ಪ್ರಭಾತ್ ಕಲಾ ಸಂಘದವರು ಮೇಕಪ್‌ಮ್ಯಾನ್ ಒಬ್ಬನನ್ನು ಗೊತ್ತುಮಾಡಿ ಕಳಿಸಿಕೊಟ್ಟಿದ್ದರು. ಆತ ಇನ್ನೊಂದು ಕಡೆ ಮೇಕಪ್ ಮುಗಿಸಿ ನಿಮ್ಮಲ್ಲಿಗೆ ಬರುತ್ತೇನೆ ಎಂದು ಹೇಳಿ ಪರಿಚಿತರೊಬ್ಬರ ಮೂಲಕ ಮೇಕಪ್ ಕಿಟ್ ತಲುಪಿಸಿದ್ದ. ಹುಡುಗರು ವೇಷ ಭೂಷಣ ಮುಗಿಸಿ ಮೇಕಪ್ ಮಾಡುವವನಿಗಾಗಿ ಕಾದರು. ನಾಟಕ ಶುರುವಾಗಲು ಮುಕ್ಕಾಲು ಗಂಟೆಯಷ್ಟೇ ಉಳಿದಾಗಲೂ ಮೇಕಪ್ ಮ್ಯಾನ್ ಪತ್ತೆಯಿಲ್ಲ…
ಕೆಲ ವರುಷಗಳ ಹಿಂದಿನ ಮಾತು. ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಜೊತೆಗೆ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಿತಿ ಸಂಚಾಲಕಿಯಾಗಿದ್ದೆ. ಎಂದಿನಂತೆ ಆ ವರ್ಷವೂ ಕಾಲೇಜ್ ಡೇಗೆ ಕಾರ್ಯಕ್ರಮಗಳನ್ನು ತಯಾರು ಮಾಡಿಕೊಳ್ಳಬೇಕಿತ್ತು. ಪ್ರತಿ ಸಲ ವಿದ್ಯಾರ್ಥಿಗಳು ವೇದಿಕೆ ಮೇಲೆ ಸಿನೆಮಾ ರೆಕಾರ್ಡ್ ಹಾಕಿ ನೃತ್ಯ ಮಾಡಲು ತಾ ಮುಂದು ನಾ ಮುಂದು ಎಂದು ಓಡಿ ಬರುತ್ತಿದ್ದರು. ಈ ಸಲವಾದರೂ ಏನಾದರೂ ಹೊಸತನ ಇರಲಿ ಎಂದು ಆಸಕ್ತಿಯಿಂದ “ಭಾರತಿ ಅಂದು-ಇಂದು’ ಎಂಬ ನಾಟಕ ಬರೆದೆ. ಸಹೋದ್ಯೋಗಿಗಳು ಮತ್ತು ಸಮಿತಿಯ ಇತರ ಸದಸ್ಯರು “ಚೆನ್ನಾಗಿದೆ, ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ನಾಟಕ ಚೆನ್ನಾಗಿ ಮೂಡಿ ಬರುವಂತೆ ತರಬೇತಿ ನೀಡೋಣ’ ಎಂದು ಉತ್ಸಾಹ ತೋರಿದರು.
ಚುರುಕಾದ ಸ್ವಚ್ಛ ಸಂಭಾಷಣೆ ಹೇಳುವ ಶಿಷ್ಯಂದಿರನ್ನು ಹದಿನೈದು ದಿನದಲ್ಲಿ ತಯಾರು ಮಾಡಿದ್ದಾಯ್ತು. ಅಭ್ಯಾಸ ಮಾಡಿಸುವಾಗ ಈ ಹುಡುಗರನ್ನು ಹಿಡಿದು ಮಾಡಿಸುವುದು ಕಪ್ಪೆಗಳನ್ನು ತಕ್ಕಡಿಗೆ ಹಾಕಿದಷ್ಟೆ ಕಷ್ಟವಾಗುತ್ತಿತ್ತು. ಒಬ್ಬ ಬಂದರೆ ಇನ್ನೊಬ್ಬ ಇರುತ್ತಿರಲಿಲ್ಲ. ಭಾರತಮಾತೆ ಪಾತ್ರಧಾರಿ ಇದ್ದರೆ ಬಸವಣ್ಣನವರ ಅಥವಾ ಬುದ್ಧನ ಪಾತ್ರಧಾರಿ ಮಂಗಮಾಯ ಆಗಿರುತ್ತಿದ್ದರು. “ಏಯ್ ಅವನೆಲ್ಲೋ, ಇವನೆಲ್ಲೋ, ಭಾರತಾಂಬೆ ನೀನೇ ಮುಖ್ಯ, ನೀನೇ ಇಲ್ಲದಿದ್ದರೇ ಹೇಗೆ ಮಹಾತಾಯಿ…’ ಎಂದೆಲ್ಲಾ ಬೈಯುತ್ತ, ಕೂಗಾಡುತ್ತ ಸಿದ್ಧ ಮಾಡಿದ್ದಾಯ್ತು. ಕೆಲ ಸಂದರ್ಭಗಳಲ್ಲಿ ಪೆಟ್ಟು ಕೊಟ್ಟಿದ್ದೂ ಆಯಿತು. ಕಾಲೇಜ್ ಡೇಗೆ ಎರಡೇ ದಿನ ಉಳಿದಿದ್ದಾಗ ಪ್ರಭಾತ್ ಕಲಾವಿದರ ಬಳಗಕ್ಕೆ ಹೋಗಿ ಎಲ್ಲ ವೇಷಭೂಷಣಗಳನ್ನು ಬಾಡಿಗೆಗೆ ತಂದೆವು. ವೇಷ ಹಾಕಿಸಿ final rehearsal ಮಾಡಿಸಿದ್ದಾಯ್ತು.
ಅವರ ಪ್ರದರ್ಶನ ತೃಪ್ತಿಕರವಾಗಿತ್ತು. ಆದರೂ ಮನದಲ್ಲೇನೋ ಅಳುಕು. ಶಿಷ್ಯಂದಿರು ಯಾವಾಗ ಯಾವ ರೀತಿ ತಿರುಗಿಕೊಳ್ಳುತ್ತಾರೋ ಎಂದು ಊಹಿಸುವುದೇ ಕಷ್ಟವಾಗಿತ್ತು. ನಾಟಕ ಚೆನ್ನಾಗಿದ್ದರೂ ಅದೊಂದು ಸಾಂ ಕ ಪ್ರಯತ್ನವಾಗಿದ್ದರಿಂದ ಕಡೆಯವರೆಗೂ ಏನನ್ನೂ ಹೇಳುವಂತಿರಲಿಲ್ಲ.
ಅಂತೂ ಇಂತೂ ಕಾಲೇಜ್ ಡೇ ದಿನ ಬಂದೇ ಬಿಟ್ಟಿತು. ವಿದ್ಯಾರ್ಥಿಗಳಿಗೆ ಮೇಕಪ್ ಮಾಡಿಸಿಕೊಳ್ಳುವ ಸಂಭ್ರಮ. ಪ್ರಭಾತ್ ಕಲಾ ಸಂಘದವರು ಮೇಕಪ್‌ಮ್ಯಾನ್ ಒಬ್ಬನನ್ನು ಗೊತ್ತುಮಾಡಿ ಕಳಿಸಿಕೊಟ್ಟಿದ್ದರು. ಆತ ಇನ್ನೊಂದು ಕಡೆ ಮೇಕಪ್ ಮುಗಿಸಿ ನಿಮ್ಮಲ್ಲಿಗೆ ಬರುತ್ತೇನೆ ಎಂದು ಹೇಳಿ ಪರಿಚಿತರೊಬ್ಬರ ಮೂಲಕ ಮೇಕಪ್ ಕಿಟ್ ತಲುಪಿಸಿದ್ದ. ಹುಡುಗರು ವೇಷ ಭೂಷಣ ಮುಗಿಸಿ ಮೇಕಪ್ ಮಾಡುವವನಿಗಾಗಿ ಕಾದರು. ನಾಟಕ ಶುರುವಾಗಲು ಮುಕ್ಕಾಲು ಗಂಟೆಯಷ್ಟೇ ಉಳಿದಾಗಲೂ ಮೇಕಪ್ ಮ್ಯಾನ್ ಬರಲಿಲ್ಲ. ನಮ್ಮ ಟೆನÒನ್ ಹೆಚ್ಚಾಯಿತು. ಇನ್ನು ತಡ ಮಾಡಿದರೆ ಮರ್ಯಾದೆ ಹೋಗುತ್ತದೆ ಅಷ್ಟೇ ಎಂದು ದೇವರನ್ನು ನೆನೆದು, ಎಂದೂ ಯಾರಿಗೂ ಮೇಕಪ್ ಮಾಡಿ ತಿಳಿಯದ ನಾನು “ಬನಯ್ಯ, ಬೇಗ ಬೇಗ ಒಬ್ಬೊಬ್ಬರೇ… ಅದೇನು ಮಹಾ ನಾನೇ ಮೇಕಪ್ ಹಾಕ್ತೀನಿ’ ಅಂತ ಧೈರ್ಯ ಮಾಡಿ ಕರೆದೆ. ಇವೆಲ್ಲಾ ಕಸರತ್ತು ಮುಗಿದ ನಂತರ ಎಲ್ಲರನ್ನೂ ಸಾಲಾಗಿ ನಿಲ್ಲಿಸಿ ನೋಡಿದಾಗ ವಾಹ್‌ಎನ್ನಿಸಿತು. ನನ್ನ ಬಗ್ಗೆ ನನಗೇ ಹೆಮ್ಮೆ ಮೂಡಿತು.
ಧ್ವನಿವರ್ಧಕದಲ್ಲಿ “ಇದೀಗ ನಾಟಕ… ಭಾರತಿ ಅಂದು-ಇಂದು’ ಅಂತ ನಿರೂಪಕರು ಘೋಷಿಸಿದರು. ವೇದಿಕೆಯ ಹಿಂಭಾಗ ನಿಂತಿದ್ದ ನಾನು ಶಿಷ್ಯಂದಿರ ಬೆನ್ನು ತಟ್ಟಿ “ಚೆನ್ನಾಗಿ ಮಾಡಿ’ ಅಂದು ವೇದಿಕೆಗೆ ಕಳುಹಿಸಿದೆ. ತಾಲೀಮಿನ ಸಂದರ್ಭದಲ್ಲೆಲ್ಲಾ ಕೋಡಂಗಿಯಾಟಗಳನ್ನು ಆಡುತ್ತಿದ್ದವರು ವೇಷ ಧರಿಸಿ, ಮೇಕಪ್ ಹಾಕಿ ವೇದಿಕೆ ಮೇಲೆ ಬಂದ ಕೂಡಲೆ ಮೈಮೇಲೆ ಆಯಾ ಪಾತ್ರಗಳನ್ನೇ ಆವಾಹನೆ ಮಾಡಿಕೊಂಡಂತೆ ನಟಿಸಿದ್ದು ನೋಡಿ ನನಗೇ ಅತ್ಯಾಶ್ಚರ್ಯವಾಗಿತ್ತು. ನಾಟಕ ಚೆನ್ನಾಗಿ ಮೂಡಿ ಬಂದಿದ್ದು ನೋಡಿ ಕಡೆಗೂ ನಾನು ಪಟ್ಟ ಪಾಡು ಸಾರ್ಥಕವಾಯ್ತು ಎಂದುಕೊಂಡು ನಿಟ್ಟುಸಿರುಬಿಟ್ಟೆ. ಪ್ರತಿ ವರ್ಷ ಬರೀ ನೃತ್ಯ ಕಾರ್ಯಕ್ರಮಗಳನ್ನೇ ನೋಡಿ ಬೇಸತ್ತಿದ್ದ ಕಾಲೇಜಿನ ಆಡಳಿತ ಮಂಡಳಿ, ವಿದ್ಯಾರ್ಥಿಗಳೆಲ್ಲರೂ ನಮ್ಮ ನಾಟಕ ನೋಡಿ ಖುಷಿಪಟ್ಟರು. ಆ ದಿನವಂತೂ ಎಲ್ಲರೂ ಅಭಿನಂದನೆ ಹೇಳುವವರೇ…
ಇಂಥ ಸವಿ ನೆನಪುಗಳು, ಕಹಿ ನೆನಪುಗಳಿದ್ದರೂ ಅವುಗಳನ್ನು ಮರೆಸಿ, ಬದುಕಿನಲ್ಲಿ ಆಸಕ್ತಿ ಹುಟ್ಟಿಸಿ, ತುಟಿಗಳ ಮೇಲೆ ನಗೆ ಚಿಮ್ಮಿಸುತ್ತವೆ.
– ಎಲ್. ಗಿರಿಜಾರಾಜ್