ಚಿಕ್ಕಮಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿ 8 ವರ್ಷ ಪೂರೈಸಿದೆ. ಜನಪರ ಯೋಜನೆಗಳನ್ನು ತಂದಿದೆ. ಜನಸಾಮಾನ್ಯರಿಗೆ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ಮಂಗಳವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಬಿಜೆಪಿಯಿಂದ ಆಯೋಜಿಸಿದ್ದ ಸೇವಾ, ಸುಖಾಸನ, ಬಡವರ ಕಲ್ಯಾಣ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಸಮರ್ಥ, ಸಮೃದ್ಧ, ಶಕ್ತಿಶಾಲಿ ಮತ್ತು ಸ್ವಾಭಿಮಾನಿ ಭಾರತ ನಿರ್ಮಾಣಕ್ಕೆ ಬಿಜೆಪಿ ಕಾರ್ಯಕರ್ತರು ಮುಂದಾಗಬೇಕು. ಸಮರ್ಥ ಭಾರತ ಪರಿಕಲ್ಪನೆಯೊಂದಿಗೆ ವಿವಿಧ ಮೋರ್ಚಾ ಮತ್ತು ಪ್ರಕೋಷ್ಟಗಳು ಸಮಾವೇಶವನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದೇಶ ಮೊದಲು ಎಂಬ ಇಚ್ಛಾಶಕ್ತಿಯನ್ನು ಬಿಜೆಪಿ ಪಕ್ಷ ಹೊಂದಿದೆ. ಬೇರೆ ಪಕ್ಷಗಳಲ್ಲಿಈ ಉದ್ದೇಶ ಕಾಣುತ್ತಿಲ್ಲ. ಕಾಂಗ್ರೆಸ್ ನಲ್ಲಿ ಸೋನಿಯಾ ಗಾಂಧಿಗೆ ಜೈ ಎಂದರೆ ಚುನಾವಣೆಯಲ್ಲಿ ಬಿ. ಫಾರಂ. ಜೆಡಿಎಸ್‌ನಲ್ಲಿ ದೊಡ್ಡ ಮತ್ತು ಸಣ್ಣಗೌಡರಿಗೆ ಜೈ ಎಂದರೇ ಪಕ್ಷದ ಸದಸ್ಯತ್ವ ಎಂದು ವ್ಯಂಗ್ಯವಾಡಿದರು. ಪ್ರಧಾನಮಂತ್ರಿ, ಮುಖ್ಯಮಂತ್ರಿ, ಎಂಪಿ, ಎಂಎಲ್‌ಎ ಆಗಲು ಬಿಜೆಪಿ ಕಟ್ಟಿದ್ದಲ್ಲ. ಸಮರ್ಥ, ಸಮೃದ್ಧ, ಶಕ್ತಿಶಾಲಿ ಮತ್ತು ಸ್ವಾಭಿಮಾನಿ ಭಾರತ ನಿರ್ಮಾಣ ಬಿಜೆಪಿ ಉದ್ದೇಶವಾಗಿದೆ ಎಂದು ತಿಳಿಸಿದರು.
ಸರ್ಕಾರದಿಂದ ಕೋವಿಡ್ ಸೋಂಕಿನಿಂದ ತಂದೆ- ತಾಯಿ ಕಳೆದುಕೊಂಡ ಮಕ್ಕಳಿಗೆ ಪ್ರಧಾನ ಮಂತ್ರಿ ಕೇರ್ ಫಾರ್ ಚಿಲ್ಡ್ರನ್ ಯೋಜನೆಯಡಿ ಆರ್ಥಿಕ, ಶೈಕ್ಷಣಿಕವಾಗಿ ಶಕ್ತಿ ತುಂಬುವ ಯೋಜನೆಗೆ ಚಾಲನೆ ನೀಡಲಾಗಿದೆ. ಆಯುಷ್ಮಾನ್ ಯೋಜನೆಯಡಿ ಉಚಿತ ಚಿಕಿತ್ಸೆಗೆ ನೆರವಾಗುತ್ತಿದೆ. ಕಿಸಾನ್ ಸನ್ಮಾನ್ ಯೋಜನೆಯಡಿ ಕೇಂದ್ರದಿಂದ 6 ಸಾವಿರ ರೂ. ಮತ್ತು ರಾಜ್ಯ ಸರ್ಕಾರದಿಂದ 4ಸಾವಿರ ರೂ. ಸೇರಿ 10 ಸಾವಿರ ರೂ. ರೈತರ ಬ್ಯಾಂಕ್ ಖಾತೆಗೆ ಹಣೆ ಜಮಾ ಆಗುತ್ತಿದೆ. ಅರ್ಜಿ ಕೊಡದೇ ರೈತರಿಗೆ ಸವಲತ್ತು ಸಿಗುತ್ತಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2ನೇ ಅವಧಿಗೆ ಪ್ರಧಾನಿಯಾದ ಬಳಿಕ ಕಾಶ್ಮೀರದಲ್ಲಿದ್ದ 370ನೇ ವಿಧಿ ರದ್ದುಗೊಳಿಸಿ ಭಯೋತ್ಪಾದನೆ ಅಡಗುತಾಣಕ್ಕೆ ಅಂತ್ಯ ಹಾಡಲಾಯಿತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದ ಗೌರವ ಅಧಿಕಗೊಂಡಿದೆ ಎಂದರು. ವಿದೇಶದಲ್ಲಿ ತ್ರಿವರ್ಣಧ್ವಜಕ್ಕೆ ಅಪಾರ ಗೌರವ ಸಲ್ಲುತ್ತಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಸಂದರ್ಭದಲ್ಲಿ ಭಾರತೀಯ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ತ್ರಿವರ್ಣಧ್ವಜ ಪ್ರದರ್ಶಿಸಿ ಸುರಕ್ಷಿತವಾಗಿ ದೇಶ ಸೇರಿದರು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಭಾನುಪ್ರಕಾಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್, ಶಾಸಕ ಎಂ.ಪಿ. ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್, ಬಿಜೆಪಿ ಉಪಾಧ್ಯಕ್ಷ ಪ್ರೇಮ್‌ಕುಮಾರ್, ಎಚ್.ಡಿ. ತಮ್ಮಯ್ಯ, ಬಿ. ರಾಜಪ್ಪ, ರವೀಂದ್ರ ಬೆಳವಾಡಿ, ದೇವರಾಜ ಶೆಟ್ಟಿ, ಮಧುಕುಮಾರ್‌ರಾಜ್ ಅರಸ್, ರಾಮಸ್ವಾಮಿ ಇದ್ದರು.