ತೆಕ್ಕಟ್ಟೆ : ಕಲಿಕೆಯ ಜತೆ ಧನಾತ್ಮಕ ಚಿಂತನೆ, ಆತ್ಮ ವಿಶ್ವಾಸವಿದ್ದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಮನಸ್ಸು ಮತ್ತು ಭಾವನೆಗಳಿಗೆ ಪೂರಕವಾಗಿ ಕಲಿಕೆಯಲ್ಲಿ ತಮ್ಮನ್ನು ತಾವು ತೊಡಗಿಕೊಳ್ಳಬೇಕಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಹೇಳಿದರು.
ಮಾ. 6ರಂದು ಕುಂಭಾಸಿ ಮಕ್ಕಳ ಮನೆಯಲ್ಲಿ ಜಿಲ್ಲಾಡಳಿತ, ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಉಡುಪಿ, ಮಕ್ಕಳ ಮನೆ ಕುಂಭಾಸಿ ಹಾಗೂ ಕೊರಗ ಸಂಘಟನೆ ಉಡುಪಿ ಜಿಲ್ಲೆ ಇವರ ಸಂಯೋಜನೆಯಲ್ಲಿ ನಡೆದ 2018-19ನೇ ಸಾಲಿನ 10ನೇ ತರಗತಿಯಲ್ಲಿ ಕಲಿಯುತ್ತಿರುವ ಕೊರಗ ಸಮುದಾಯದ ವಿದ್ಯಾರ್ಥಿಗಳ ಸನಿವಾಸ ವಿಶೇಷ ಕಲಿಕಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಬಿರಾರ್ಥಿ ಅಪರಾಜಿತ ಕಾರ್ಯಕ್ರಮ ಉದ್ಘಾಟಿಸಿದರು. ಕುಂಭಾಸಿ ಗ್ರಾ.ಪಂ. ಅಧ್ಯಕ್ಷೆ ಶ್ರೀವಾಣಿ ಅಡಿಗ ಅಧ್ಯಕ್ಷತೆ ವಹಿಸಿದ್ದರು.
ಡಯಡ್ ಉಪನ್ಯಾಸಕ ಸುಬ್ರಹ್ಮಣ್ಯ ಭಟ್, ಶಿಕ್ಷಣ ಸಂಯೋಜಕ ಚಂದ್ರ ನಾಯ್ಕ, ಐಟಿಡಿಪಿ ಮೆನೇಜರ್ ವಿಶ್ವನಾಥ ಶೆಟ್ಟಿ, ಹೆಸ್ಕಾತ್ತೂರು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಾಬು ಶೆಟ್ಟಿ, ಕುಂದಾಪುರ ಕೊರಗ ಶ್ರೇಯೋಭಿವೃದ್ಧಿ ಸಮಿತಿಯ ಅಧ್ಯಕ್ಷ ಗಣೇಶ್ ವಿ., ಕೊರಗ ಮುಖಂಡ ಗಣೇಶ್ ಬಾರಕೂರು, ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ಸ.ಹಿ.ಪ್ರಾ. ಶಾಲಾ ಮುಖ್ಯೋಪಾಧ್ಯಾಯಿನಿ ಶರ್ಮಿಳಾ ಜಿ. ಉಪಸ್ಥಿತರಿದ್ದರು.
ರಾಜೇಶ್ ಸ್ವಾಗತಿಸಿ, ಐಟಿಡಿಪಿ ಮ್ಯಾನೇಜರ್ ವಿಶ್ವನಾಥ ಶೆಟ್ಟಿ ಪ್ರಾಸ್ತಾವಿಸಿದರು. ವಿನಿತಾ ಕಾರ್ಯಕ್ರಮ ನಿರೂಪಿಸಿ, ಗಣೇಶ್ ವಿ. ವಂದಿಸಿದರು.