ಕೊಪ್ಪಳ: ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ ಸಮಾನ ವೇತನ ಹಾಗೂ ಇತರೆ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನೌಕರರ ಸಂಘದ ಕೊಪ್ಪಳ ವಿಭಾಗದ ನೌಕರರು ನಗರದಲ್ಲಿ ಪಾದಯಾತ್ರೆ-ಜಾಥಾ ನಡೆಸಿ ಸಾರಿಗೆ ಘಟಕದ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಮ್ಮನ್ನು ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ನಿರಂತರ ಹೋರಾಟ ಮಾಡುತ್ತ ಬಂದಿದ್ದೇವೆ. ಸರ್ಕಾರ ಒಂದು ಸಮಿತಿ ರಚಿಸಿ ವರದಿ ನೀಡುವಂತೆ ಆದೇಶಿಸಿದೆ. ಆದರೆ ಏನೂ ಪ್ರಯೋಜವಾಗಿಲ್ಲ. ಸಾರಿಗೆ ನೌಕರರ ಹೊಸ ವೇತನ ಪರಿಷ್ಕರಣೆ 2020ರ ಜ.1ರಿಂದ ಜಾರಿ ಬರಬೇಕಿತ್ತು. ಆದರೆ ಜಾರಿಯಾಗಿಲ್ಲ. ಸಾರಿಗೆ ನೌಕರರು ಬಿಸಿಲು, ಮಳೆ, ಚಳಿ, ಹಗಲು-ರಾತ್ರಿ ಎನ್ನದೇ ದುಡಿಯುತ್ತಿದ್ದೇವೆ. ಆದರೆ ನಮ್ಮ ಬಗ್ಗೆ ಸರ್ಕಾರ ಕನಿಕರ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಂಸ್ಥೆಯಲ್ಲಿರುವ ಟೆಕ್ನಿಕಲ್ ಅಸಿಸ್ಟಂಟ್, ಅರ್ಟಿಸಾನ್, ಚಾರ್ಜ್‌ಮೆನ್, ನಿರ್ವಾಹಕ, ಚಾಲಕ ಕಂ ನಿರ್ವಾಹಕ, ಸಂಚಾರ ನಿಯಂತ್ರಕ, ಸಂಚಾರ ಅಧೀಕ್ಷಕ ಸೇರಿ ಕೆಲವು ಹುದ್ದೆಗಳಿಗೂ ವೇತನ ಆಯೋಗದ ಶಿಫಾರಸ್ಸಿನ ರೀತಿಯಲ್ಲಿ ಸರಿಸಮಾನ ಪ್ರತ್ಯೇಕ ವೇತನ ಶ್ರೇಣಿ ಮಾಡಬೇಕು. ಪರಿಷ್ಕರಿಸಿದ ವೇತನ ಮೊತ್ತಕ್ಕಿಂತ, ನಮ್ಮ ನೌಕರರು ಹೆಚ್ಚಿನ ಮೊತ್ತ ಪಡೆಯುತ್ತಿದ್ದರೆ ಆ ಹೆಚ್ಚಿನ ಮೊತ್ತವನ್ನು ಮೂಲ ವೇತನವೆಂದು ಪರಿಗಣಿಸಬೇಕು. ನೂತನ ವೇತನ ಶ್ರೇಣಿ ರಚಿಸುವಾಗ ಮತ್ತು ಪೇ ಪ್ರೊಟಕ್ಷನ್ ಜಾರಿ ಮಾಡುವಾಗ ಹಾಗೂ ಸರ್ಕಾರಿ ನೌಕರರ ಸರಿಸಮಾನ ವೇತನ ಶ್ರೇಣಿ ಜಾರಿಗೊಳಿಸಲು ಡ್ರಾಯಿಂಗ್ ಆ್ಯಂಡ್ ಇಂಪ್ಲಿಮೆಂಟೇಶನ್ ಕಮಿಟಿಯನ್ನು ನಮ್ಮ ಪ್ರತಿನಿಧಿ ಗಳೊಂದಿಗೆ ರಚಿಸಬೇಕೆಂದು ಒತ್ತಾಯಿಸಿದರು.
ಸಂಸ್ಥೆಯ ಆಡಳಿತ ವರ್ಗ ಹಾಗೂ ಕಾರ್ಮಿಕ ಸಂಘಟನೆಗಳ ಮಧ್ಯೆ 1957ರಿಂದ ಈ ವರೆಗೆ ಆಗಿರುವ ಕೈಗಾರಿಕಾ ಒಪ್ಪಂದ ಪಾಲಿಸಬೇಕು. ಭವಿಷ್ಯ ನಿಧಿ ನ್ಯಾಯ ಮಂಡಳಿಯಲ್ಲಿ ನೂರಾರು ಕೋಟಿ ಹಣವಿದೆ. ಆದ್ದರಿಂದ ಭವಿಷ್ಯ ನಿಧಿ ಕಾಯ್ದೆಯನ್ವಯ ಸೌಲಭ್ಯ ಕಲ್ಪಿಸಬೇಕು. ಮರಣ ಅಥವಾ ನಿವೃತ್ತಿ ಸೌಲಭ್ಯದ ಮೊತ್ತ ಈಗಿರುವ ಮೊತ್ತಕ್ಕಿಂತ ಐದು ಪಟ್ಟು ಹೆಚ್ಚು ಮಾಡಬೇಕು. ಕಾರ್ಮಿಕರು ಕೆಲಸಕ್ಕೆ ಸೇರಿದ ದಿನದಿಂದ ಸೇವಾ ಅವಗಣನೆಗೆ ತೆಗೆದುಕೊಂಡು ಅಂದಿನಿಂದಲೇ ಸರ್ಕಾರಿ ನೌಕರರಂದು ಪರಿಗಣಿಸಿ ಎಲ್ಲ ಕಾರ್ಮಿಕರು ಹಾಗೂ ನೌಕರರಿಗೂ ಪಿಂಚಣಿ ಸೌಲಭ್ಯ ವಿಸ್ತರಿಸುವುದು ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ, ನಗರದ ಕೇಂದ್ರೀಯ ಬಸ್ ನಿಲ್ದಾಣದಿಂದ ವಿಭಾಗೀಯ ಸಾರಿಗೆ ಘಟಕದವರೆಗೂ ಪಾದಯಾತ್ರೆ ನಡೆಸಿಸಾರಿಗೆ ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಶಿವನಗೌಡ, ಶುಭಾಶ್ಚಂದ್ರ,ಪಂಚಯ್ಯ ಹಿರೇಮಠ, ಹನುಮಂತಪ್ಪ ಗಾಣದಾಳ, ಮಹಾಂತೇಶ ಲಕ್ಕಲಕಟ್ಟಿ, ಸಿದ್ದಾರಡ್ಡಿ, ಮುಸ್ತಫಾ, ಎಚ್.ಎಂ. ಪಾಟೀಲ್ ಇತರರು ಇದ್ದರು.