ಹುಮನಾಬಾದ: ಉತ್ತಮ ಸೇವೆ ಮೂಲಕ ಗ್ರಾಹಕರು ಹಾಗೂ ಅಧಿಕಾರಿಗಳನ್ನು ಮೆಚ್ಚಿಸಬೇಕು ಎಂದು ಜೆಸ್ಕಾಂ ಅನುಮತಿ ಪಡೆದ ಗುತ್ತಿಗೆದಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೀರಶಟ್ಟಿ ಖ್ಯಾಮಾ ಹೇಳಿದರು.
ಪಟ್ಟಣದ ಸಂಘದ ಕಾರ್ಯಾಲಯದಲ್ಲಿ ಗುರುವಾರ ನಡೆದ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಹೊಸ ಅಧ್ಯಕ್ಷರಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
ಕ್ಷೇತ್ರ ಯಾವುದೇ ಆಗಿರಲಿ. ಉತ್ತಮ ಕೆಲಸ ಮಾಡುವ ವ್ಯಕ್ತಿಗಳನ್ನು ಸಮಾಜ ಯಾವತ್ತೂ ಗೌರವಿಸುತ್ತದೆ. ಅಂತೆಯೇ ಮಾಡುವ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಬೇಕು ಎಂದರು. ಸಂಘದ ಪದಾಧಿಕಾರಿಗಳ ಮಧ್ಯದಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬದಿಗೊತ್ತಿ ಸಂಘಟಿತ ಹೋರಾಟ ನಡೆಸಿದಲ್ಲಿ ಅಸಾಧ್ಯವಾದದ್ದೂ ಸಾಧ್ಯವಾಗುತ್ತದೆ ಎಂದರು. ಅಧಿಕಾರ ಮತ್ತು ಹಣ ಯಾವತ್ತೂ ಯಾರಿಗೂ ಶಾಶ್ವತವಲ್ಲ. ಅಹಂಕಾರ ತೊರೆದು ಸರಳ ಸಜ್ಜನಿಕೆಯಿಂದ ಬಾಳಿ ಬದುಕಬೇಕು ಎಂದು ಹೇಳಿದರು.
ಸಂಘದ ತಾಲೂಕು ಘಟಕದ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಚೀನಕೇರಿ ಅಕಾರ ಸ್ವೀಕರಿಸಿ ಮಾತನಾಡಿ, ಸಮಸ್ತ ಪದಾಧಿಕಾರಿಗಳು ಹಾಗೂ ಅಧಿಕಾರಿಗಳನ್ನು ವಿಶ್ವಾಶಕ್ಕೆ ತೆಗೆದುಕೊಂಡು ವೈಯಕ್ತಿಕ ಕೆಲಸಗಳ ಜೊತೆಯಲ್ಲಿ ಸಂಘದ ಎಲ್ಲ ಪದಾಧಿಕಾರಿಗಳ ಹಿತ ಕಾಪಾಡಲು ಶ್ರಮಿಸುವುದಾಗಿ ಹೇಳಿದರು.
ಜೆಸ್ಕಾಂ ಜಿಲ್ಲಾ ಪ್ರತಿನಿಧಿ ಬಸವರಾಜ ಪಾಟೀಲ, ಶಿವಕುಮಾರ ಮಂಡಲಾಪುರೆ ಮಾತನಾಡಿದರು. ಉಪಾಧ್ಯಕ್ಷ ಅಣ್ಣಾರಾವ್ ಗಿರಗಿರೆ, ಸಿದ್ರಾಮ ಹಾರಕೂಡ್, ಕಾರ್ಯದರ್ಶಿ ಎಂ.ಡಿ.ಮುಜಾಹಿದ್, ಸಹ ಕಾರ್ಯದರ್ಶಿ ಶರಣಕುಮಾರ ರಟಕಲೆ, ಕೋಶಾಧ್ಯಕ್ಷ ಶರಣಬಸವ ಕಸೂದಿ, ಸದಸ್ಯರಾದ ವಸಂತಕುಮಾರ ಚಿಕ್ಕಪಾಟೀಲ, ರಮೇಶ ಭಮಶಟ್ಟಿ, ಶೇಕ್ ಅಕ್ತರ ಇದ್ದರು. ಸಂಘದ ಮಾಜಿ ಅಧ್ಯಕ್ಷ ಎಂ.ಡಿ.ತಾಜೊದ್ದಿನ್ ಪಟೇಲ ಪ್ರಾಸ್ತಾವಿಕ ಮಾತನಾಡಿ, ವಂದಿಸಿದರು.