ಗದಗ: ಈಗಾಗಲೇ ಹುಲಿಗಳು, ವಿವಿಧ ಹಕ್ಕಿ, ನೂರಾರು ಪ್ರಭೇದದ ವನ್ಯಜೀವಿಗಳೊಂದಿಗೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಸಮೀಪದ ಬಿಂಕದಕಟ್ಟಿ ಕಿರು ಮೃಗಾಲಯದಲ್ಲಿ ರಂಗನತಿಟ್ಟು ಪಕ್ಷಿಧಾಮ ಮಾದರಿಯಲ್ಲಿ ಎರಡು ಕೆರೆಗಳ ನಿರ್ಮಿಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಹಕ್ಕಿಗಳ ಚಿಲಿಪಿಲಿ ಇನ್ನಷ್ಟು ಆಕರ್ಷಿಸಲಿದೆ.
ಬೇಸಿಗೆಯಲ್ಲಿ ಜಲಕ್ಷಾಮ ಉಂಟಾದರೆ, ಮಳೆಗಾಲದಲ್ಲಿ ಮೃಗಾಲಯದ ಮೂಲಕ ಹರಿದು ಹೋಗುವ ಅಪಾರ ಪ್ರಮಾಣದ ಮಳೆ ನೀರನ್ನೇ ಕೆರೆಗಳಲ್ಲಿ ಸಂಗ್ರಹಿಸಿ, ಅಂತರ್ಜಲ ಹೆಚ್ಚಿಸುವುದು ಹಾಗೂ ಬಾನಾಡಿಗಳಿಗೆ ಆಶ್ರಯ ಕಲ್ಪಿಸುವ ಉದ್ದೇಶದಿಂದ ಮೃಗಾಲಯದ ಆರ್‌ಎಫ್ಒ ಮಹಾಂತೇಶ ಪೆಟ್ಲೂರ ಯೋಜನೆಯೊಂದನ್ನು ತಯಾರಿಸಿದ್ದಾರೆ.
ಎರಡು ಕೆರೆಗಳ ನಿರ್ಮಾಣ: 40 ಎಕರೆ ಪ್ರದೇಶದ ಬಿಂಕದಟ್ಟಿ ಮೃಗಾಲಯದಲ್ಲಿ ಕಪ್ಪತ್ತಗುಡ್ಡಕ್ಕೆ ಹೊಂದಿಕೊಂಡಿರುವ ತಗ್ಗು ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಎರಡು ಕೆರೆಗಳನ್ನು ನಿರ್ಮಿಸಲಾಗುತ್ತಿದೆ. ಆ ಪೈಕಿ 45 ಅಡಿ ಸುತ್ತಳತೆಯ ಒಂದು ಕೆರೆ, 30×15 ಅಡಿ ಗಾತ್ರದಲ್ಲಿ ಸುಮಾರು ನಾಲ್ಕೈದು ಅಡಿಗಳ ಆಳದಷ್ಟು ಮತ್ತೊಂದು ಕೆರೆ ನಿರ್ಮಿಸಲಾಗುತ್ತಿದೆ. ಉದ್ದೇಶಿತ ಕೆರೆ ಪ್ರದೇಶದಲ್ಲಿರುವ ಮರ- ಗಿಡಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿ, ಕೆರೆ ಮಧ್ಯೆ ಭಾಗದಲ್ಲಿ ನಡುಗಡ್ಡೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ನಡುಗಡ್ಡೆ ಹಾಗೂ ಸುತ್ತಲಿನ ಪ್ರದೇಶ ನೀರಿನಿಂದ ಕೂಡಿದ್ದರೆ ಹಕ್ಕಿಗಳಿಗೆ ಸುರಕ್ಷತೆಯ ಅನುಭವವಾಗುತ್ತದೆ. ಸೆಪ್ಟೆಂಬರ್-ಡಿಸೆಂಬರ್ ಅವಧಿಯಲ್ಲಿ ಬರುವ ವಿದೇಶಿ ಹಕ್ಕಿಗಳಿಗೂ ಆಶ್ರಯ ಕಲ್ಪಿಸಿದಂತಾಗುತ್ತದೆ. ಇದಕ್ಕೆ ಮೇಲ್ಛಾವಣಿ ಇಲ್ಲದೇ ಹಕ್ಕಿಗಳ ಸಹಜ ಜೀವನ ಕಾಣಬಹುದು ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಮಾತು.
ಇಲ್ಲಿ ಏನಿವೆ: ಮೃಗಾಲಯದಲ್ಲಿ ಎರಡು ಹುಲಿಗಳು, ಜಿಂಕೆ, ಕೃಷ್ಣಮೃಗ, ನೀಲಗಾಯಿ, ಕಡವೆ, ಕರಡಿ, ನರಿ, ಮೊಸಳೆ, ಆಮೆ, ಹೆಬ್ಟಾವು ಮತ್ತು ಚಿರತೆಗಳು ಹಾಗೂ ಮೈಸೂರು ಮೃಗಾಲಯದಿಂದ ವಿವಿಧ ಜಾತಿಯ 90 ಪಕ್ಷಿಗಳನ್ನು ಇಲ್ಲಿಗೆ ತರಲಾಗಿದೆ. ಆ ಪೈಕಿ ಕರಿ ಹಂಸ, ಲೇಡಿ ಅಮೆರ್ಸ್ಡ್ ಪೆಸೆಂಟ್, ನೈಟ್ ಹೆರಾನ್, ಬಡ್ಜ್ರಿಗರ್, ರೋಸ್ ರಿಂಗ್ಡ್ ಪ್ಯಾರಾಕೀಟ್, ಜವಾ ಸ್ಪಾರೋ, ಪಿಂ ಚಸ್, ಬಣ್ಣದ ಕೊಕ್ಕರೆ, ರೆಡ್‌ಜಂಗಲ್ ಪೌಲ್, ರೋಸ್ ಪೆಲಿಕನ್ ಪಕ್ಷಿಗಳು ಸೇರಿದಂತೆ 280ಕ್ಕೂ ಹೆಚ್ಚು ಪ್ರಾಣಿ ಪಕ್ಷಿಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ಮೃಗಾಲಯದಲ್ಲಿ ಪ್ರಾಣಿ, ಪಕ್ಷಿಗಳ ಸಂಖ್ಯೆಯಲ್ಲಿ ಹೆಚ್ಚಳವಾದ ಬೆನ್ನಲ್ಲೇ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಪ್ರತಿದಿನ ಸರಾಸರಿ 200ರಿಂದ 250 ಪ್ರವಾಸಿಗರು ಭೇಟಿ ನೀಡುತ್ತಾರೆ. ವಾರಾಂತ್ಯದ ದಿನಗಳಲ್ಲಿ ಈ ಸಂಖ್ಯೆ 400ರಿಂದ 450 ದಾಟುತ್ತದೆ. ಕೆರೆ ನಿರ್ಮಾಣದಂಥ ಇನ್ನಿತರೆ ಅಭಿವೃದ್ಧಿ ಕಾರ್ಯಗಳಿಂದ ಮೃಗಾಲಯದ ಸೊಬಗು ಹೆಚ್ಚಲಿದ್ದು, ಪ್ರವಾಸಿಗರ ಸಂಖ್ಯೆಯೂ ಹೆಚ್ಚಲಿದೆ ಎಂದು ಹೇಳಲಾಗುತ್ತದೆ.
ಜಿಪಂ ಒದಗಿಸಿರುವ 3 ಲಕ್ಷ ರೂ. ಅನುದಾನದಲ್ಲಿ ರಂಗನತಿಟ್ಟು ಪಕ್ಷಿಧಾಮ ಮಾದರಿಯಲ್ಲಿ ಎರಡು ಕೆರೆಗಳನ್ನು ನಿರ್ಮಿಸಲಾಗುತ್ತಿದೆ. ಕೆರೆಗಳಲ್ಲಿ ನಡುಗಡ್ಡೆ ನಿಮಾಣದ ನಂತರ, ಒಂದರಲ್ಲಿ ಮೊಸಳೆ ಮತ್ತು ಮತ್ತೊಂದರಲ್ಲಿ ಜಲಪಕ್ಷಿಗಳನ್ನು ಬಿಡಲಾಗುವುದು. ಮಳೆಗಾಲದಲ್ಲಿ ಈ ಕೆರೆಗಳು ಭರ್ತಿಯಾದರೆ, ಅಂತರ್ಜಲ ಮಟ್ಟವೂ ಹೆಚ್ಚಲಿದೆ. ಮೃಗಾಲಯದ ಆವರಣದಲ್ಲಿರುವ 5 ಕೊಳೆಬಾವಿಗಳಲ್ಲಿ ಸಮೃದ್ಧ ನೀರು ಲಭಿಸಲಿದೆ.
ಮಹಾಂತೇಶ ಪೆಟ್ಲೂರ್, ಆರ್‌ಎಫ್‌ಒ
ವೀರೇಂದ್ರ ನಾಗಲದಿನ್ನಿ