ರಬಕವಿ-ಬನಹಟ್ಟಿ: ಸರ್ಕಾರ ರಾಜ್ಯದ ಹಿಂದುಳಿದ ಮತ್ತು ಬಡ ಜನರ ಅಭಿವೃದ್ಧಿಗಾಗಿ ಹತ್ತಾರು ಯೋಜನೆಗಳನ್ನು ಹಾಕಿಕೊಂಡಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡ ವ್ಯಕ್ತಿಯು ಅವುಗಳನ್ನು ಬೇರೆಯವರಿಗೆ ನೀಡದೆ ಸದ್ಬಳಕೆ ಮಾಡಿಕೊಳ್ಳಬೇಕು. ಉತ್ತಮವಾದ ಜೀವನ ನಿರ್ವಹಣೆ ಮಾಡಿಕೊಳ್ಳಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಶನಿವಾರ ರಬಕವಿ-ಬನಹಟ್ಟಿ ನಗರಸಭೆಯ ಸಭಾ ಭವನದಲ್ಲಿ ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆ ಅಡಿಯಲ್ಲಿ ಸರ್ಕಾರದ ಸೌಲಭ್ಯಗಳನ್ನು ವಿತರಣೆ ಮಾಡಿ ಮಾತನಾಡಿದರು.
ಪರಿಶಿಷ್ಟ ಜಾತಿಯ ಬಡ ಜನರಿಗೆ ರೂ. ೧೪ ಲಕ್ಷ ವೆಚ್ಚದಲ್ಲಿ ೩೮ ಫಲಾನುಭವಿಗಳಿಗೆ ಯುಪಿಎಸ್ ಬ್ಯಾಟರಿ ಮತ್ತು ಇನ್ವೇಟರ್ ಹಾಗೂ ನಾಲ್ಕು ಸಮಾಜಕ್ಕೆ ರೂ. ೩ ಲಕ್ಷ ವೆಚ್ಚದಲ್ಲಿ ಬಾಂಡೆ ಸಮಾನುಗಳನ್ನು ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ಕ್ಷೇತ್ರದ ಅಭಿವೃದ್ಧಿಗಾಗಿ ಇನ್ನಷ್ಟು ಅನುದಾನ ಮತ್ತು ಕ್ಷೇತ್ರದ ಜನರ ಅಭಿವೃದ್ಧಿಗಾಗಿ ಇನ್ನಷ್ಟು ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಸವದಿ ತಿಳಿಸಿದರು.
ರಬಕವಿ ಬನಹಟ್ಟಿ ನಗರಸಭೆಯ ಅಧ್ಯಕ್ಷ ಸಂಜಯ ತೆಗ್ಗಿ, ಉಪಾಧ್ಯಕ್ಷೆ ವಿದ್ಯಾ ಧಬಾಡಿ, ನಗರಸಭೆಯ ಎಂಜಿನಿಯರ್ ರಾಘವೇಂದ್ರ ಕುಲಕರ್ಣಿ, ಸಮುದಾಯ ಸಮನ್ವಯಾಧಿಕಾರಿ ಸಿ.ಎಸ್.ಮಠಪತಿ, ಯಲ್ಲಪ್ಪ ಕಟಗಿ, ಅರುಣ ಬುದ್ನಿ, ಗೌರಿ ಮಿಳ್ಳಿ, ಜಯಶ್ರೀ ಬಾಗೇವಾಡಿ, ಶಶಿಕಲಾ ಸಾರವಾಡ, ರವಿ ಕೊರ್ತಿ, ಯುನಿಸ್ ಚೌಗಲಾ, ಶಿವಾನಂದ ಚಿಂಚಖಂಡಿ, ಅಶೋಕ ಹಳ್ಳೂರ ಸೇರಿದಂತೆ ಅನೇಕರು ಇದ್ದರು.