ಜೈಪುರ್:ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಬೇಡಿಕೆಯನ್ನು ಕಾಂಗ್ರೆಸ್ ಹೈಕಮಾಂಡ್ ಒಪ್ಪದಿದ್ದಲ್ಲಿ ಭಾರತ್ ಜೋಡೋ ಯಾತ್ರೆ ರಾಜಸ್ಥಾನ್ ಪ್ರವೇಶಿಸಲು ಬಿಡುವುದಿಲ್ಲ ಎಂದು ಪ್ರಭಾವಿ ಗುರ್ಜಾರ್ ಸಮುದಾಯದ ಮುಖಂಡ ವಿಜಯ್ ಸಿಂಗ್ ಬೈನ್ಸ್ಲಾ ಎಚ್ಚರಿಕೆ ನೀಡುವ ಮೂಲಕ ರಾಹುಲ್ ಗಾಂಧಿಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.
ಇದನ್ನೂ ಓದಿ:ಮಹಾ ಗಡಿ ವಿವಾದ; ವಿಪಕ್ಷಗಳ ನಾಯಕರನ್ನೂ ಸೇರಿಸಿ ಸಲಹಾ ಸಮಿತಿ ರಚಿಸಲು ಸಿದ್ದರಾಮಯ್ಯ ಆಗ್ರಹ
ಗುರ್ಜಾರ್ ಸಮುದಾಯದ ಬಾಕಿ ಉಳಿದಿರುವ ಸಮಸ್ಯೆಗಳನ್ನು ಕಾಂಗ್ರೆಸ್ ಪಕ್ಷ ಕೂಡಲೇ ಪರಿಹರಿಸಬೇಕು ಎಂದು ಸಿಂಗ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಪೈಲಟ್ ಅವರ ಬೇಡಿಕೆಯನ್ನು ಈಡೇರಿಸಲು ಒಪ್ಪದಿದ್ದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ತಡೆಯಲು ಗುರ್ಜಾರ್ ಆರಕ್ಷಣ್ ಸಂಘರ್ಷ್ ಸಮಿತಿ ಬುಧವಾರದಿಂದ (ನವೆಂಬರ್ 23) ಎಲ್ಲಾ ರೀತಿಯ ಸಿದ್ಧತೆ ನಡೆಸುತ್ತಿರುವುದಾಗಿ ಹೇಳಿದರು.
ಭಾರತ್ ಜೋಡೋ ಯಾತ್ರೆ ಡಿಸೆಂಬರ್ 3ರಂದು ರಾಜಸ್ಥಾನ್ ಪ್ರವೇಶಿಸುವುದನ್ನು ತಡೆಯುವುದಾಗಿ ಬೈನ್ಸ್ಲಾ ನೀಡುತ್ತಿರುವ ಎರಡನೇ ಎಚ್ಚರಿಕೆ ಇದಾಗಿದೆ. ರಾಜಸ್ಥಾನದಲ್ಲಿ ಪೈಲಟ್ ಅವರನ್ನು ರಾಹುಲ್ ಗಾಂಧಿ ಮತ್ತು ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ದೌಸಾದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ಒತ್ತಾಯಿಸಿದ್ದಾರೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ನಾಲ್ಕು ವರ್ಷಗಳನ್ನು ಪೂರೈಸಿದೆ. ಇನ್ನುಳಿದ ಒಂದು ವರ್ಷಗಳ ಕಾಲ ಪೈಲಟ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಬೇಕು. ಒಂದು ವೇಳೆ ರಾಹುಲ್ ಪೈಲಟ್ ಅವರನ್ನು ಸಿಎಂ ಎಂದು ಘೋಷಿಸಿದರೆ, ಅವರ ಭಾರತ್ ಜೋಡೋ ಯಾತ್ರೆಯನ್ನು ಸ್ವಾಗತಿಸುತ್ತೇವೆ. ಇಲ್ಲದಿದ್ದಲ್ಲಿ ವಿರೋಧಿಸುವುದಾಗಿ ಬೈನ್ಸ್ಲಾ ತಿಳಿಸಿದ್ದಾರೆ.