Advertisement

ನ್ಯಾಯಾಲಯಗಳಲ್ಲೂ ಕನ್ನಡ ಕಡ್ಡಾಯವಾಗಲಿ: ಒಕ್ಕೊರಲ ಅಭಿಮತ

12:31 AM Jan 08, 2023 | Team Udayavani |

ಹಾವೇರಿ(ಕನಕ-ಶರೀಫ-ಸರ್ವಜ್ಞ ವೇದಿಕೆ): ಕನ್ನಡದಲ್ಲಿ ಕಾನೂನು ಸಾಹಿತ್ಯ ಕೃಷಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ, ಅದು ಆಗಬೇಕು. ಇದಕ್ಕಾಗಿ ಸರ್ಕಾರ, ಕನ್ನಡ ಕಾನೂನು ಪ್ರಾಧಿಕಾರ ರಚಿಸಬೇಕು. ಕಾನೂನು ವಿವಿಗಳು ಈ ದಿಸೆಯಲ್ಲಿ ಮುಂದಡಿ ಇಡಬೇಕು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಆಡಳಿತ ಭಾಷೆ ಕನ್ನಡ ಕಡ್ಡಾಯಗೊಳಿಸಿದಂತೆ ನ್ಯಾಯಾಲಯದಲ್ಲೂ ಕನ್ನಡ ಕಡ್ಡಾಯಗೊಳಿಸಬೇಕು…

Advertisement

ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಆಯೋಜಿಸಿದ್ದ ಕನ್ನಡದಲ್ಲಿ ಕಾನೂನು ಸಾಹಿತ್ಯ ಕುರಿತ ವಿಚಾರಗೋಷ್ಠಿಯಲ್ಲಿ ಕಾನೂನು ಪಂಡಿತರು ಮತ್ತು ಕನ್ನಡಾಭಿಮಾನಿಗಳಿಂದ ವ್ಯಕ್ತವಾದ ಅಭಿಪ್ರಾಯಗಳಿವು.

ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದಲ್ಲಿ ಕಾನೂನು ಕುರಿತ ವಿಚಾರಗೋಷ್ಠಿ ನಡೆಸಲು ಹಲವು ವರ್ಷಗಳಿಂದ ಕೋರುತ್ತಲೇ ಬರಲಾಗಿತ್ತು. ಆದರೆ, ಕಸಾಪದ ಯಾವ ಅಧ್ಯಕ್ಷರೂ ಇದಕ್ಕೆ ಸ್ಪಂದಿಸಿರಲಿಲ್ಲ. ಈ ಬಾರಿ ಕಸಾಪ ಇದಕ್ಕೆ ಅವಕಾಶ ಕೊಟ್ಟಿದ್ದು ಉತ್ತಮ ಸಂಗತಿ ಎಂದು ಸಭಿಕರಿಂದ ಮೆಚ್ಚುಗೆಯ ಮಾತುಗಳು ಸಹ ಕೇಳಿಬಂದವು.

ಆಶಯ ನುಡಿಗಳನ್ನಾಡಿದ ಹುಬ್ಬಳ್ಳಿ ಕರ್ನಾಟಕ ಕಾನೂನು ವಿವಿಯ ಡಾ| ಸಿ. ಬಸವರಾಜ ಮಾತನಾಡಿ, ಪ್ರಸ್ತುತ ನ್ಯಾಯಾಲಯದ ತೀರ್ಪುಗಳು ಕನ್ನಡದಲ್ಲಿ ನೀಡದೇ ಇರುವುದರಿಂದ ಹಾಗೂ ಕನ್ನಡದಲ್ಲಿ ಕಾನೂನು ಸಾಹಿತ್ಯ ಇಲ್ಲದೇ ಇರುವುದರಿಂದ ಲಕ್ಷಾಂತರ ಜನಸಾಮಾನ್ಯರು ಕಾನೂನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಲ್ಲಿ ವಂಚಿತರಾಗಿದ್ದಾರೆ ಎಂದರು.

ಪ್ರಸ್ತುತ ಕಾನೂನು ಸಾಹಿತ್ಯ ನಿರೀಕ್ಷಿತ ಮಟ್ಟದಲ್ಲಿಲ್ಲ. ಹಾಗಾಗಿ, ಕಾನೂನು ವಿಷಯವನ್ನು ಕನ್ನಡದಲ್ಲೂ ಸಮೃದ್ಧಗೊಳಿಸಬೇಕು. ಸರ್ಕಾರ ಕನ್ನಡ ಕಾನೂನು ಸಾಹಿತ್ಯ ಪ್ರಾಧಿಕಾರ ರಚಿಸಿ ಅಗತ್ಯ ಅನುದಾನ, ಅಧಿಕಾರ ನೀಡಿ ಕನ್ನಡದಲ್ಲಿ ಕಾನೂನು ಸಾಹಿತ್ಯದ ಉತ್ಕೃಷ್ಟ ಪುಸ್ತಕಗಳನ್ನು ಪ್ರಕಟಿಸುವ ಕೆಲಸ ಮಾಡಬೇಕು.
ನ್ಯಾಯಾಲಯದಲ್ಲಿ ವಾದ-ವಿವಾದ ಏನು ನಡೆಯುತ್ತಿದೆ. ತೀರ್ಪು ಏನು ನೀಡಲಾಗಿದೆ ಎಂಬ ಮಾಹಿತಿ ಕಕ್ಷಿದಾರರರಿಗೆ, ಸಾಕ್ಷಿದಾರರಿಗೆ ಅರ್ಥವಾಗಬೇಕು. ಹಾಗಾದಾಗ ಮಾತ್ರ ರಾಜ್ಯದ ಪ್ರತಿಯೊಬ್ಬರಲ್ಲೂ ಕಾನೂನು ಅರಿವು ಮೂಡಿಸಲು ಸಾಧ್ಯ. ರಾಜ್ಯದ ಎಲ್ಲ ಹಂತದ ನ್ಯಾಯಾಲಯಗಳಲ್ಲಿ ಕನ್ನಡದಲ್ಲೇ ವಾದ ಮಂಡನೆಯಾಗಬೇಕು. ಜತೆಗೆ ಕನ್ನಡದಲ್ಲೇ ತೀರ್ಪು ಪ್ರಕಟಿಸುವಂತಾಗಬೇಕು ಎಂದರು.

Advertisement

ಶ್ರೀಸಾಮಾನ್ಯನಿಗೆ ಕನ್ನಡದಲ್ಲಿ ಕಾನೂನು ಅರಿವು ಕುರಿತು ವಿಷಯ ಮಂಡನೆ ಮಾಡಿದ ಹಾವೇರಿಯ ನಿವೃತ್ತ ಜಿಲ್ಲಾ ನ್ಯಾಯಾಧೀಶ ಸಿದ್ದಪ್ಪ ಕೆಂಪಗೌಡರ ಮಾತನಾಡಿ, ನ್ಯಾಯಾಲಯಗಳು ಇರುವುದೇ ನೊಂದ ಜನರಿಗಾಗಿ. ಹೀಗಾಗಿ, ಜನರಿಗೆ ಅರ್ಥವಾ ಗುವ ಕನ್ನಡ ಭಾಷೆಯಲ್ಲಿಯೇ ನ್ಯಾಯಾಲಯದ ಎಲ್ಲ ವ್ಯವಹಾರಗಳು ನಡೆಯಬೇಕು. ಪ್ರಶಸ್ತಿ, ಬಹುಮಾನಕ್ಕಾಗಿ ಒಂದೋ ಎರಡೋ ತೀರ್ಪು ಕನ್ನಡದಲ್ಲಿ ನೀಡುವ ಬದಲಿಗೆ ಕಡ್ಡಾಯವಾಗಿ ನ್ಯಾಯಾಲಯದ ಎಲ್ಲ ವ್ಯವಹಾರ ಕನ್ನಡದಲ್ಲೇ ನಡೆಸಬೇಕು. ಇಲ್ಲವೇ, ಮನೆಗೆ ಹೋಗಿ ಎಂದು ಸರ್ಕಾರ ತಾಕೀತು ಮಾಡುವಂತಾಗಬೇಕು ಎಂದರು.

ಕಾನೂನು ವಿಷಯಗಳ ಬಗ್ಗೆ ಸಾಹಿತ್ಯ ರಚನೆ ಕುರಿತು ವಿಷಯ ಮಂಡಿಸಿದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಬಿ.ಶಿವಲಿಂಗೇಗೌಡ, ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯಾಗಿರುವುದರಿಂದ ಎಲ್ಲ ಕಚೇರಿ ಗಳಂತೆ ನ್ಯಾಯಾಲಯಗಳಲ್ಲೂ ಇದು ಪೂರ್ಣ ಪ್ರಮಾಣದಲ್ಲಿ ಜಾರಿಯಾಗದೆ ಇರುವುದು ವಿಷಾದನೀಯ. ಕನ್ನಡದಲ್ಲಿ ಕಾನೂನು ಸಾಹಿತ್ಯ ಕೃಷಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಸೈಬರ್‌ ಕ್ರೈಂ ವಿಭಾಗದಲ್ಲಿ ಕನ್ನಡ ಇನ್ನೂ ಅಂಬೆಗಾಲಿಡುತ್ತಿದೆ. ಕಾನೂನು ಹಾಗೂ ಸಾಹಿತ್ಯ ಎರಡೂ ಜೀವನಾನುಭವಗಳಿಗೆ ಸಂಬಂಧಿಸಿದವುಗಳಾಗಿವೆ. ಕಾನೂನು ಹಾಗೂ ಸಾಹಿತ್ಯ ಎರಡೂ ಒಂದಕ್ಕೊಂದು ಪೂರಕ ಅಂಶಗಳು ಎಂದರು.

ಅಧ್ಯಕ್ಷತೆ ವಹಿಸಿದ್ದ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಅರಳಿ ನಾಗರಾಜ್‌ ಮಾತನಾಡಿ, ಸರ್ಕಾರ ಕಾನೂನು ಸಾಹಿತ್ಯ ಪ್ರಾಧಿಕಾರ ರಚನೆ ಮಾಡುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಕಾನೂನು ವಿಶ್ವವಿದ್ಯಾಲಯಗಳು ಈ ದಿಸೆಯಲ್ಲಿ ವಿಚಾರ ಸಂಕಿರಣ ಮಾಡಿ ಕಾನೂನು ಪುಸ್ತಕಗಳನ್ನು ಪ್ರಕಟಿಸಲು ಮುಂದಾ ಗಬೇಕು ಎಂದರು. ಬಿ. ವಾಮದೇವಪ್ಪ ಸ್ವಾಗತಿಸಿ, ಎಸ್‌.ವಿ. ಕುಲಕರ್ಣಿ ವಂದಿಸಿದರು.

-ಎಚ್‌.ಕೆ.ನಟರಾಜ್‌

Advertisement

Udayavani is now on Telegram. Click here to join our channel and stay updated with the latest news.

Next