ಕೋಲಾರ: ಉಚಿತ ಕಾನೂನು ನೆರವು ಬಯಸಿ ಬರುವ ಕಕ್ಷಿದಾರರಿಗೆ ನೆರವಾಗಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನ್ಯಾಯಾಲಯದ ಆವರಣದಲ್ಲಿ ‘ಫ್ರೆಂಟ್ ಆಫೀಸ್’ ವಿಭಾಗವನ್ನು ಆರಂಭಿಸಿದ್ದು ಸದ್ಬಳಕೆ ಮಾಡಿಕೊಳ್ಳಬೇಕೆಂದು 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ರೇಖಾ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿ ಆವರಣದಲ್ಲಿ ಫ್ರೆಂಟ್ ಆಫೀಸ್‌ವಿಭಾಗವನ್ನು ಸಾರ್ವಜನಿಕ ಸೇವೆಗೆ ಸಮರ್ಪಣೆ ಮಾಡಿ ಮಾತನಾಡಿದರು.
ಸದ್ಬಳಕೆ ಆಗಲಿ: ರಾಜ್ಯ ಕಾನೂನು ಪ್ರಾಧಿಕಾರದ ಆದೇಶದ ಮೇರೆಗೆ ಉಚಿತ ಕಾನೂನು ಬಯಸಿ ಬರುವ ಕಕ್ಷಿದಾರರಿಗೆ ತಮ್ಮ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವಶ್ಯಕವಿರುವ ಅರ್ಜಿಗಳನ್ನು ಕಾನೂನು ನೋಟಿಸ್, ಕೋರ್ಟ್‌ಮನವಿ ಪತ್ರ, ಅವಶ್ಯಕ ಅರ್ಜಿ ಸಿದ್ಧಪಡಿಸಿಕೊಡುವ ಮತ್ತು ಇತರೆ ಕಾನೂನು ಸೇವೆ ಒದಗಿಸುವ ದೃಷ್ಟಿಯಿಂದ ಈ ಕಚೇರಿ ಆರಂಭಿಸಲಾಗಿದೆ ಎಂದರು.
ಅರಿವು: ಈಗಾಗಲೇ ಶಾಲಾ ಕಾಲೇಜು, ಸಂಘ-ಸಂಸ್ಥೆಗಳು, ಸಾರ್ವಜನಿಕರು, ಕಾರ್ಮಿಕರಿಗೆ ಕಾನೂನು ಸೇವಾ ಪ್ರಾಧಿಕಾರ ಕಾನೂನಿನ ಅರಿವು ನೆರವು ಒದಗಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ ಎಂದು ಹೇಳಿದರು.
ಅವಶ್ಯಕ ಅರ್ಜಿ ಸಿದ್ಧಪಡಿಸುತ್ತಾರೆ: ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಎಚ್.ಗಂಗಾಧರ ‘ಫ್ರೆಂಟ್ ಆಫೀಸ್, ಕಚೇರಿ ದಿನಗಳಲ್ಲಿ ಬೆಳಗ್ಗೆ 10.30 ರಿಂದ ಸಂಜೆ 6 ಗಂಟೆವರೆಗೂ ಕಾರ್ಯನಿರ್ವ ಹಿಸಲಿದೆ. ಕಕ್ಷಿದಾರರಿಗೆ, ಸಾರ್ವಜನಿಕರ ಪ್ರಕರಣಗಳಿಗೆ ಸಂಬಂಧಿಸಿದ ಅವಶ್ಯಕ ಅರ್ಜಿ ಹಾಗೂ ನೋಟಿಸ್‌ಗಳನ್ನು ಉಚಿತವಾಗಿ ಸಿದ್ಧಪಡಿಸಿಕೊಡುತ್ತಾರೆ. ಅದರಲ್ಲೂ ಮಹಿಳೆ, ವಿಕಲಚೇತನರು, ಆದಾಯದ ಮಿತಿಯೊಳಗೆ ಇರುವವರು ಯಾರೇ ಬಂದರೂ ಸೌಲಭ್ಯ ಪಡೆದುಕೊಳ್ಳಬಹುದೆಂದರು. ವಕೀಲರ ಸಂಘದ ಅಧ್ಯಕ್ಷ ಟಿ.ಆರ್.ಜಯರಾಮ್, ಪ್ಯಾನಲ್ ವಕೀಲ ಕೆ.ಆರ್.ಧನರಾಜ್, ಎಂ.ನಾರಾಯಣಸ್ವಾಮಿ, ಸೋಮಶೇಖರ್, ವೆಂಕಟಾಚಲಪತಿ, ಶ್ರೀನಿವಾಸ್, ವಿಶಾಲಾಕ್ಷಿ ,ಸಂಧ್ಯಾ ಮತ್ತಿತರರಿದ್ದರು.