ಪಾಂಡವಪುರ: ವಿದ್ಯಾರ್ಥಿಗಳು ಜೀವನದಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ, ಮಾನವೀಯ ಗುಣಗಳನ್ನು ಮೈಗೂಡಿಸಿ ಕೊಳ್ಳಬೇಕು, ಗುರು-ಹಿರಿಯರನ್ನು ಗೌರವಿಸಬೇಕು, ಜತೆಗೆ ಎಲ್ಲಾ ಧರ್ಮ ವನ್ನು ಸಮಾನವಾಗಿ ಸ್ವೀಕರಿಸ ಬೇಕು ಎಂದು ಬೇಬಿಬೆಟ್ಟದ ಶ್ರೀರಾಮ ಯೋಗೀ ಶ್ವರ ಮಠದ ಪೀಠಾಧ್ಯಕ್ಷ ಶ್ರೀಗುರು ಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಬೇಬಿಬೆಟ್ಟದ ಶ್ರೀರಾಮ ಯೋಗೀಶ್ವರ ಮಠದ ಆವರಣದಲ್ಲಿ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಬಸವಣ್ಣ ಹಾಗೂ ಶಿವಕುಮಾರಸ್ವಾಮೀಜಿಗಳ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಜಾತಿ ವ್ಯವಸ್ಥೆ ತೊಲಗಿಸಿದ ಬಸವಣ್ಣ: ಬಸವಣ್ಣನವರು ತಮ್ಮ ವಚನಗಳ ಮೂಲಕ ಅಂದಿನ ಸಮಾಜದಲ್ಲಿ ಬೇರೂರಿದ್ದ ಅಸ್ಪೃಶ್ಯತೆ, ಶೋಷಣೆ, ಜಾತಿ ವ್ಯವಸ್ಥೆಯ, ಸ್ತ್ರೀ ಸಾಮಾನ್ಯರಿಗೆ ಸೂಕ್ತ ಸ್ಥಾನಮಾನಗಳನ್ನು ಒದಗಿಸಿಕೊಟ್ಟ ಮಹಾನ್ ನಾಯಕರು. ಹಾಗಾಗಿ ಬಸವಣ್ಣನವರ ತತ್ವಸಿದ್ಧಾಂತಗಳನ್ನು ಇಂದಿನ ಯುವಜನಾಂಗ ಮೈಗೂಡಿಸಿ ಕೊಂಡು ಮುನ್ನಡೆಯಬೇಕು ಎಂದರು.
ನಾಡಿಗೆ ಸಿದ್ಧಗಂಗಾ ಶ್ರೀ ಕೊಡುಗೆ ಅಪಾರ: ಬಸವಣ್ಣನವರ ಮಾರ್ಗ ದಲ್ಲಿಯೇ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಸಹ ಸಾಗಿದರು. ಜೀವನ ದಲ್ಲಿ ಸರಳ ಸಜ್ಜನಿಕೆಯನ್ನು ಮೈಗೂಡಿಸಿ ಕೊಂಡಿದ್ದ ಶ್ರೀಗಳು ಸಿದ್ಧಗಂಗಾಮಠದ ಪೀಠಾಧ್ಯಕ್ಷರಾಗಿ ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ, ದಾಸೋಹಗಳನ್ನು ನಡೆಸಿ ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಅರಿವು ಮೂಡಿಸಿ ಮಹಾನ್ ಚೇತನ ಎಂದು ಬಣ್ಣಿಸಿದರು.
ಧೈರ್ಯದಿಂದ ಸಮಸ್ಯೆ ಎದುರಿಸಿ: ಸುಂಕಾತೊಣ್ಣೂರು ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಎನ್.ಮಹದೇವಪ್ಪ ಮಾತನಾಡಿ, ಇತ್ತೀಚಿನ ದಿನಮಾನಗಳಲ್ಲಿ ನಮ್ಮ ಸಮಾಜದಲ್ಲಿ ಕಚ್ಚಾಟ- ತಿಕ್ಕಾಟಗಳು, ಭಯೋತ್ಪಾದನೆಗಳಂತಹ ಜಾಗತಿಕ ಸಮಸ್ಯೆಗಳು ಹೆಚ್ಚಾಗಿರುವ ಪರಿಣಾಮ ಸಮಾಜ ದುಸ್ಥಿತಿಯತ್ತ ಮುನ್ನಡೆಯುತ್ತಿದೆ. ಇಂತಹ ಸಮಾಜದ ಹಲವಾರು ಸಮಸ್ಯೆಗಳನ್ನು ನಾವು ಎದುರಿಸಬೇಕಾಗಿದೆ. ಜೀವನದಲ್ಲಿ ಎದುರಾಗುವ ಯಾವುದೇ ಸಮಸ್ಯೆಗಳನ್ನು ಎದುರಿಸಿಗಟ್ಟಿಯಾಗಿ ನಿಲ್ಲಲು ನಮಗೆ ಶಿಕ್ಷಣ ಅತ್ಯವಶ್ಯಕವಾಗಿದೆ ಎಂದರು.
ವೀರಶೈವ ಮುಖಂಡ ಎಸ್.ಎ.ಮಲ್ಲೇಶ್ ಮಾತನಾಡಿ, ಬಸವಣ್ಣ ನವರು 12ನೇ ಶತಮಾನದಲ್ಲಿಯೇ ಸಮಾಜದಲ್ಲಿ ಮೌಡ್ಯಚಾರಣೆ, ಕಂದಾ ಚಾರಗಳ ವಿರುದ್ಧ ಹೋರಾಡಿದ್ದರು. ಸಮಾಜದ ಸುಧಾರಣೆಗೆ ಶ್ರಮಿಸಿದ ಬಸವಣ್ಣನವರ ತತ್ವಸಿದ್ಧಾಂತಗಳನ್ನು ನಾವೆಲ್ಲರೂ ಚಾಚುತಪ್ಪದೆ ಪಾಲಿಸಬೇಕು ಎಂದು ಹೇಳಿದರು.
ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದರಮ್ಯಾ, ಕೆ.ಎಸ್.ಜಯಂತ್, ಚಂದನ್, ಸಿ.ಎನ್.ವರ್ಷಿಣಿ, ಡಿ.ಬಿ. ಸುಷ್ಮಿತಾ, ಭುವನ, ಡಿ.ಆರ್.ಮಂಜು, ಎಂ.ಪುಣ್ಯಶ್ರೀ, ಟಿ.ಸಿ. ಭೂಮಿಕಾ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಡಿ.ಎಂ.ಶಾಲಿನಿ, ಡಿ.ಎಂ. ಶಶಾಂಕ್, ಡಿ.ಆರ್.ಮಂಜು, ಬಿ.ಎಂ.ಶಾಲಿನಿ, ಡಿ.ಎಸ್. ಆದಿತ್ಯ, ಎನ್.ನಮ್ರತಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಿವೃತ್ತ ಶಿಕ್ಷಕರಾದ ಸಿದ್ದಪ್ಪ ಮತ್ತು ಕೆಂಪು ಅವರನ್ನು ಸನ್ಮಾನಿಸಲಾಯಿತು.