Advertisement

ಪೌರ ಕಾರ್ಮಿಕರಿಗೆ ಸರ್ಕಾರಿ ಸೌಲಭ್ಯದ ಅರಿವು ಮೂಡಿಸಿ

05:33 PM Jun 09, 2018 | |

ಬಾಗಲಕೋಟೆ: ಪೌರ ಕಾರ್ಮಿಕರಿಗೆ ಸರಕಾರ ವಿವಿಧ ಯೋಜನೆ ರೂಪಿಸಿದ್ದು, ಈ ಯೋಜನೆಗಳ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ ಹೇಳಿದರು.

Advertisement

ನಗರದಲ್ಲಿ ಮ್ಯಾನುವಲ್‌ ಸ್ಯಾವೆಂಜರ್ ನೇಮಕಾತಿ ಪ್ರತಿಬಂಧಕ ಮತ್ತು ಅವರ ಪುನರ್‌ ವಸತಿ ಅಧಿ ನಿಯಮ 2013 ಅನುಷ್ಠಾನ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಜಿಲ್ಲೆಯ ನಗರ ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಿ ಬರುವ ಮಲ ಹೊರುವ ಕಾರ್ಯದಲ್ಲಿ ತೊಡಗಿರುವವರ ಸಮೀಕ್ಷೆ ಕೈಗೊಂಡಿದ್ದು, ಜಿಲ್ಲೆಯಲ್ಲಿ ಮಲ ಹೊರುವ ಕೆಲಸದಲ್ಲಿ ಯಾರು ತೊಡಗಿರುವುದಿಲ್ಲವೆಂದು ಸರಕಾರಕ್ಕೆ ವರದಿ ಸಲ್ಲಿಸಿದ್ದಿರಿ, ಆದರೆ ಬಾಗಲಕೋಟೆ ನಗರದಲ್ಲಿ ಭಂಗಿ ಸಮಾಜದವರು ಇದ್ದ ಬಗ್ಗೆ ಮಾಹಿತಿ ಬಂದಿದ್ದು, ಅವರನ್ನು ಭೇಟಿ ಮಾಡಿ ಮಾಹಿತಿ ಪಡೆದು ಆ ಕುಟುಬದ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜವಾಬ್ದಾರಿತನದಿಂದ ಪುನಃ ಸಮೀಕ್ಷೆ ಕೈಗೊಂಡು ಮಲ ಹೊರುತ್ತಿರುವ ಕಾರ್ಯ ಮಾಡುವವರನ್ನು ಗುರುತಿಸುವ ಕೆಲಸವಾಗಬೇಕು. ಒಂದು ವೇಳೆ ಸಮೀಕ್ಷೆ ನಡೆದ ನಂತರ ಮಲ ಹೊರುತ್ತಿರುವವರು ಕಂಡು ಬಂದಲ್ಲಿ ಆ ವ್ಯಾಪ್ತಿಯಲ್ಲಿ ಬರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು. ಜಿಲ್ಲೆಯಲ್ಲಿರುವ ಸಫಾಯಿ ಕರ್ಮಚಾರಿಗಳಿಗೆ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಚರ್ಚಿಸಿದ ಅವರು ಸಫಾಯಿ ಕರ್ಮಚಾರಿಗಳು ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಬೇಕು. ಕೆಲಸ ಮಾಡುತ್ತಿರುವಾಗ ಆರೋಗ್ಯ ರಕ್ಷಕ ಕವಚ, ಸಮವಸ್ತ್ರವನ್ನು ಕಡ್ಡಾಯಗೊಳಿಸಬೇಕು ಎಂದು ತಿಳಿಸಿದರು. ಪೌರ ಕಾರ್ಮಿಕರ ಗೃಹ ಯೋಜನೆಯಡಿ ಬಾಗಲಕೋಟೆ ನಗರ ಪ್ರದೇಶದಲ್ಲಿ 3, ತೇರದಾಳದಲ್ಲಿ 9, ಜಮಖಂಡಿಯಲ್ಲಿ 12, ಕೆರೂರ 6 ಸೇರಿ ಒಟ್ಟು 30 ಮನೆಗಳನ್ನು ನಿರ್ಮಾಣ ಮಾಡಲು ಕೈಗೆತ್ತಿಕೊಳ್ಳಲಾಗಿದೆ. ಅಲ್ಲದೇ ವಿವಿಧ ಇಲಾಖೆಯಿಂದ ನೀಡುವ ಸೌಲಭ್ಯಗಳ ಕುರಿತು ಒಂದು ದಿನದ ಕಾರ್ಯಾಗಾರ
ನಡೆಸಿ 15 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಸೌಲಭ್ಯಗಳ ಅರಿವು ಮೂಡಿಸಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.

ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಸಫಾಯಿ ಕರ್ಮಚಾರಿಗಳಿಗೆ ನೀಡಲಾದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿ ಅವರಿಂದ ಅರ್ಜಿ ಪಡೆದು ಸೌಲಭ್ಯ ತಲುಪಿಸುವ ಕಾರ್ಯ ಕೈಗೊಳ್ಳಬೇಕು. ಒಂದು ತಿಂಗಳಲ್ಲಿ ಅರ್ಜಿ ಪಡೆಯುವ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಸೌಲಭ್ಯಗಳ ಕುರಿತು ಅರಿವು ಕಾರ್ಯಕ್ರಮ ಹಾಕಿಕೊಳ್ಳುವಂತೆ ನಿಗಮದ ಜಿಲ್ಲಾ ಅಧಿ ಕಾರಿಗಳಿಗೆ ಆಯೋಗದ ಸದಸ್ಯರು ಸೂಚಿಸಿದರು. ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಬಾಹ್ಯ ಮೂಲ ಸಿಬ್ಬಂದಿಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿದ ವೆಜಿಸ್‌ನ ಪ್ರಕಾರ ಅವರಿಗೆ ಸಂಬಳ ನೀಡಬೇಕು. ಪ್ರತಿ ತಿಂಗಳು ಅವರ ಖಾತೆಗೆ ಎಪಿಎಲ್‌, ಇಎಸ್‌ಐ ಕಡಿತಗೊಳಿಸಬೇಕು. ಪ್ರತಿ ವರ್ಷ ಬದಲಾದ ವೇಜಿಸ್‌ ಬಗ್ಗೆ ಇಲಾಖೆಗಳಿಗೆ ತಿಳಿಸುವ ಕೆಲಸವಾಗಬೇಕು ಎಂದು ಕಾರ್ಮಿಕ
ನಿರೀಕ್ಷಕರಿಗೆ ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಹನುಮಂತಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಔದ್ರಾಮ, ನಗರಸಭೆ ಆಯುಕ್ತ ಗಣಪತಿ ಪಾಟೀಲ ಸೇರಿದಂತೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next