ಕೆ.ಆರ್.ನಗರ: ಸಾವಯವ ಕೃಷಿಯಲ್ಲಿ ತೊಡಗುವ ರೈತರಿಗೆ ಸರ್ಕಾರ ಹೆಚ್ಚಿನ ಪ್ರಮಾಣದ ಸಹಾಯ ಮತ್ತು ಸವಲತ್ತು ಕಲ್ಪಿಸಬೇಕು ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು. ಪಟ್ಟಣದ ಎಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ಮತ್ತು ತಾಲೂಕು ಯುವ ರೈತ ವೇದಿಕೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಕಿಸಾನ್‌ಗೊಷ್ಠಿಯಲ್ಲಿ ಮಾತನಾಡಿದ ಅವರು, ಸಾವಯವ ಕೃಷಿ ಮಾಡುವುದರಿಂದ ವಿಷಮುಕ್ತ ಬೆಳೆ ಬೆಳೆಯಬಹುದು. ರೈತರು ಈ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ಕೃಷಿಗೆ ಪೂರಕ ವಿಚಾರಗೊಷ್ಠಿ, ತರಬೇತಿ ಶಿಬಿರಗಳನ್ನು ಅಧಿಕಾರಿಗಳು ಆಯೋಜಿಸಬೇಕು. ರೈತರ ಮನೆ ಬಾಗಿಲಿಗೆ ಸವಲತ್ತು ತಲುಪಿಸಬೇಕು ಎಂದು ಸೂಚಿಸಿದ ಶಾಸಕರು, ಸಾವಯವ ಕೃಷಿ ಮಾಡುವ ರೈತರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರದಲ್ಲಿ ಸಾವಯವ ಕೃಷಿಕರ ಸಮಾವೇಶ ನಡೆಸಲಾಗುವುದು ಎಂದರು.
ತಾಪಂ ಅಧ್ಯಕ್ಷೆ ಎ.ಬಿ.ಮಲ್ಲಿಕಾ ಮಾತನಾಡಿ, ರೈತರು ಕೃಷಿ ತಜ್ಞರು ಮತ್ತು ಇಲಾಖೆಯ ಅಧಿಕಾರಿಗಳ ಸಲಹೆ, ಸೂಚನೆ ಪಡೆದುಕೊಳ್ಳಬೇಕು ಎಂದರು. ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ವಿಸ್ತರಣಾ ಶಿಕ್ಷಣ ಘಟಕದ ವಿಜ್ಞಾನಿಗಳಾದ ಡಾ.ಜಯಲಕ್ಷ್ಮೀ ಮತ್ತು ಡಾ.ಸಿ.ಗೋವಿಂದರಾಜು, ಸಾವಯವ ಕೃಷಿ ಬಗ್ಗೆ ಮಾಹಿತಿ ನೀಡಿದರು.
ತಾಲೂಕು ಯುವ ರೈತ ವೇದಿಕೆ ಅಧ್ಯಕ್ಷ ಎ.ಎಸ್.ರಾಮಪ್ರಸಾದ್, ತಹಶೀಲ್ದಾರ್ ಎಂ.ಮಂಜುಳಾ, ತಾಪಂ ಇಒ ಎಚ್.ಡಿ.ಗಿರೀಶ್, ಧರ್ಮಸ್ಥಳ ಸಂಸ್ಥೆಯ ಗಂಗಾಧರರಾಯ್, ಸಹಾಯಕ ಕೃಷಿ ನಿರ್ದೇಶಕ ಎಸ್.ಶಶಿಧರ್, ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಎನ್.ಪ್ರಸನ್ನ, ಸಹಾಯಕ ಮೀನುಗಾರಿಕಾ ನಿರ್ದೇಶಕ ಭರತ್‌ಕುಮಾರ್, ಪಶುಪಾಲನಾ ಸಹಾಯಕ ನಿರ್ದೇಶಕ ಡಾ.ರವಿಕುಮಾರ್, ರೇಷ್ಮೆ ವಿಸ್ತರಣಾಧಿಕಾರಿ ಕರಿಯಪ್ಪ, ಸ್ತ್ರೀಶಕ್ತಿ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ರೈತರು ಹಾಜರಿದ್ದರು.