Advertisement

ನೇತ್ರದಾನ ಮಾಡಿ ಅಂಧತ್ವ ತೊಲಗಿಸಿ

12:40 PM Aug 30, 2019 | Suhan S |

ಮಂಡ್ಯ: ರಾಜ್ಯದಲ್ಲಿ ಪ್ರತೀ ವರ್ಷ 1.25 ಲಕ್ಷ ಮಂದಿ ಅಂಧತ್ವದಿಂದ ಬಳಲುತ್ತಿದ್ದಾರೆಎಂದು ಜಿಲ್ಲಾಧಿಕಾರಿ ಡಾ. ಎಂ.ಎನ್‌. ವೆಂಕಟೇಶ್‌ ಆತಂಕ ವ್ಯಕ್ತಪಡಿಸಿದರು.

Advertisement

ನಗರದ ಜೆ.ಸಿ. ವೃತ್ತದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಅಂಧತ್ವ ನಿಯಂತ್ರಣ ವಿಭಾಗ ಏರ್ಪಡಿಸಿದ್ದ 34ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ದಿನಾಚರಣೆ ಪ್ರಯುಕ್ತ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಲಕ್ಷಾಂತರ ಮಂದಿ ಅಂಧತ್ವದಿಂದ ಬಳಲುತ್ತಿದ್ದರೂ ನಮ್ಮಲ್ಲಿ ಕೇವಲ 5.5 ಸಾವಿರ ಮಂದಿ ಮಾತ್ರ ನೇತ್ರದಾನ ಮಾಡಲು ಮುಂದೆ ಬರುತ್ತಿದ್ದಾರೆ. ಇದು ಏನೇನೂ ಸಾಲದಾಗಿದೆ ಎಂದು ಹೇಳಿದರು.

ನೇತ್ರದಾನಕ್ಕೆ ನೋಂದಾಯಿಸಿ: ನೇತ್ರದಾನದ ಬಗ್ಗೆ ಹೆಚ್ಚಿನ ರೀತಿಯಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯಾದ್ಯಂತ ನೇತ್ರದಾನ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಒಂದು ವಾರ ಕಾರ್ಯಕ್ರಮ ಜಿಲ್ಲೆಯಲ್ಲೂ ನಡೆಯುತ್ತಿದ್ದು, ಹೆಚ್ಚು ಮಂದಿ ನೇತ್ರದಾನ ಮಾಡುವ ಕುರಿತು ನೋಂದಣಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಪಂ ಸಿಇಒ ಯಾಲಕ್ಕಿಗೌಡ ಮಾತನಾಡಿ, ಸಾಮಾನ್ಯವಾಗಿ ನಮ್ಮಲ್ಲಿ ನೇತ್ರ ತೆಗೆದ ನಂತರ ಆತನ ಮುಖ ವಿಕಾರವಾಗುತ್ತದೆ. ಮುಂದಿನ ಜನ್ಮದಲ್ಲಿ ಕುರುಡಾಗುತ್ತೇವೆ ಎಂಬ ತಪ್ಪು ಕಲ್ಪನೆ, ಮೂಢನಂಬಿಕೆ ಬಿಟ್ಟು ಎಲ್ಲರೂ ನೇತ್ರದಾನ ಮಾಡಿ ಎಂದು ಮನವಿ ಮಾಡಿದರು.

ತಾಲೂಕುಗಳಲ್ಲೂ ಐ ಬ್ಯಾಂಕ್‌: ಮನುಷ್ಯ ಸತ್ತ ನಂತರ ಆತನನ್ನು ಕಣ್ಣಿನೊಂದಿಗೆ ಸುಟ್ಟುಹಾಕುತ್ತೇವೆ. ಇಲ್ಲವೇ ಹೂಳುತ್ತೇವೆ. ಅದು ವ್ಯರ್ಥವಾಗುತ್ತದೆ ಅದನ್ನು ಬಿಟ್ಟು ನೇತ್ರದಾನ ಮಾಡಿದಲ್ಲಿ ಇಬ್ಬರು ಅಂಧರು ಪ್ರಪಂಚವನ್ನು ನೋಡಬಹುದಾಗಿದೆ. ಇದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ನಮ್ಮಲ್ಲಿ ಎರಡು ನೇತ್ರ ಬ್ಯಾಂಕ್‌ಗಳು ಇವೆ. ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರಗಳಲ್ಲೂ ನೇತ್ರ ಬ್ಯಾಂಕ್‌ ತೆರೆಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.

Advertisement

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಚೇಗೌಡ ಮಾತನಾಡಿ, ಲಕ್ಷಾಂತರ ಮಂದಿ ಅಂಧತ್ವ ಸಮಸ್ಯೆಯಿಂದ ಬಳಲುತ್ತಿದ್ದರೂ, ಕೇವಲ 5 ರಿಂದ 6 ಸಾವಿರ ಮಂದಿ ಮಾತ್ರ ನೇತ್ರದಾನಿಗಳು ಪ್ರತೀ ವರ್ಷ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳುವ ಅಗತ್ಯತೆ ಇದೆ ಎಂದು ಹೇಳಿದರು.

ನೇತ್ರದಾನ ಸಪ್ತಾಹ: ಅ. 25ರಿಂದ ಸೆ.8ರವರೆಗೆ ನೇತ್ರದಾನ ಸಪ್ತಾಹ ಕಾರ್ಯಕ್ರಮ ನಡೆಯುತ್ತಿದ್ದು, ಎಲ್ಲರೂ ನೇತ್ರದಾನ ನೋಂದಣಿ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಏಳು ಸರ್ಕಾರಿ ಸ್ವಾಮ್ಯದ ನೇತ್ರ ಬ್ಯಾಂಕ್‌ಗಳಿದ್ದು, ಈ ಪೈಕಿ ಮಂಡ್ಯ ಜಿಲ್ಲೆಯಲ್ಲಿ ಎರಡು ನೇತ್ರ ಬ್ಯಾಂಕ್‌ಗಳಿವೆ. ಮಂಡ್ಯ ವೈದ್ಯಕೀಯ ಕಾಲೇಜು ಹಾಗೂ ಬಿ.ಜಿ.ನಗರದಲ್ಲಿರುವ ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನಲ್ಲಿ ನೇತ್ರ ಬ್ಯಾಂಕ್‌ಗಳನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಒಟ್ಟಾರೆ 27 ನೇತ್ರ ಬ್ಯಾಂಕ್‌ಗಳು ಸೇವೆ ಸಲ್ಲಿಸುತ್ತಿವೆ ಎಂದು ವಿವರಿಸಿದರು.

ನೇತ್ರದಾನಕ್ಕೆ ಮನಸ್ಸು ಮಾಡಿ: ನೇತ್ರದಾನ ಮಾಡಲು ವಯಸ್ಸು, ಜಾತಿ, ಧರ್ಮ, ಲಿಂಗದ ತಾರತಮ್ಯ ಇಲ್ಲ. ಯಾರು ಬೇಕಾದರೂ ನೇತ್ರದಾನ ಮಾಡಬಹುದು. ವ್ಯಕ್ತಿಯ ಸತ್ತ ನಂತರ 6 ಗಂಟೆ ಒಳಗೆ ತಿಳಿಸಿದಲ್ಲಿ ತಜ್ಞ ವೈದ್ಯರ ತಂಡವೊಂದು ಸ್ಥಳಕ್ಕೆ ಆಗಮಿಸಿ ವ್ಯಕ್ತಿಯ ಕಣ್ಣನ್ನು ಕೇವಲ 20 ನಿಮಿಷಗಳ ಅವಧಿಯಲ್ಲಿ ತೆಗೆದು ನೇತ್ರ ಬ್ಯಾಂಕ್‌ಗೆ ಸಾಗಿಸುತ್ತದೆ. ನಂತರ ಅಂಧರಿಗೆ ಶಸ್ತ್ರ ಚಿಕಿತ್ಸೆ ಮಾಡಿ ಇಬ್ಬರು ಅಂಧರಿಗೆ ಬೆಳಕು ನೀಡುವ ಕೆಲಸ ಮಾಡಲಾಗುತ್ತದೆ. ನೇತ್ರದಾನ ಮಾಡುವವರು ಅಥವಾ ಡಾ. ರಾಜ್‌ಕುಮಾರ್‌ ನೇತ್ರ ಸಂಗ್ರಹಣಾ ಕೇಂದ್ರ ಅಥವಾ ನಮ್ಮ ವೈದ್ಯಾಧಿ ಕಾರಿಗಳನ್ನು ಸಂಪರ್ಕಿಸಬಹುದು ಎಂದರು.

ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ. ಅಶ್ವಥ್‌, ಕುಟುಂಬ ಕಲ್ಯಾಣ ಇಲಾಖೆ ಡಾ. ಅನಿಲ್ ಕುಮಾರ್‌, ಡಾ. ಭವಾನಿಶಂಕರ್‌, ಆರೋಗ್ಯ ಅಧಿಕಾರಿ ಶಿವಾನಂದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next