Advertisement

ಯುವಕರಿಗೆ ಸೇನಾಪಡೆ ಜಾಗೃತಿ ಮೂಡಿಸಿ

11:24 AM Dec 08, 2018 | Team Udayavani |

ಕಲಬುರಗಿ: ಜಿಲ್ಲೆಯ ಯುವಕರಿಗೆ ಸೇನಾಪಡೆಯಲ್ಲಿ ಭರ್ತಿಯಾಗುವವರಿಗೆ ಸರ್ಕಾರದಿಂದ ದೊರೆಯುವ ಸವಲತ್ತು ಮತ್ತು ಸೌಲಭ್ಯಗಳ ಕುರಿತು ತಿಳಿವಳಿಕೆ ನೀಡಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇನಾಪಡೆಗೆ ಭರ್ತಿಯಾಗುವ ಹಾಗೆ ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಏರ್ಪಡಿಸಲಾಗಿದ್ದ ಸಶಸ್ತ್ರ ಮೀಸಲು ಪಡೆ ಧ್ವಜ ದಿನಾಚರಣೆಯಲ್ಲಿ ಧ್ವಜ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸೈನಿಕ ಕಲ್ಯಾಣ ಅಥವಾ ಮಾಜಿ ಸೈನಿಕರ ಸಂಘದ ವತಿಯಿಂದ ಜಿಲ್ಲೆಯ ಶಾಲೆ-ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸೇನೆಯಲ್ಲಿ ಭರ್ತಿಯಾಗಲು ಬೇಕಾಗುವ ಸಾಮರ್ಥ್ಯಗಳ ಬಗ್ಗೆ ಹಾಗೂ ಸೇನಾಪಡೆಯಲ್ಲಿ
ಭರ್ತಿಯಾದರೆ ಸಿಗುವ ಸವಲತ್ತುಗಳ ಬಗ್ಗೆ ತಿಳಿವಳಿಕೆ ನೀಡಬೇಕು ಎಂದರು.

ಸಶಸ್ತ್ರ ಮೀಸಲು ಪಡೆಯಲ್ಲಿ ಕೆಲಸ ನಿರ್ವಹಿಸುವುದು ಗೌರವದ ವಿಷಯವಾಗಿದೆ. ಸರ್ಕಾರ ಸೈನಿಕರಿಗೆ ಪ್ರಥಮಾದ್ಯತೆ ನೀಡುವ ಮೂಲಕ ಎಲ್ಲ ಸವಲತ್ತು ಒದಗಿಸುತ್ತಿದೆ. ಜಿಲ್ಲೆಯ ಮಾಜಿ ಸೈನಿಕರು ತಮ್ಮ ತೊಂದರೆಗಳನ್ನು ಲಿಖೀತ ರೂಪದಲ್ಲಿ ತಿಳಿಸಿದರೆ ಕೇಂದ್ರ, ರಾಜ್ಯ ಸರ್ಕಾರದಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕರು ಸೈನಿಕರ ಕಲ್ಯಾಣ ನಿಧಿಗೆ ಆರ್ಥಿಕವಾಗಿ ಸಹಾಯ ಮಾಡಿದರೆ ಸೈನಿಕರನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ. ಅಲ್ಲದೇ ಸೈನಿಕರಿಗೆ, ಮಾಜಿ ಸೈನಿಕರಿಗೆ ಹೆಚ್ಚಿನ ಸೌಲಭ್ಯ ದೊರಕಿಸಲು ಅನುಕೂಲವಾಗುವುದು ಎಂದರು. ನಿವೃತ್ತ ಕ್ಯಾಪ್ಟನ್‌ ಕಾಶಿನಾಥ ಅನುದುರೆ ಮಾತನಾಡಿ, ಮಾಜಿ ಸೈನಿಕರ ಕುಟುಂಬಕ್ಕೆ ಸಹಾಯಾರ್ಥವಾಗಿ ಧ್ವಜ ದಿನಾಚರಣೆ ಮೂಲಕ ಚಂದಾ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.

ಮಾಜಿ ಸೈನಿಕರ ಕಲ್ಯಾಣಾಭಿವೃದ್ಧಿ ಸಂಘದ ಅಧ್ಯಕ್ಷ ಬಸವರಾಜ ಬಿರಾದಾರ ಮಾತನಾಡಿ, ರಾಜ್ಯದ ಎಲ್ಲ ವಿಭಾಗೀಯ ಕೇಂದ್ರಗಳಲ್ಲಿ ಸೇನಾಭರ್ತಿ ಕಾರ್ಯಾಲಯ, ಮಾಜಿ ಸೈನಿಕರ ಹಾಗೂ ಸೈನಿಕರ ಮಕ್ಕಳಿಗೆ ವಸತಿ ನಿಲಯ, ಸೈನಿಕರ ಕ್ಯಾಂಟೀನ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಇದೇ ಮಾದರಿಯಲ್ಲಿ ಕಲಬುರಗಿ ಜಿಲ್ಲೆಯಲ್ಲಿಯೂ ಪ್ರಾರಂಭಿಸಬೇಕು. ಮಾಜಿ ಸೈನಿಕರಿಗೆ ಹಾಗೂ ಸೈನಿಕರಿಗೆ ಅವಶ್ಯಕವಿರುವ ಎಲ್ಲ ಸೌಲಭ್ಯಗಳನ್ನು ದೊರಕಿಸಬೇಕು ಎಂದು ಮನವಿ ಮಾಡಿದರು.

Advertisement

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಪ್ರಭಾರಿ ಉಪನಿರ್ದೇಶಕ ಭೀಮರಾವ್‌ ನಾಂದ್ರೆ, ನಿವೃತ್ತ ಕರ್ನಲ್‌ ರಾಜಶೇಖರ ಕಪಾಟೆ, ಪ್ರೊಬೇಷನರಿ ಐಎಎಸ್‌ ಅಧಿಕಾರಿ ಸ್ನೇಹಲ್‌ ಸುಧಾಕರ ಲೋಖಂಡೆ ಹಾಗೂ ಮಾಜಿ ಸೈನಿಕರು, ಅವಲಂಬಿತರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next