ್ಷ್ಮ ರೀತಿಯಲ್ಲಿ ಪರಿಶೀಲಿಸಿ ಸರ್ಕಾರದ ಮಾರ್ಗಸೂಚಿಯಂತೆ ಆಯಾ ಅ ಧಿಕಾರಿಗಳಿಗೆ ತಲುಪುವಂತೆ ನೀವು ಜವಾಬ್ದಾರಿಯಿಂದ ಕೆಲಸ ಮಾಡಲು ಇಂತಹ ತರಬೇತಿಗಳು ಅವಶ್ಯಕವಾಗಿರುತ್ತವೆ. ತರಬೇತಿಯಲ್ಲಿ ಬೇಜವಾಬ್ದಾರಿಯಿಂದ ವರ್ತಿಸಬೇಡಿ, ಸಂತೋಷದಿಂದ ಕಲಿಯಿರಿ. ನಿಮ್ಮ ವೃತ್ತಿ ಜೀವನದಲ್ಲಿ ಒಳ್ಳೆಯ ಉದ್ಯೋಗಿಯಾಗಿ ಹೊರಹೊಮ್ಮಲು ಸಾಧ್ಯ ಎಂದರು.
ಸಂಸ್ಥೆಯ ಬೋಧಕ ನಾಗರಾಜ ಮಾತನಾಡಿ, ತರಬೇತುದಾರರು ಕೂಡ ಜೀವನದಲ್ಲಿ ಶಿಸ್ತು ಕಾಪಾಡಿಕೊಂಡು ಹೋಗಬೇಕು ಎಂದರು.
ಸಂಸ್ಥೆಯ ಬೋಧಕರಾದ ಜಾವಿದ್ ಮೀಯಾ, ರವಿ, ಪ್ರಥಮ ದರ್ಜೆ ಸಹಾಯಕಿ ವಿದ್ಯಾ ಕಟ್ಟಿ ಸೇರಿದಂತೆ ವಿವಿಧ ಇಲಾಖೆಯ ಪ್ರಶಿಕ್ಷಣಾರ್ಥಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.