Advertisement

ಮರಾಠರಿಗೆ ಮೀಸಲಾತಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ

11:10 PM Jun 30, 2019 | Sriram |

ಬಾಂಬೆ ಹೈಕೋರ್ಟ್‌ ಇತ್ತೀಚೆಗೆ ಮರಾಠ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವ ತೀರ್ಮಾನವನ್ನು ಎತ್ತಿ ಹಿಡಿದಿರುವ ಕುರಿತು ವ್ಯಾಪಕ ಚರ್ಚೆಯಾಗುತ್ತಿದೆ.ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಎಂಬ ನೆಲೆಯಲ್ಲಿ ಶೇ. 16 ಮೀಸಲಾತಿ ನೀಡಲು ಮಹಾರಾಷ್ಟ್ರ ಸರಕಾರ ತೀರ್ಮಾನಿಸಿತ್ತು. ಆದರೆ ನ್ಯಾಯಾಲಯ ಶೇ. 12ರಿಂದ 13ರ ತನಕ ಮೀಸಲಾತಿ ನೀಡಬಹುದು ಎಂದು ಹೇಳಿ ಈ ತೀರ್ಮಾನವನ್ನು ಎತ್ತಿಹಿಡಿದಿದೆ.

Advertisement

ಇತ್ತೀಚೆಗಿನ ದಿನಗಳಲ್ಲಿ ನ್ಯಾಯಾಲಯ ಪ್ರಬಲ ಸಮುದಾಯದವರ ಮೀಸಲಾತಿ ಬೇಡಿಕೆಯನ್ನು ಒಪ್ಪಿಕೊಂಡು ನೀಡಿರುವ ಅಪರೂಪದ ತೀರ್ಪು ಇದು. ರಾಷ್ಟ್ರೀಯ ನೆಲೆಯಲ್ಲೂ ಈ ತೀರ್ಪು ವಿವಿಧ ಪರಿಣಾಮಗಳನ್ನು ಬೀರುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಇದು ಮುಖ್ಯವಾಗುತ್ತದೆ.

ಮೀಸಲಾತಿಗಾಗಿ ತೀವ್ರ ಹೋರಾಟ ಮಾಡಿದ್ದ ರಾಜಕೀಯವಾಗಿ ಪ್ರಬಲರಾಗಿರುವ ಮರಾಠ ಸಮುದಾಯಕ್ಕೆ ಈ ತೀರ್ಪಿನಿಂದ ಖುಷಿಯಾಗಿರಬಹುದು. ಅಂತೆಯೇ ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆಯನ್ನು ಎದುರಿಸಲಿರುವ ಮಹಾರಾಷ್ಟ್ರದ ದೇವೇಂದ್ರ ಫ‌ಡ್ನವಿಸ್‌ ನೇತೃತ್ವದ ಸಮ್ಮಿಶ್ರ ಸರಕಾರಕ್ಕೂ ಚುನಾವಣೆಯಲ್ಲಿ ಪ್ರತಿಪಾದಿಸಲೊಂದು ಪ್ರಬಲವಾದ ಅಸ್ತ್ರ ಸಿಕ್ಕಿದಂತಾಗಿದೆ. ತೀರ್ಪಿನ ಫ‌ಲವಾಗಿ ಮಹಾರಾಷ್ಟ್ರದಲ್ಲಿ ಶಿಕ್ಷಣ ಮತ್ತು ಸರಕಾರಿ ನೌಕರಿಯಲ್ಲಿ ಶೇ. 65 ಮೀಸಲಾತಿ ನೀಡಿದಂತಾಗಿದೆ. ಈ ವಿಚಾರದಲ್ಲಿ ಮಹಾರಾಷ್ಟ್ರಕ್ಕಿಂತ ಮೇಲಿನ ಸ್ಥಾನದಲ್ಲಿರುವುದು ಶೇ. 65 ಮೀಸಲಾತಿ ನೀಡಿರುವ ತಮಿಳುನಾಡು ಮಾತ್ರ. ಸುಪ್ರೀಂ ಕೋರ್ಟ್‌ ಎಲ್ಲ ರೀತಿಯ ಮೀಸಲಾತಿಗೆ ಶೇ. 50ರ ಗಡು ವಿಧಿಸಿದ್ದರೂ ಸರಕಾರಗಳು ಸಮುದಾಯಗಳ ಒತ್ತಡಕ್ಕೆ ಮಣಿದು ಹೊಸ ಹೊಸ ಮೀಸಲಾತಿಯನ್ನು ಘೋಷಿಸುತ್ತಲಿವೆ. ಇದೀಗ ಮಹಾರಾಷ್ಟ್ರದ ಮೀಸಲಾತಿ ಸುಪ್ರೀಂ ಕೋರ್ಟ್‌ ಮೆಟ್ಟಲೇರಿದ್ದು, ಸರ್ವೋಚ್ಚ ನ್ಯಾಯಾಲಯ ನೀಡುವ ತೀರ್ಪು ಈ ಮಾದರಿ ಇರುವ ಹಲವು ಮೀಸಲಾತಿ ಬೇಡಿಕೆಗಳ ಭವಿಷ್ಯವನ್ನು ನಿರ್ಧರಿಸಲಿದೆ. ಹೀಗೆ ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆಯನ್ನು ಈಡೇರಿಸುತ್ತಾ ಹೋದರೆ ಹೊಸ ಬೇಡಿಕೆಗಳು ಹುಟ್ಟಿಕೊಳ್ಳಬಹುದು ಎನ್ನುವುದು ಮೀಸಲಾತಿಯನ್ನು ವಿರೋಧಿಸುವವರ ವಾದ. ಒಂದರ್ಥದಲ್ಲಿ ಇದು ನಿಜವೂ ಹೌದು. ಗುಜರಾತ್‌ನಲ್ಲಿ ಪಟೇಲ್‌ ಸಮುದಾಯದವರು, ಹರ್ಯಾಣದಲ್ಲಿ ಜಾಟರು, ಆಂಧ್ರದಲ್ಲಿ ಕಾಪು ಸಮುದಾಯದವರು, ರಾಜಸ್ಥಾನದಲ್ಲಿ ಗುಜ್ಜರ್‌ಗಳು ಈಗಾಗಲೇ ಮೀಸಲಾತಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲೇ ಧಂಗರ್‌ ಸಮುದಾಯದವರು ಕೂಡಾ ಮೀಸಲಾತಿಗಾಗಿ ಧ್ವನಿಯೆತ್ತಿದ್ದಾರೆ.

ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಸಲುವಾಗಿ ಪ್ರಾರಂಭವಾಗಿದ್ದ ಮೀಸಲಾತಿ ವ್ಯವಸ್ಥೆ ಕ್ರಮೇಣ ರಾಜಕೀಯ ಅಧಿಕಾರ ಗಳಿಸುವ ಅಸ್ತ್ರವಾಗಿ ಬದಲಾಗಿರುವುದು ಅಪಾಯಕಾರಿ ಬೆಳವಣಿಗೆ. ಈಗ ಪ್ರತಿ ಪಕ್ಷವೂ ಚುನಾವಣೆ ಕಾಲದಲ್ಲಿ ಮೀಸಲಾತಿ ಆಮಿಷವೊಡ್ಡುವುದು ಮಾಮೂಲಾಗಿದೆ. ನರೇಂದ್ರ ಮೋದಿ ಸರಕಾರವೇ ಮೊದಲ ಅವಧಿಯ ಕಡೆಯ ದಿನಗಳಲ್ಲಿ ಮೇಲ್ವರ್ಗದವರಿಗೆ ಶೇ. 10 ಮೀಸಲಾತಿ ಘೋಷಿಸಿತ್ತು. ಸಾಮಾಜಿಕ ನ್ಯಾಯಕ್ಕಾಗಿ ಶುರುವಾದ ಮೀಸಲಾತಿ ತನ್ನ ಸಾಧ್ಯತೆಯನ್ನು ವಿಸ್ತರಿಸಿಕೊಂಡಿದ್ದು, ಅಧಿಕಾರದ ಪಡಸಾಲೆಯಲ್ಲೀಗ ಮುಖ್ಯ ಪಾತ್ರವನ್ನು ನಿಭಾಯಿಸುತ್ತಿದೆ. ಹಿಂದುಳಿಯುವಿಕೆಯೇ ರಾಜಕೀಯವಾಗಿ ಪ್ರಬಲವಾಗಲು ಸುಲಭ ದಾರಿ ಎಂಬ ಗ್ರಹಿಕೆಗೆ ಕಾರಣವಾಗಿರುವುದು ದೇಶದ ಸಾಮಾಜಿಕ ಸ್ವಾಸ್ಥ್ಯದ ನೆಲೆಯಲ್ಲಿ ಉತ್ತಮ ಬೆಳವಣಿಗೆಯಲ್ಲ. ಸಂವಿಧಾನ ಕತೃìಗಳು ಯಾವ ಉದ್ದೇಶದಿಂದ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೋ ಅದರಿಂದ ಇಂದು ಅದು ಸಂಪೂರ್ಣವಾಗಿ ವಿಮುಖವಾಗಿದೆ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಎಲ್ಲರೂ ಸಮಾನರಾಗಬೇಕೆಂಬ ಸದುದ್ದೇಶದಿಂದ ನಿಗದಿತ ಅವಧಿಗೆ ಮೀಸಲಾತಿಯನ್ನು ಒದಗಿಸಬೇಕೆಂದು ಸಂವಿಧಾನದಲ್ಲಿ ಹೇಳಲಾಗಿತ್ತು.

ಇಂದಿನ ರಾಜಕೀಯ ವ್ಯವಸ್ಥೆ ಈ ಅಂಶವನ್ನು ಮರೆಮಾಚಿ ಮತ ಗಳಿಸಲು ಅವಕಾಶವಿರುವಲೆಲ್ಲ ಮೀಸಲಾತಿಯನ್ನು ಘೋಷಿಸುತ್ತಿದೆ ಇಲ್ಲವೆ ಮೀಸಲಾತಿ ಹೋರಾಟಕ್ಕೆ ಕುಮ್ಮಕ್ಕು ನೀಡುತ್ತಿದೆ. ಹೀಗಾಗಿ ಸಮಾಜದಲ್ಲಿಂದು ಹಿಂದುಳಿಯಲು ಸ್ಪರ್ಧೆ ಏರ್ಪಟ್ಟಿದೆ.

Advertisement

ಮೀಸಲಾತಿ ನೀಡಿದ ಪ್ರಮಾಣಕ್ಕುನುಗುಣವಾಗಿ ದೇಶದಲ್ಲಿ ಉದ್ಯೋಗಗಳು ಇವೆಯೇ ಎನ್ನುವುದು ಈಗ ಕೇಳಬೇಕಾದ ಪ್ರಶ್ನೆ. ಜನರಿಗೆ ಗುಣಮಟ್ಟದ ಶಿಕ್ಷಣ ಮತ್ತು ನೌಕರಿಗಳನ್ನು ಒದಗಿಸುವುದು ಸರಕಾರಗಳ ಕರ್ತವ್ಯ. ಈ ವ್ಯವಸ್ಥೆ ಇಲ್ಲದೆ ಬರೀ ಮೀಸಲಾತಿಯನ್ನು ಮಾತ್ರ ಹೆಚ್ಚಿಸುತ್ತಾ ಹೋಗುವುದರಿಂದ ಸರಕಾರಿ ನೌಕರಿಗಳ ಅವಕಾಶ ಕಡಿಮೆಯಾಗುತ್ತಿದೆ. ಉದ್ಯೋಗ ಸೃಷ್ಟಿಯಲ್ಲಿ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಆದರೆ ರಾಜಕೀಯ ವ್ಯವಸ್ಥೆ ಈ ಸತ್ಯವನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಇದರ ಬದಲಾಗಿ ಮೀಸಲಾತಿಯಂಥ ಆಮಿಷಗಳನ್ನು ಒಡ್ಡಿ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next