ಚಿಕ್ಕೋಡಿ: ತಾಲೂಕಿನ ಸದಲಗಾ ಎಪಿಎಂಸಿ ಮಾರುಕಟ್ಟೆ ಜಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಪುತ್ಥಳಿ ಮತ್ತು ಉದ್ಯಾನ ನಿರ್ಮಾಣಕ್ಕೆ ಜಾಗ ನೀಡಬೇಕೆಂದು ಒತ್ತಾಯಿಸಿ ಸದಲಗಾ ಪಟ್ಟಣದ ಬೌದ್ಧ ಸಮುದಾಯದವರು ಬೃಹತ್ ಪ್ರತಿಭಟನೆ ನಡೆಸಿ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಪುರಸಭೆ ಸದಸ್ಯ ಸಂತೋಷ ನವಲೆ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪಟ್ಟಣದ ಬೌದ್ಧ ಸಮಾಜದ ನೂರಾರು ಜನರು ಪುರಸಭೆಗೆ ಆಗಮಿಸಿ ಎಷ್ಟೋ ವರ್ಷಗಳಿಂದ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಮೂರ್ತಿ ಸ್ಥಾಪಿಸಬೇಕೆನ್ನುವುದು ಎಲ್ಲರ ಬೇಡಿಕೆಯಾಗಿದೆ. ಆದರೆ ಇನ್ನೂವರೆಗೆ ಆಗಿಲ್ಲವೆಂದು ಮನವಿಯಲ್ಲಿ ತಿಳಿಸಿದರು.
ಟಿಪಿಸಿ ನಂ 3309/51/3 ಎಪಿಎಂಸಿ ಮಾರುಕಟ್ಟೆ ಅನೇಕ ವರ್ಷಗಳಿಂದ ಖಾಲಿಯಿದ್ದು, ಈ ಜಾಗದಲ್ಲಿ ಡಾ. ಅಂಬೇಡ್ಕರ ಅವರ ಭವ್ಯ ಪುತ್ಥಳಿ ಮತ್ತು ಉದ್ಯಾನ ನಿರ್ಮಾಣ ಮಾಡಲು ಯೋಗ್ಯವಾದ ಜಾಗವಿದ್ದು, ಇಲ್ಲಿ ಸ್ಥಾಪಿಸಬೇಕೆನ್ನುವುದು ಸಮಾಜದ ಬೇಡಿಕೆಯಾಗಿದೆ. ಇಲ್ಲಿ ಜಾಗ ನೀಡಿದರೆ ಅನುಕೂಲವಾಗುತ್ತದೆ. ಸದಲಗಾ ಪಟ್ಟಣದಲ್ಲಿ ಇನ್ನೂವರೆಗೆ ಯಾವುದೇ ಉದ್ಯಾನ ಇಲ್ಲ, ಎಪಿಎಂಸಿ ಮಾರುಕಟ್ಟೆಯಲ್ಲಿ ಡಾ. ಅಂಬೇಡ್ಕರ ಪುತ್ಥಳಿ ಮತ್ತು ಉದ್ಯಾನ ನಿರ್ಮಾಣ ಮಾಡಿದರೆ ಸದಲಗಾ ಪಟ್ಟಣಕ್ಕೆ ಯೋಗ್ಯವಾದ ಹೆಸರು ಬರುತ್ತದೆ ಎಂದು ಆಗ್ರಹಿಸಿದರು.
ಮನವಿ ಸ್ವಿಕರಿಸಿದ ಮುಖ್ಯಾಧಿಕಾರಿ ವಿವೇಕ ಜೋಶಿ, ಡಾ.ಬಾಬಾಸಾಹೇಬ ಅಂಬೇಡ್ಕರ ಪುತ್ಥಳಿ ಹಾಗೂ ಉದ್ಯಾನವನ ನಿರ್ಮೀಸಲು ಬೇಡಿಕೆ ಮಾಡಿದ ಎ.ಪಿ.ಎಂ.ಸಿ ಜಾಗದ ಬಗ್ಗೆ ಪರಿಶೀಲಿಸಿ, ಜಾಗದ ಬಗ್ಗೆ ಚಿಕ್ಕೋಡಿ ತಹಶೀಲ್ದಾರ ಹಾಗೂ ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ ಇವರಿಗೆ ಮಾಹಿತಿ ನೀಡಲಾಗುತ್ತದೆ.ಹಾಗೂ ಜಾಗ ಮಂಜೂರಾತಿಗಾಗಿ ಪ್ರಯತ್ನಿಸಲಾಗುವದು ಎಂದು ಲಿಖೀತ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಪುರಸಭೆ ಸದಸ್ಯ ಭಿಮರಾವ ಮಾಳಗೆ, ಸಂತೋಷ ನವಲೆ, ಪುಟ್ಟು ಶಿಂಗೆ, ಅಜರುದ್ಧೀನ ಶೇಖಜಿ, ರಾಹುಲ ಕುರಣೆ, ಸಂಜಯ ನವಲೆ, ಸುರೇಶ ಮಾದಿಗ, ಪ್ರಕಾಶ ಡೋಣವಾಡೆ, ಮಹೇಶ ಮಾಂಗ, ವಿನಾಯಕ ಮಾಳಗೆ, ಸುನಿಲ ನಂದೆ, ಸಚಿನ್ ಮಾಳಗೆ, ಪ್ರವೀಣ ಕುರಣೆ, ಪಂಕಜ ಗಸ್ತೆ ಸೇರಿದಂತೆ ಬುದ್ಧ-ಅಂಬೇಡ್ಕರ ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಬೌದ್ಧ ಸಮಾಜದ ಮುಖಂಡರು ಹಾಜರಿದ್ದರು.