ತಿ.ನರಸೀಪುರ: ಶಿಕ್ಷಣದಿಂದ ಸಾಮಾಜಿಕ ಅಭಿವೃದ್ಧಿ ಹೊಂದಲು ಸಾಧ್ಯವಿರುವುದರಿಂದ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ಹೇಳಿದರು. ಪಟ್ಟಣದ ಕಬಿನಿ ಕಾಲೋನಿಯ ಭೈರಾಪುರ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆವೆಟ್ ಪ್ಯಾಕರ್ಡ್ ಎಂಟಪ್ರೈಸಸ್(ಎಚ್‌ಪಿ) ಕಂಪನಿಯ ಪ್ರಾಯೋಜಕತ್ವದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ತೆರೆದಿರುವ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಅವರು ಮಾತನಾಡಿದರು.
ಎರಡು ಬಾರಿ ಸಂಸದ ಹಾಗೂ ಶಾಸಕನಾಗಿ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಿದ್ದೇನೆ. 2010ರಲ್ಲಿ ದೇಶದಲ್ಲಿ ಅಂದಿನ ಕೇಂದ್ರ ಸರ್ಕಾರ ಕಡ್ಡಾಯ ಶಿಕ್ಷಣ ಜಾರಿ ಮಾಡಿದ್ದರಿಂದ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳ ಸಂಖ್ಯೆ ಹೆಚ್ಚಾಗಿವೆ. ರಾಜ್ಯದಲ್ಲಿ ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಾಲೂಕು ಕೇಂದ್ರಗಳಲ್ಲಿ ಮಹಿಳಾ ಕಾಲೇಜು ತೆರೆಯುವ ಯೋಜನೆ ರೂಪಿಸಿದ್ದರಿಂದ ಎರಡು ಜಿಲ್ಲೆಗಳಲ್ಲಿಯೂ ಇರದಂತಹ ಉತ್ತಮವಾದ ಮಹಿಳಾ ಕಾಲೇಜು ತಿ.ನರಸೀಪುರದಲ್ಲಿ ತಲೆ ಎತ್ತಿದೆ ಎಂದರು.
ಕಾರ್ಪೋರೇಟ್ ವಲಯಗಳ ಸೇವಾ ನಿಧಿಯ ಅನುದಾನದಲ್ಲಿ ನೆರವು ಪಡೆದು ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವು ಸರ್ಕಾರಿ ಶಾಲಾ ಕಾಲೇಜುಗಳಿಗೆ ಪೀಠೊಪಕರಣ ಹಾಗೂ ಕಂಪ್ಯೂಟರ್ ಸೌಲಭ್ಯ ಕಲ್ಪಿಸಿಕೊಟ್ಟಿದ್ದೇನೆ ಎಂದು ತಿಳಿಸಿದರು. ವರುಣಾ ಶಾಸಕ ಡಾ.ಎಸ್.ಯತೀಂದ್ರ ಮಾತನಾಡಿ, ಹೆಣ್ಣು ಮಕ್ಕಳು ಕಡ್ಡಾಯ ಉನ್ನತ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಕಾವೇರಿಯಪ್ಪ, ಹೆವೆಟ್ ಪ್ಯಾಕರ್ಡ್ ಎಂಟಪ್ರೈಸಸ್ ಕಂಪನಿ ಮುಖ್ಯಸ್ಥ ಸುಶೀಲ್ ಭಾಟ್ಲ, ಕಂಪನಿಯ ಅಧಿಕಾರಿಗಳಾದ ಕೆ.ಎಲ್.ಪ್ರಸನ್ನ, ಸುರೇಶ್ ಬಾಬೆಲ, ಸುಂದರ್, ರಾಧಿಕಾ ವರ್ಮ, ವಿಜಯ್ ಸೂರ್ಯ ನಾರಾಯಣ್, ಇಸಾಂತ್ ಅಗರ್ವಾಲ, ಶೈನಿ ಸಿಂಗ್, ರಾಕೇಶ್, ಜಿಪಂ ಸದಸ್ಯ ಮಂಜುನಾಥನ್, ತಾಪಂ ಸದಸ್ಯ ಎಂ.ರಮೇಶ್, ಪ್ರಾಂಶುಪಾಲ ಡಾ.ವಿ.ವಿ.ಜಗದೀಶ್, ಪ್ರಾಂಶುಪಾಲೆ ಕೆ.ನಾಗರತ್ನಮ್ಮ, ಸುಂದರಾಜ್, ಗುರುಪಾದಸ್ವಾಮಿ, ವೆಂಕಟೇಶ್ ಮೂರ್ತಿ, ಸುನೀಲ್ ಇತರರಿದ್ದರು.