Advertisement

ಸಂಚಾರಿ ಜನತಾ ನ್ಯಾಯಾಲಯ ಸದ್ಬಳಕೆ ಮಾಡಿಕೊಳ್ಳಿ

09:11 PM Jan 04, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಜನತಾ ನ್ಯಾಯಾಲಯಗಳಲ್ಲಿರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವುದರ ಜೊತೆಗೆ ಜನರಲ್ಲಿ ಮೂಲ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಾನೂನು ಸಾಕ್ಷರತಾ ರಥ ಜಿಲ್ಲಾದ್ಯಂತ ಸಂಚರಿಸಲಿದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಕೆ.ಅಮರನಾರಾಯಣ ತಿಳಿಸಿದರು.

Advertisement

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಲಯ, ವಕೀಲರ ಸಂಘ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಕಾನೂನು ಸಾಕ್ಷರತಾ ರಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮೌಲ್ಯಯುತ ಜೀವನ ನಡೆಸಿ: ಜಿಲ್ಲೆಯ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ವಾಸ ಮಾಡುತ್ತಿರುವ ಸಾಮಾನ್ಯ ಜನರಿಗೆ ಕಾನೂನು ತಿಳುವಳಿಕೆ ಮೂಡಿಸುವುದು ಇಂದಿನ ದಿನಗಳಲ್ಲಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಸಂಚಾರಿ ಜನತಾ ನ್ಯಾಯಲಯದ ಮೂಲಕ ನ್ಯಾಯಾಧೀಶರನ್ನು ಹಾಗೂ ವಕೀಲರ ಮೂಲಕ ಜನರಲ್ಲಿ ಕಾನೂನು ಅರಿವು ಮೂಡಿಸುತ್ತಿದ್ದು, ಇದರ ಸದ್ಬಳಕೆಯನ್ನು ಜಿಲ್ಲೆಯ ಜನತೆ ಪಡೆದುಕೊಂಡು ಕಾನೂನುಗಳಿಗೆ ತಲೆಬಾಗಿ ಮೌಲ್ಯಯುತ ಜೀವನ ನಡೆಸಬೇಕೆಂದರು.

ಕಾನೂನು ಅರಿವು: ಎರಡನೇ ಜಿಲ್ಲಾ ಅಪರ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಎಸ್‌.ನಟರಾಜ್‌ ಮಾತನಾಡಿ, ಪ್ರಧಾನವಾಗಿ ಬಾಲ್ಯ ವಿವಾಹ, ಪೋಕ್ಸೋ, ಹೆಣ್ಣು ಮಕ್ಕಳಿಗೆ ಆಸ್ತಿ ಹಕ್ಕು, ಭೂ ಕಂದಾಯ ಹಕ್ಕುಗಳು ಮತ್ತಿತರ ಜನ ಸಾಮಾನ್ಯರಿಗೆ ಅಗತ್ಯವಾಗಿ ಇರಬೇಕಾದ ಕಾನೂನು ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಸಾಕ್ಷರತಾ ರಥದ ಮೂಲಕ ಒಟ್ಟು 25 ಕಾನೂನುಗಳ ಬಗ್ಗೆ ಜಿಲ್ಲೆಯ ಜನರಲ್ಲಿ ಕಾನೂನು ತಿಳುವಳಿಕೆ ನೀಡಲಾಗುವುದು ಎಂದರು.

ಸೌಹಾರ್ದತೆ ಮೂಡುತ್ತದೆ: ಜಿಲ್ಲೆಯಲ್ಲಿ ಬಾಲ್ಯ ವಿವಾಹದಂತ ಸಾಮಾಜಿಕ ಪಿಡುಗು ಹೆಚ್ಚಾಗಿದೆ. ಬಹಳಷ್ಟು ಪ್ರಕರಣಗಳು ನ್ಯಾಯಾಲಯಕ್ಕೆ ಬರುತ್ತಿದ್ದು, ಈ ಬಗ್ಗೆ ಅರಿವು ಮೂಡಿಸುವುದು ಅಗತ್ಯ. ಕಾನೂನು ತಿಳುವಳಿಕೆ ಇದ್ದಲ್ಲಿ ಮಾತ್ರ ಗ್ರಾಮಗಳಲ್ಲಿ ಸೌಹಾರ್ದತೆ, ಸಾಮರಸ್ಯದ ವಾತಾವರಣ ಇರುತ್ತದೆ. ಜೊತೆಗೆ ಸಮಾಜದಲ್ಲಿ ಅಪರಾಧ ಪ್ರಕರಣಗಳನ್ನು ತಡೆಯಬಹುದು ಎಂದರು.

Advertisement

ವಕೀಲರ ಸಂಘದ ಅಧ್ಯಕ್ಷ ಕೆ.ಎಚ್‌.ತಮ್ಮೇಗೌಡ ಮಾತನಾಡಿ, ಇತ್ತೀಚೆಗೆ ಎಷ್ಟೇ ಕಾನೂನು ಅರಿವು ಮೂಡಿಸಿದರೂ ನ್ಯಾಯಾಲಯಕ್ಕೆ ಬರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಲೋಕ ಅದಾಲತ್‌, ಜನತಾ ನ್ಯಾಯಾಲಯಗಳ ಮೂಲಕ ಪ್ರಕರಣಗಳ ರಾಜಿ ಸಂಧಾನ ನಡೆಸಿದರೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಮುಖ್ಯ ಕಾರಣ ಜನರಲ್ಲಿ ಕಾನೂನು ಅರಿವು ಇಲ್ಲವಾಗಿದೆ ಎಂದರು.

ಗ್ರಾಮೀಣ ಭಾಗದ ಜನರಲ್ಲಿ ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ಕಾನೂನು ಸೇವೆಗಳ ಪ್ರಾಧಿಕಾರ ಪ್ರತಿ ವರ್ಷ ರಥ ಮೂಲಕ ಸಂಚರಿಸಿ ಜನರಲ್ಲಿ ತಿಳುವಳಿಕೆ ಮೂಡಿಸುತ್ತಿದ್ದು, ಇದನ್ನು ಜಿಲ್ಲೆಯ ಜನತೆ ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ರೂಪಾ, ಅರುಟಗಿ, ಅನಿಲ್‌ ಪ್ರಕಾಶ್‌, ಹೆಚ್‌.ದೇವರಾಜ್‌, ತಾಪಂ ಇಒ ಹರ್ಷವರ್ಧನ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಾರಾಯಣಸ್ವಾಮಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯೋಗೇಶ್‌ಗೌಡ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ವಿನೋದ್‌ ಕುಮಾರ್‌ ಉಪಸ್ಥಿತರಿದ್ದರು.

ಕಾನೂನು ಅರಿವಿನಿಂದ ಅಪರಾಧ ನಿಯಂತ್ರಣ ಸಾಧ್ಯ – ಜಿಪಂ ಸಿಇಒ: ಸಮಾಜದಲ್ಲಿ ಕಾನೂನು ಅರಿವು ಮೂಡಿಸುವುದು ಇತ್ತೀಚೆಗೆ ಅಗತ್ಯವಾಗಿದೆ. ಬಹಳಷ್ಟು ಜನರಲ್ಲಿ ಕಾನೂನು ಅರಿವು ಇಲ್ಲದೇ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಜಿಪಂ ಸಿಇಒ ಬಿ.ಫೌಝೀಯಾ ತರುನ್ನುಮ್‌ ಹೇಳಿದರು. ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲಾ ರೀತಿಯ ಹಕ್ಕುಗಳ ಹಾಗೂ ಕರ್ತವ್ಯಗಳ ಬಗ್ಗೆ ಜನ ಸಾಮಾನ್ಯರಲ್ಲಿ ಕಾನೂನು ಅರಿವು ಮೂಡಿಸಿದಾಗ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆ ಆಗುತ್ತದೆ.

ಜೊತೆಗೆ ನಾಗರಿಕರು ಕೂಡ ಕಾನೂನು ತಿಳುವಳಿಕೆ ಪಡೆದುಕೊಂಡು ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು. ಕಾನೂನು ಅರಿವು ಮೂಡಿಸುವ ಕಾರ್ಯಕ್ರಮಗಳಿಗೆ ಜಿಪಂ ಅಗತ್ಯ ಸಹಕಾರ ನೀಡಿ ವಿವಿಧ ಇಲಾಖೆಗಳ ಸಮನ್ವಯತೆಯೊಂದಿಗೆ ಸಾಕ್ಷರತಾ ರಥ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗುವುದೆಂದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನು ಅರಿವು ಮೂಡಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಸಾಮಾನ್ಯ ಜನರಲ್ಲಿ ಕಾನೂನು ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲಾದ್ಯಂತ ಸಾಕ್ಷರತಾ ರಥ ಸಂಚರಿಸಲಿದ್ದು, ಪ್ರತಿಯೊಬ್ಬರು ಕಾನೂನು ತಿಳಿಯುವುದರಿಂದ ನ್ಯಾಯಾಲಯಗಳಿಗೆ ಬರುವ ಪ್ರಕರಣಗಳ ಸಂಖೆ ಕಡಿಮೆ ಆಗುತ್ತದೆ. ಇದರಿಂದ ನ್ಯಾಯಾಲಯಗಳ ಮೇಲಿನ ಒತ್ತಡ ಕಡಿಮೆ ಆಗಲಿದೆ.
-ಭಾನುಮತಿ, ಮೂರನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶೆ

Advertisement

Udayavani is now on Telegram. Click here to join our channel and stay updated with the latest news.

Next