Advertisement
ಹೆಣ್ಣು ಅಲಂಕಾರಪ್ರಿಯೆ ಎನ್ನುವುದು ರೂಢಿಯ ಮಾತು. ಆಕೆಯ ಅಲಂಕಾರದ ಆಸ್ಥೆಯು ಹೆಣ್ತನದ ಹೆಮ್ಮೆಯ ಗುರುತಾಗಿಯೂ ಹಾಗೂ ಆಕೆಯ ಜೀವನೋತ್ಸಾಹದ ಪ್ರತೀಕವಾಗಿಯೂ ಕಾಣಬಹುದು. ಮೊನ್ನೆ ವಾಟ್ಸಾಪಿನಲ್ಲಿ ಹೀಗೊಂದು ಜೋಕು ಕಣ್ಣಗೆ ಬಿತ್ತು. ಕನ್ನಡಿಯ ಮುಂದೆ ಕುಳಿತ ಹೆಣ್ಣು “”ಇನ್ನು ಹತ್ತು ನಿಮಿಷದಲ್ಲಿ ಬರ್ತೀನಿ ಎಂದು ಅರ್ಧ ಗಂಟೆಯಿಂದ ಹೇಳ್ತಾನೆ ಇದ್ದೇನೆ. ಹಾಗಿದ್ದೂ ಪದೇ ಪದೇ ಆಯ್ತಾ ಆಯ್ತಾ ಅಂತ ಕೇಳುತ್ತಿದ್ದೀರಲ್ಲ” ಎಂದು ಗಂಡನಿಗೆ ಹೇಳುತ್ತಾಳೆ. ಹೀಗೆ, ಪ್ರಕೃತಿದತ್ತವಾದ ಸೌಂದರ್ಯವನ್ನು ಇನ್ನೂ ಚಂದವಾಗಿಸಿಕೊಳ್ಳುವ ಅವಳ ಜಾಣ್ಮೆ, ಹುರುಪು ದೈವದತ್ತವಾಗಿ ಅವಳಿಗೆ ಬಂದಿರುವ ವರ ಎನ್ನಬಹುದು. ಅದರಲ್ಲಿಯೂ ಇಂದಿನ ಹೆಣ್ಣುಮಕ್ಕಳು ತಮ್ಮ ಅಲಂಕಾರದ ಬಗ್ಗೆ ಹೆಚ್ಚಿನ ಗಮನ ಕೊಡುವುದರ ಜೊತೆಗೆ ಅಲಂಕಾರದಲ್ಲಿಯೂ ಆಧುನೀಕತೆಯ ಹೊಳಹು ಮೇಳೈಸಿ ಮಹಿಳೆಯರ ಜಾಗೃತಿಯ ಸಂಕೇತವೇ ಆಗಿ ಮೈದಳೆಯುತ್ತಿದ್ದಾರೆ.
ಅದ್ದೂರಿ ಮೇಕಪ್‌ಗ್ಳ ಭರಾಟೆ, ವಸ್ತ್ರವಿನ್ಯಾಸ, ವಿಧವಿಧವಾದ ಹೇರ್‌ಸ್ಟೈಲ್‌ಗಳು, ನಡೆನುಡಿಯಲ್ಲಿನ ನಾಜೂಕು ಎಲ್ಲವೂ ಮೇಳೈಸಿದ ಸೌಂದರ್ಯದ ಅನಾವರಣ ಈಗಿನದ್ದು ಎಂದರೆ ತಪ್ಪಿಲ್ಲ.
Related Articles
Advertisement
ಪ್ರಸಾಧನಗಳ ಜಾಹೀರಾತಿನಲ್ಲಿ ತಮ್ಮ ಸೌಂದರ್ಯದ ಗುಟ್ಟು ಇದೇ ಎಂದು ಅವರು ತೋರಿಸುವ ಮೇಕಪ್ಪು ಸಾಮಗ್ರಿಗಳನ್ನು ಕೊಂಡು, ತಮಗೆ ಒಪ್ಪುತ್ತದೋ ಇಲ್ಲವೊ ಎನ್ನುವುದನ್ನೂ ನೋಡದೆ ಹಣವನ್ನು ವ್ಯಯಮಾಡುವವರೂ ಕಡಿಮೆ ಇಲ್ಲ. ಅವರುಗಳು ಮೇಕಪ್ಪು ತೆಗೆದ ನಂತರ ಅಥವಾ ಮೇಕಪ್ಪು ಇಲ್ಲದ ನಟಿಯರ ಮುಖವನ್ನು ನೋಡಿದಾಗ ಎಲ್ಲರಂತೆ ಸಾಧಾರಣವಾಗಿರುವ ಅವರನ್ನು ನೋಡಿ, “ಸೌಂದರ್ಯದ ದೇವತೆಯಂತೆ ಕಾಣುವ ಆ ಚೆಲುವೆ ಇವರೇನಾ?’ ಎಂದು ಬೇಸ್ತು ಬೀಳುವ ಸರದಿ ನಮ್ಮದಾಗುತ್ತದೆ.
ಈ ಮೇಕಪ್ಪಿನ ಕರಾಮತ್ತು ಅಷ್ಟರಮಟ್ಟಿಗೆ ಜಾದೂ ಮಾಡಿರುತ್ತದೆ ಎಂಬುದನ್ನು ಗಮನಿಸಬೇಕು. ಇನ್ನು ಅಗ್ಗದ ಮೇಕಪ್ಪಿಗೆ ಮಾರುಹೋಗಿ ತಮ್ಮ ನೈಜ ಸೌಂದರ್ಯವನ್ನು ಹಾಳುಮಾಡಿಕೊಂಡವರೂ ಹಲವರಿದ್ದಾರೆ. ಮೇಕಪ್ಪಿನಲ್ಲಿ ಬಳಸುವ ರಾಸಾಯನಿಕಗಳೂ ಮೃದುವಾದ ಚರ್ಮದ ಮೇಲೆ ಹಾನಿಕಾರಕ ಪರಿಣಾಮ ಬೀರಿ ಮುಖದ ಮೇಲೆ ಕಲೆಗಳೂ, ಬಂಗುಗಳೂ ಆಗುವ ಸಾಧ್ಯತೆಯೂ ಇದೆ. ಇಂದಿನ ಮೇಕಪ್ಪುಗಳ ಜಾದೂ ಏನೆಂದರೆ, ಯಾವುದೇ ಚಹರೆಯ ಮೂಲಸ್ವರೂಪವನ್ನೇ ಬದಲಾಯಿಸಿ ಹೊಸತೊಂದು ರೂಪವನ್ನು ಆವಿಷ್ಕಾರಗೊಳಿಸುವಷ್ಟು ಸಶಕ್ತವಾಗಿಹ, ಉತ್ಕೃಷ್ಟ ಮಟ್ಟದ ಒಂದು ಮಾಯಾಜಾಲವೇ ಸೃಷ್ಟಿಸಿಬಿಡುತ್ತದೆ.
ಇದರ ಮಾಯಾಜಾಲದ ಪ್ರಭಾವದಿಂದಾಗಿ ಮಧುವಣಗಿತ್ತಿ ಯಾರು? ಅನ್ಯರು ಯಾರು? ತಾಯಿ ಯಾರು? ಅಜ್ಜಿ ಯಾರು? ಎನ್ನುವ ಅಯೋಮಯ ಸ್ಥಿತಿ ನೋಡುಗರ ಕಣ್ಣಿಗೆ ತಿಳಿಯದಂತಾಗುತ್ತದೆ. ಧಾರಾವಾಹಿಗಳ ಪ್ರಭಾವವೋ ಏನೊ ಎಂಬಂತೆ ಮೇಕಪ್ ಇಲ್ಲದ ಮುಖವೇ ಇಲ್ಲವೇನೊ ಎನ್ನುವಷ್ಟರ ಮಟ್ಟಿಗೆ ಈ ಮೇಕಪ್ಪು ಎನ್ನುವುದು ಎಲ್ಲಾ ಕಡೆ ವಿಜೃಂಭಿಸುತ್ತಿದೆ. ಚಿಕ್ಕಬಾಲೆಯರಂತೂ ತಮ್ಮ ಅಮ್ಮಂದಿರನ್ನು ಅನುಕರಿಸುವಂತೆ ಮೇಕಪ್ಪು , ಲಿಪ್‌ಸ್ಟಿಕ್ ಹಾಕಿಕೊಳ್ಳುವುದೇ ಒಂದು ಸಂಭ್ರಮ ಅವರುಗಳಿಗೆ. ಪುಟ್ಟ ಮಕ್ಕಳ ಆಟದಲ್ಲಿ ಈಗ ಹೊಸದಾಗಿ ಬ್ಯೂಟಿಪಾರ್ಲರ್ ಆಟವೂ ಸೇರ್ಪಡೆಯಾಗಿರುವುದನ್ನು ಕಾಣಬಹುದು.
ಇಂದು ಸೌಂದರ್ಯ ಹೆಚ್ಚಿಸುವ, ಅಲಂಕಾಲಕ್ಕೊದಗುವ, ನೂರಾರು ರೀತಿಯ ಪ್ರಸಾಧನಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ವಿಭಿನ್ನವಾದ, ವೈವಿಧ್ಯವಾದ ಪ್ರಸಾಧನಗಳ ಜಾಹೀರಾತುಗಳನ್ನು ದಿನನಿತ್ಯ ಟಿವಿಗಳಲ್ಲಿ ಕಾಣುತ್ತಿರುತ್ತೇವೆ, ಕೇಳುತ್ತಿರುತ್ತೇವೆ. ಸಾಧಾರಣದಿಂದ ಹಿಡಿದು ಉತ್ಕೃಷ್ಟ ಗುಣಮಟ್ಟದ ಪ್ರಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯ. ಸೌಂದರ್ಯ ಪ್ರಸಾಧನಗಳ ಹೊಸ ಹೊಸ ಆವಿಷ್ಕಾರವಾದಂತೆ ಉದ್ಯಮವೂ ಬೃಹತ್ತಾಗಿ ಬೆಳೆದು ಲೆಕ್ಕವಿಲ್ಲದಷ್ಟು ಕಂಪೆನಿಗಳು ತಲೆಎತ್ತಿ, ತಮ್ಮ ಗ್ರಾಹಕರನ್ನು ಸೆಳೆಯಲು ಉನ್ನತವಾದ ಪ್ರಸಾಧನಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತಾರೆ.
ಇನ್ನು ಇದರ ಸಮನ್ವಯವೇ ಆಗಿರುವ ಬ್ಯೂಟಿಪಾರ್ಲರ್‌ಗಳೂ ಇಂದು ಅನೇಕರಿಗೆ ಬದುಕು ಕೊಟ್ಟಿದೆ. ಇದರಿಂದಾಗಿ ಇಂದು ಎಷ್ಟೋ ಮಹಿಳೆಯರು ತಮ್ಮ ಬಾಳಿಗೊಂದು ಸಂಪಾದನೆಯ ಮಾರ್ಗ ಕಂಡುಕೊಂಡಿದ್ದು , ಸ್ವಾವಲಂಬಿಗಳಾಗಿ ಬದುಕು ರೂಪಿಸಿಕೊಂಡಿದ್ದಾರೆ.
ಎಂ. ಇಂದಿರಾ ಶೆಟ್ಟಿ