ಮೈಸೂರು: ಹೆಚ್ಚುತ್ತಿರುವ ಪರಿಸರ ಮಾಲಿನ್ಯದ ಬೆನ್ನಲ್ಲೆ ಬಂದಿರುವ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿವಿಧ ಸರ್ಕಾರಿ ಹಾಗೂ ಖಾಸಗಿ ಸಂಘ-ಸಂಸ್ಥೆಗಳು ಜಾಗೃತಿ ಜಾಥಾ, ಸಸಿ ನೆಡುವುದು ಸೇರಿದಂತೆ ಹಲವು ಕಾರ್ಯಕ್ರಮ ನಡೆಸುವ ಮೂಲಕ ನಗರದ ಜನತೆಗೆ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.
ಜಿಲ್ಲಾಡಳಿತ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜನಜಾಗೃತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಕರುಣಾಮಯಿ ಫೌಂಡೇಷನ್ ಸೇರಿದಂತೆ ಮತ್ತಿತರ ಖಾಸಗಿ ಸಂಘ-ಸಂಸ್ಥೆಗಳು ಹಲವು ಕಾರ್ಯಕ್ರಮಗಳನ್ನು ನಡೆಸುವುದರೊಂದಿಗೆ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಸೈಕಲ್‌ಜಾಥಾ: ಪರಿಸರ ದಿನದ ಪ್ರಯುಕ್ತ ಜಿಲ್ಲಾಧಿಕಾರಿಗಳ ಕಚೇರಿಯಿಂದ ಮಂಗಳವಾರ ಮುಂಜಾನೆ ಆಯೋಜಿಸಿದ್ದ ಸೈಕಲ್ ಜಾಥಾದಲ್ಲಿ ವಿವಿಧ ಸರ್ಕಾರಿ ಇಲಾಖೆ ಅಧಿಕಾರಿಗಳು ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಿದರು. “ಪ್ಲಾಸ್ಟಿಕ್ ಮಾಲಿನ್ಯ ಹಿಮ್ಮೆಟ್ಟಿಸಿ’ ಎಂಬ ಘೋಷಣೆಯೊಂದಿಗೆ ಆಯೋಜಿಸಿದ್ದ ಜಾಥಾಕ್ಕೆ ನಗರ ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್ ಚಾಲನೆ ನೀಡಿದರು.
ಸಸಿಗಳ ವಿತರಣೆ: ನಗರದ ಕನಸು ಫೌಂಡೇಶನ್‌ನಿಂದ ಪರಿಸರ ದಿನದ ಅಂಗವಾಗಿ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ “ನವ ವನ ನವ ಚಿಗುರು’ ಶೀರ್ಷಿಕೆಯಲ್ಲಿ ಅರಮನೆಗೆ ಆಗಮಿಸುವ ಪ್ರವಾಸಿಗರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಸಸಿ ವಿತರಿಸಿ ಪರಿಸರ ದಿನ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಜವಂಶಸ್ಥ ಯದುವೀರ್ ಒಡೆಯರ್ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಸಸಿ ವಿತರಿಸಿ, ಪರಿಸರ ದಿನದ ಸಂದೇಶ ಸಾರಿದರು. ಈ ವೇಳೆ ಸಂಸ್ಥಾಪಕ ಅಧ್ಯಕ್ಷ ಅಭಿಷೇಕ್‌ಗೌಡ, ಅಧ್ಯಕ್ಷ ತೇಜಸ್ ಇನ್ನಿತರರಿದ್ದರು.
ಜೆಎಸ್‌ಎಸ್ ಶಾಲೆ: ನಗರದ ಲಕ್ಷ್ಮೀಪುರಂನ ಜೆಎಸ್‌ಎಸ್ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಚೆನ್ನಬಸಪ್ಪ, ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಅರುಣ್ ಬಳಮಟ್ಟಿ ಭಾಗವಹಿಸಿದ್ದರು. ಸರಸ್ವತಿಪುರಂನ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ನಡೆದ ಪರಿಸರ ದಿನ ಕಾರ್ಯಕ್ರಮವನ್ನು ಎನ್‌ಸಿಸಿ 13 ಬೆಟಾಲಿಯನ್‌ನ ಸೇನಾ ಮೆಡಲ್ ಪುರಸ್ಕೃತ ಲೆಫ್ಟಿನೆಂಟ್ ಕರ್ನಲ್ ಜಿ.ಜಗದೀಶ್ ಉದ್ಘಾಟಿಸಿದರು. ಮುಖ್ಯಶಿಕ್ಷಕ ಎ.ಕಾಂತರಾಜ, ಇನ್ಸ್‌ಪೆಕ್ಟರ್ ಎಸ್.ಡಿ.ಸುರೇಶ್ ಕುಮಾರ್ ಇನ್ನಿತರರಿದ್ದರು.
ಹಲವೆಡೆ ಆಚರಣೆ: ವಿಶ್ವ ಪರಿಸರ ದಿನದ ಅಂಗವಾಗಿ ನಗರದ ಹಲವು ಕಡೆಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಿತು. ನಗರದ ಲಕ್ಷಿ$¾àಪುರಂನ ಗೋಪಾಲಸ್ವಾಮಿ ಶಿಶುವಿಹಾರ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನ ಕಾರ್ಯಕ್ರಮ ನಡೆಯಿತು.
ಸಸಿನೆಟ್ಟ ಸಂಸದರು: ವಿಶ್ವ ಪರಿಸರ ದಿನದ ಅಂಗವಾಗಿ ಅರಣ್ಯ ಇಲಾಖೆ ವತಿಯಿಂದ ನಗರದ ಹಿನಕಲ್ ರಿಂಗ್‌ರಸ್ತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್‌ಸಿಂಹ ಸಸಿನೆಡುವ ಮೂಲಕ ಪರಿಸರ ದಿನದ ಆಚರಣೆ ಮಾಡಿದರು. ವನ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಶಾಲೆಯ ಆವರಣದಲ್ಲಿ ಸಸಿನೆಟ್ಟು ವಿದ್ಯಾರ್ಥಿಗಳೊಂದಿಗೆ ಪರಿಸರ ದಿನವನ್ನು ಆಚರಿಸಿದರು.
ವಿಶೇಷ ಮಕ್ಕಳ ಆಚರಣೆ: ನಗರದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಕರುಣಾಮಯಿ ಫೌಂಡೇಷನ್ ಮಕ್ಕಳು ವಿಶೇಷವಾಗಿ ಆಚರಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಫೌಂಡೇಷನ್‌ನ ವಿಶೇಷ ಮಕ್ಕಳು ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅವರಿಗೆ ವಿವಿಧ ಬಗೆಯ ಸಸಿಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆ ಮುಖ್ಯಸ್ಥ ಚಿರಣ್‌ಕುಮಾರ್, ಕೆ.ವಿ.ಸೌಮ್ಯ ಮತ್ತಿತರರಿದ್ದರು.
ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕರ ಹೊಣೆ, ನಮ್ಮ ಮೈಸೂರು ಸಂಸ್ಥಾನದ ಹಳೆ ಭಾಗವನ್ನು ಗಮನಿಸಿದರೆ ದಟ್ಟನೆ ಹಸಿರು ಪ್ರದೇಶ ಕಾಣುತ್ತದೆ. ಇದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರವಾಗಿದೆ. ಹೀಗಾಗಿ ಇಂದಿನ ಯುವಪೀಳಿಗೆ ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು.
-ಯದುವೀರ್ ಒಡೆಯರ್, ರಾಜವಂಶಸ್ಥ