ಹಾಸನ: ತಮಿಳುನಾಡಿನಲ್ಲಿ ಜಾರಿ ಮಾಡಿರುವಂತೆ ರಾಜ್ಯದಲ್ಲಿಯೂಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಶೇ.7.5 ಮೀಸಲಾತಿಯನ್ನು ವೈದ್ಯಕೀಯ, ಎಂಜಿನಿಯರಿಂಗ್,ಕೃಷಿ, ಪಶು ವೈದ್ಯಕೀಯ ಸೇರಿ ಉನ್ನತ ಶಿಕ್ಷಣಸಂಸ್ಥೆಗಳ ಪ್ರವೇಶದಲ್ಲಿ ಜಾರಿಗೊಳಿಸಬೇಕು ಎಂದು ಜೆಡಿಎಸ್ ನಾಯಕ, ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ತಮಿಳುನಾಡಿನಲ್ಲಿ ಮೀಸಲಾತಿ ಜಾರಿ ಮಾಡಿದಂತೆ ಕರ್ನಾಟಕದಲ್ಲಿ ಏಕೆ ಸಾಧ್ಯವಾಗುವುದಿಲ್ಲ? ಸರ್ಕಾರಿ ಶಾಲೆ ಉಳಿಸಲು ಮತ್ತುಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆಭವಿಷ್ಯ ರೂಪಿಸಲು ಇಂತಹ ಮೀಸಲಾತಿ ಅಗತ್ಯ. ಸರ್ಕಾರಿ ಶಾಲೆಗಳಲ್ಲಿ ಓದಿದ ಹಾಗೂ ಗ್ರಾಮೀಣ ಪ್ರದೇಶದ ರೈತರ ಮಕ್ಕಳೂ ವೈದ್ಯರು, ಎಂಜಿನಿಯರ್ ಆಗಬೇಕು. ಹಾಗಾಗಿ ಸರ್ಕಾರ ಈ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಶಿಕ್ಷಣದ ವ್ಯಾಪಾರಸ್ಥರಿಂದ ಸಲಹೆ: ಉನ್ನತ ಶಿಕ್ಷಣವನ್ನು ವ್ಯಾಪಾರ ಮಾಡಿ ಕೊಂಡಿರುವ ಪಿಇಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ದೊರೆಸ್ವಾಮಿಯಂತವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವ ಶಿಕ್ಷಣ ತಜ್ಞರಾಗಿದ್ದಾರೆ. ಒಂದು ಎಂಜನಿಯರಿಂಗ್ ಸೀಟಿಗೆ 30 ರಿಂದ 50 ಲಕ್ಷರೂ. ಪಡೆಯುವ ದೊರೆಸ್ವಾಮಿ, ಬಡವರ ಮಕ್ಕಳ ಶಿಕ್ಷಣದ ಬಗ್ಗೆ ಚಿಂತಿಸಲು ಸಾಧ್ಯವೇ? ಅವರ ಶಿಕ್ಷಣ ಸಂಸ್ಥೆಯಲ್ಲಿ ಬಡವರಿಗೆ ಒಂದು ಸೀಟನ್ನಾದರೂ ಉಚಿತವಾಗಿ ಕೊಟ್ಟಿದ್ದಾರೆಯೇ? ಇಂತಹವರ ಸಲಹೆ ಪಡೆದರೆ, ರಾಜ್ಯದಲ್ಲಿ ಸರ್ಕಾರಿ ಕಾಲೇಜುಗಳು ಉಳಿಯುತ್ತವೆಯೇ? ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳವರ ಹಿಡಿತದಲ್ಲಿದೆ ಎಂದು ಆರೋಪಿಸಿದರು.
ಉನ್ನತ ಶಿಕ್ಷಣ ಸಂಸ್ಥೆಗಳೂ ಮುಚ್ಚುತ್ತವೆ: ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಬೇಕು ಎಂದು ದೊರೆಸ್ವಾಮಿ ಸಲಹೆ ನೀಡುವುದಾದರೆಅವರು ಎಷ್ಟು ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸಿದ್ದಾರೆ ಎಂದು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ ರೇವಣ್ಣಅವರು, ಉನ್ನತ ಶಿಕ್ಷಣದ ಹೆಸರಿನಲ್ಲಿ ಬಡವರನ್ನು ಲೂಟಿ ಮಾಡುವಇಂತಹವರ ಸಲಹೆಗಳನ್ನು ಸರ್ಕಾರ ಪಡೆದರೆ ಸರ್ಕಾರದ ಉನ್ನತ ಶಿಕ್ಷಣ ಸಂಸ್ಥೆಗಳು ಮಚ್ಚಿಹೋಗುತ್ತವೆ. ಈಗಾಗಲೇ ಸರ್ಕಾರಿ ಶಾಲೆಗಳುಮಚ್ಚುತ್ತಿವೆ. ಮುಂದಿನ ದಿನಗಳಲ್ಲಿ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳೂ ಮುಚ್ಚಿ ಹೋಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ಹಾಸನ ಜಿಲ್ಲೆಯ ಹೋಬಳಿ ಕೇಂದ್ರದಲ್ಲಿ ಸ್ಥಾಪನೆಯಾಗಿದ್ದ ಸಕಲೇಶಪುರ ತಾಲೂಕು ಹೆತ್ತೂರು ಮತ್ತು ಹೊಳೆನರಸೀಪುರ ತಾಲೂಕು ಹಳ್ಳಿಮೈಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಮುಚ್ಚುತ್ತಿವೆ. ಸರ್ಕಾರಕ್ಕೆ ಸಲಹೆ ನೀಡುವ ಶಿಕ್ಷಣ ತಜ್ಞರು ಈ ಕಾಲೇಜುಗಳನ್ನು ಉಳಿಸಲಿ ಎಂದು ಸವಾಲು ಹಾಕಿದರು.
ಶಿಕ್ಷಣದ ವ್ಯಾಪಾರ ಮಾಡುತ್ತಿರುವವರಿಂದ ಸರ್ಕಾರ ಸಲಹೆ ಪಡೆಯುವ ಅಗತ್ಯವಿಲ್ಲ. ಉದ್ದಿಮೆಗಳ ಸಿಎಸ್‌ಆರ್ ನಿಧಿಯನ್ನು ಬಳಸಿ ಸರ್ಕಾರಿ ಶಾಲಾ, ಕಾಲೇಜುಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲಿ ಎಂದು ಸಲಹೆ ನೀಡಿದರು. ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ ಸರ್ಕಾರ ಈ ನಿಟ್ಟಿನಲ್ಲಿ ನಿರ್ದೇಶನ ನೀಡಿ ಸಿಎಸ್‌ಆರ್ ಫಂಡ್ ಅನ್ನು ಸರ್ಕಾರಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಬಳಸಲು ಆದೇಶ ನೀಡಲಿ ಎಂದರು ಆಗ್ರಹಪಡಿಸಿದರು.