Advertisement

Mangaluru: “ಜನಸಂಖ್ಯಾ ಲಾಭಾಂಶ’ ಸದ್ಬಳಕೆಯಾಗಲಿ: ನ್ಯಾ| ಅಬ್ದುಲ್‌ ನಜೀರ್‌

10:45 PM Sep 27, 2024 | Team Udayavani |

ಮಂಗಳೂರು: ನಮ್ಮ ದೇಶದಲ್ಲಿ 25ರ ಕೆಳಹರೆಯದ ಶೇ.50ರಷ್ಟು ಜನಸಂಖ್ಯೆ ಇದ್ದು, ಈ “ಜನಸಂಖ್ಯಾ ಲಾಭಾಂಶ’ದ ಪೂರ್ಣ ಸಾಮರ್ಥ್ಯದ ಸದ್ಬಳಕೆ ಆಗಬೇಕು. ಯುವಜನತೆಗೆ ಪೂರಕವಾದ ಸಾಮಾಜಿಕ, ಆರ್ಥಿಕ ಉತ್ತೇಜನ ಸಿಕ್ಕಿದರೆ ಅವರು ದೇಶದ ಭವಿಷ್ಯವನ್ನೇ ಪುನರ್‌ ರಚಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಆಂಧ್ರಪ್ರದೇಶದ ರಾಜ್ಯಪಾಲ, ನಿವೃತ್ತ ಸುಪ್ರೀಂಕೋರ್ಟ್‌ ನ್ಯಾಯಾಧೀಶ ಅಬ್ದುಲ್‌ ನಜೀರ್‌ ಹೇಳಿದ್ದಾರೆ.

Advertisement

ಟಿಎಂಎ ಪೈ ಸಭಾಂಗಣದಲ್ಲಿ ಶುಕ್ರವಾರ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪರ್ಸನಲ್‌ ಮ್ಯಾನೇಜ್‌ಮೆಂಟ್‌ ವತಿಯಿಂದ ಹಮ್ಮಿಕೊಂಡ “ಇಂಡಿಯಾ ಎಟ್‌ 2047, ಹ್ಯೂಮನ್‌ ಕ್ಯಾಪಿಟಲ್‌ ಫಾರ್‌ ಎ ಡೆವೆಲಪ್‌ಡ್‌ ಇಂಡಿಯಾ’ ಎಂಬ ಎರಡು ದಿನಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ 10 ವರ್ಷಗಳಲ್ಲಿ ನಮ್ಮ ದೇಶ 5 ಆರ್ಥಿಕ ಶಕ್ತಿಗಳನ್ನು ಹಿಂದಿಕ್ಕಿದೆ. 2030ರಲ್ಲಿ ನಾವು ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುವ ನಿರೀಕ್ಷೆಯಲ್ಲಿದ್ದೇವೆ. ಅದಕ್ಕೆ ಪೂರಕವಾಗಿ ಯುವಜನತೆಯ ಕೌಶಲಾಭಿವೃದ್ಧಿಯಾಗುವಂತೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನೂ ಜಾರಿಗೊಳಿಸಲಾಗಿದೆ.

ನಾವಿಂದು ಅಮೃತಕಾಲದಲ್ಲಿ ಇದ್ದೇವೆ. 2047ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 100 ವರ್ಷ ಪೂರ್ಣಗೊಳ್ಳುತ್ತದೆ. ಆ ಹೊತ್ತಿಗೆ ವಿಕಸಿತ ಭಾರತವಾಗುವ ಮಹತ್ವಾಕಾಂಕ್ಷೆಯ ಗುರಿ ಇರಿಸಿಕೊಂಡಿದ್ದೇವೆ. ಅದಕ್ಕೆ ಪೂರಕವಾಗಿ ಸಾಮಾಜಿಕ, ಆರ್ಥಿಕ ಅಭಿವೃದ್ಧಿ, ಪರಿಣಾಮಕಾರಿ ಆಡಳಿತ, ಸುಸ್ಥಿರ ಪರಿಸರ ಅಭಿವೃದ್ಧಿಯಂತಹ ಅಂಶಗಳನ್ನೂ ಸೇರಿಸಿಕೊಂಡಿದ್ದೇವೆ, ಒಟ್ಟು ಜಿಡಿಪಿ ಏರಿಕೆಯೊಂದಿಗೆ ಜನರ ವೈಯುಕ್ತಿಕ ಆದಾಯವೂ ಏರಿಕೆಯಾಗಬೇಕಾದ ಅಗತ್ಯ ಇದೆ ಎಂದರು.

ಗುಣಮಟ್ಟದ ಶಿಕ್ಷಣ: ಮೋಹನ್‌ದಾಸ್‌ ಪೈ
ಆರಿನ್‌ ಕ್ಯಾಪಿಟಲ್‌ ಅಧ್ಯಕ್ಷ ಟಿ.ವಿ.ಮೋಹನ್‌ದಾಸ್‌ ಪೈ ಮಾತನಾಡಿ, 1790ರಲ್ಲಿ ಆರಂಭಗೊಂಡ ಕೈಗಾರಿಕಾ ಕ್ರಾಂತಿ ಈಗಿಲ್ಲ. ಯುರೋಪ್‌ ಹಿನ್ನಡೆ ಕಾಣುತ್ತಿದೆ, ಈಗ ಡಿಜಿಟಲ್‌ ಕ್ರಾಂತಿ ಆರಂಭವಾಗಿದೆ. ಅದರಲ್ಲಿ ಯುಎಸ್‌ಎ, ಚೀನ ಹಾಗೂ ಭಾರತ ಮುಂಚೂಣಿಯಲ್ಲಿದೆ. ಅದರ ಗರಿಷ್ಠ ಪ್ರಯೋಜನ ಪಡೆದುಕೊಳ್ಳಬೇಕಾದರೆ ನಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಬೇಕು ಎಂದರು.

Advertisement

ಮಾನವ ಬಂಡವಾಳವೇ ಆಸ್ತಿ: ಶ್ಯಾಂ ಪ್ರಸಾದ್‌
ಇಂದು ನಮಗೆ ಮಾನವ ಸಂಪನ್ಮೂಲವೇ ಆಸ್ತಿ, ಮಾನವ ಬಂಡವಾಳವೇ ಅತಿ ಮಹತ್ವದ ಹೂಡಿಕೆ, 2047ರ ಅಮೃತಕಾಲದಲ್ಲಿರುವ ನಾವು ನಮ್ಮ ಯುವಜನತೆಗೆ ಕೌಶಲ, ಸೃಜನಶೀಲತೆಯ ಜತೆಗೆ ಹೊಸ ತಂತ್ರಜ್ಞಾನ ಅಳವಡಿಕೆಗೆ ಮಹತ್ವ ನೀಡಬೇಕು ಎಂದು ಎಂಆರ್‌ಪಿಎಲ್‌ ವ್ಯವಸ್ಥಾಪಕ ನಿರ್ದೇಶಕ ಶ್ಯಾಂ ಪ್ರಸಾದ್‌ ಕಾಮತ್‌ ಹೇಳಿದರು.

ಸಂಸದ ಕ್ಯಾ| ಬ್ರಿಜೇಶ್‌ ಚೌಟ ಮಾತನಾಡಿ, 25 ವರ್ಷಗಳಲ್ಲಿ ಮಂಗಳೂರಿನ ಸಾಮರ್ಥ್ಯಕ್ಕೆ ತಕ್ಕಂತೆ ಅಭಿವೃದ್ಧಿ ಕೈಗೊಳ್ಳುವಲ್ಲಿ ನಾವು ನಿರೀಕ್ಷಿಸಿದಷ್ಟು ಫಲ ಸಿಕ್ಕಿಲ್ಲ. ಇಂತಹ ಸಮಾವೇಶಗಳ ಮೂಲಕ ಅದನ್ನು ಸಾಧಿಸಬಹುದು. ಮಂಗಳೂರಿನ ನಿಜ ಸಾಮರ್ಥ್ಯದ ಪೂರ್ಣ ಬಳಕೆಯಾಗಲಿ ಎಂದರು.

ಆದಿತ್ಯ ಬಿರ್ಲಾ ಸಮೂಹದ ಮಾನವಸಂಪನ್ಮೂಲ ವಿಭಾಗದ ಮಾಜಿ ನಿರ್ದೇಶಕ ಸಂತೃಪ್ತ ಗುಪ್ತ ದಿಕ್ಸೂಚಿ ಭಾಷಣ ಮಾಡಿದರು. ಎನ್‌ಐಪಿಎಂ ರಾಷ್ಟ್ರೀಯ ಅಧ್ಯಕ್ಷ ಡಾ| ಎಂ.ಎಚ್‌.ರಾಜ ಶುಭ ಹಾರೈಸಿದರು. ಕಾರ್ಯದರ್ಶಿ ಬಸವರಾಜು, ಸಮ್ಮೇಳನ ಸಹ ಅಧ್ಯಕ್ಷ ಕೃಷ್ಣ ಹೆಗ್ಡೆ, ಧೀರಜ್‌ ಶೆಟ್ಟಿ, ಆಶಾ ಎ.ಪೈ ಮೊದಲಾದವರಿದ್ದರು. ಸಮ್ಮೇಳನ ಸಂಯೋಜಕ ಸ್ಟೀವನ್‌ ಪಿಂಟೊ ಸ್ವಾಗತಿಸಿದರು.

5 ಕೋಟಿ ಕೇಸ್‌ ಬಾಕಿ: ನಜೀರ್‌ ಕಳವಳ
ದೇಶದಲ್ಲಿ ನ್ಯಾಯಾಂಗದ ಮೇಲೆ ಅಪಾರ ಒತ್ತಡವಿದೆ ಎಂದ ನ್ಯಾ| ಎಸ್‌.ಅಬ್ದುಲ್‌ ನಜೀರ್‌, ದೇಶದ ಕೋರ್ಟ್‌ಗಳಲ್ಲಿ ಈಗ 5 ಕೋಟಿ ಪ್ರಕರಣಗಳು ಬಾಕಿ ಇವೆ. ಇವುಗಳ ಇತ್ಯರ್ಥಕ್ಕೆ 10-15 ವರ್ಷಗಳೇ ಬೇಕಾಗಬಹುದು. ಇದರ ಪರಿಣಾಮ 25 ಕೋಟಿ ಜನರ ಮೇಲಾಗುತ್ತಿದ್ದು, ಅವರಿಗೆ ಶಾಂತಿ ಸಮಾಧಾನಗಳೂ ಇಲ್ಲದಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next