Advertisement

ಸಾವಯವ ಕೃಷಿ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡಿ: ಮಸಗಿ

11:15 AM Dec 06, 2018 | |

ದಾವಣಗೆರೆ: ಫಲವತ್ತತೆಗೆ ಮಾರಕವಾಗಿರುವ ರಾಸಾಯನಿಕಗಳ ಬದಲು ಸಾವಯವ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಬೆಂಗಳೂರಿನ ವಾಟರ್‌ ಲಿಟರಸಿ ಫೌಂಡೇಶನ್‌ ಅಧ್ಯಕ್ಷ ಅಯ್ಯಪ್ಪ ಮಸಗಿ ತಿಳಿಸಿದ್ದಾರೆ. ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯುತ್ತಿರುವ ಕೃಷಿ ತಂತ್ರಜ್ಞಾನ ಮಾಹಿತಿ ಸಪ್ತಾಹದಲ್ಲಿ ಬುಧವಾರ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ದೇಹಕ್ಕೆ ಸಾರಾಯಿಯಂತೆ ಫಲವತ್ತಾದ ಮಣ್ಣಿಗೆ ರಾಸಾಯನಿಕ ಗೊಬ್ಬರ ಸಹ ಅಪಾಯಕಾರಿ. ರಾಸಾಯನಿಕ ಬಳಕೆ ಕಡಿಮೆ ಮಾಡಿ, ಸಾವಯವ ಪದ್ಧತಿಗೆ ಆದ್ಯತೆ ನೀಡಬೇಕು ಎಂದರು. 

Advertisement

ಹೆಚ್ಚಿನ ಇಳುವರಿ ಪಡೆಯುವ ಲೆಕ್ಕಾಚಾರದಲ್ಲಿ ಅತಿಯಾಗಿಯೇ ಬಳಸುವ ರಾಸಾಯನಿಕ ಗೊಬ್ಬರದ ಕೃಷಿ ಎಂದರೆ ಅದು ಸಾಯುವ ಕೃಷಿ ಪದ್ಧತಿ ಎಂದೇ ವಿಶ್ಲೇಷಣೆ ಮಾಡಬಹುದು. ಗೊಬ್ಬರ ಒಳಗೊಂಡಂತೆ ಇತರೆ ರಾಸಾಯನಿಕಗಳು ಮಣ್ಣಿನಲ್ಲಿ ಬಹು ಅಮೂಲ್ಯವಾಗಿರುವ ಸೂಕ್ಷ್ಮ ಜೀವಿಗಳ ಸಂಕುಲವನ್ನೇ ನಾಶ ಮಾಡುತ್ತವೆ. ಸೂಕ್ಷ್ಮ ಜೀವಿಗಳ ಸಾಮೂಹಿಕ ನಾಶದಿಂದ ಮಣ್ಣಿನ ಸತ್ವ ಕಳೆದು ದಿನ ಕಳೆದಂತೆ ಇಳುವರಿ ಪ್ರಮಾಣವು ಕಡಿಮೆ ಮಾಡುತ್ತದೆ ಎಂದು ಎಚ್ಚರಿಸಿದರು.

ದೇಶ ಆಹಾರ ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಬೇಕು ಎಂಬ ಉದ್ದೇಶದಿಂದ 1962 ರಲ್ಲಿ ಪ್ರಾರಂಭಿಸಿದ ರಾಸಾಯನಿಕ ಕೃಷಿ ಪದ್ಧತಿಯ ಫಲವಾಗಿ ಆರಂಭದಲ್ಲಿ ಒಳ್ಳೆಯ ಫಲಿತಾಂಶ ದೊರೆಯಿತು. ಕಾಲಾನುಕ್ರಮೇಣ ಕೃಷಿ ಭೂಮಿ ಹಾಳಾಗಲಾರಂಭಿಸಿತು. ಈಗ ಸಂಪೂರ್ಣ ಹಾಳಾಗಿರುವ ಮಣ್ಣಿನಲ್ಲಿ ಬೆಳೆದ ಬೆಳೆಗಳ ಬಳಕೆ ಮಾಡುವುದರಿಂದ ಅನಾರೋಗ್ಯ ಹೆಚ್ಚಾಗಿ ಕಂಡು ಬರುತ್ತಿದೆ. ರಾಸಾಯನಿಕ ಗೊಬ್ಬರದ ಕೃಷಿ ಪದ್ಧತಿಯು ಸಾಯುವ ಪದ್ಧತಿ ಎಂದಾದರೆ ಸಾವಯವ ಕೃಷಿ ಪದ್ಧತಿ ಭೂಮಿಯ ಒಡೆಯನನ್ನು ಸಾಹುಕಾರರನ್ನಾಗಿ ಮಾಡುವ ಪದ್ಧತಿ ಎಂದರ್ಥ ಎಂದು ತಿಳಿಸಿದರು.

ಶಾಸಕ ಎಸ್‌.ಎ. ರವೀಂದ್ರನಾಥ್‌ ಮಾತನಾಡಿ, ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆಯುವುದಕ್ಕೆ ಅತೀ ಕಡಿಮೆ ಪ್ರಮಾಣದಲ್ಲಿ ನೀರು ಬಳಕೆ ಮಾಡಲಾಗುತ್ತದೆ. ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಿ, ಸಾವಯವ ಪದ್ಧತಿಗೆ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು. 

ತರಳಬಾಳು ಗ್ರಾಮೀಣಾಭಿವೃದ್ಧಿ ಸಂಸ್ಥೆ ನಿರ್ದೇಶಕ ಎಂ.ಕೆ. ರೇಣುಕಾರ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಜಿ. ಹನುಮಂತಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಬಿ. ಮುದಗಲ್‌, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಟಿ.ಆರ್‌. ವೇದಮೂರ್ತಿ, ಆರ್‌ಸಿಎಫ್‌ ಮಾರುಕಟ್ಟೆ ವ್ಯವಸ್ಥಾಪಕ ಸತೀಶ್‌ ರಾಘೋಡೆ, ಕೇಂದ್ರದ ಮುಖ್ಯಸ್ಥ ಡಾ| ಟಿ.ಎನ್‌. ದೇವರಾಜ್‌ ಇತರರು ಇದ್ದರು. ಜೆ. ರಘುರಾಜ್‌ ಸ್ವಾಗತಿಸಿದರು. ಎಂ.ಜಿ. ಬಸವನಗೌಡ ವಂದಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next