Advertisement

ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ: ಸತೀಶ

02:59 PM Jun 23, 2022 | Team Udayavani |

ಬೆಳಗಾವಿ: ಶಿಕ್ಷಣದಿಂದ ಮಾತ್ರ ವ್ಯಕ್ತಿಯ ಬದುಕು ಬದಲಾಗಲು ಸಾಧ್ಯ. ಪೋಷಕರು ತಮ್ಮ ಮಕ್ಕಳನ್ನೇ ದೇವರೆಂದು ಭಾವಿಸಬೇಕು. ದೇವರ ಹೆಸರಿನಲ್ಲಿ ಮಾಡುವ ದುಂದುವೆಚ್ಚಗಳನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಡಿ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

Advertisement

ನಗರದ ವಿಶ್ವರತ್ನ ಡಾ| ಬಾಬಾಸಾಹೇಬ ಅಂಬೇಡ್ಕರ್‌ ಸೇವಾ ಸಂಸ್ಥೆಯು ಕಣಬರಗಿಯ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರಶಸ್ತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಖಡ್ಗಗಳಿಂದ ಮಾತ್ರ ಇತಿಹಾಸ ರಚನೆಯಾಗಿರುವುದನ್ನು ಇತಿಹಾಸದಲ್ಲಿ ಕಾಣುತ್ತೇವೆ. ಆದರೆ ಲೇಖನಿಯಿಂದ ಇತಿಹಾಸವನ್ನು ರಚನೆ ಮಾಡಬಹುದೆಂದು ತೋರಿಸಿಕೊಟ್ಟವರು ಡಾ. ಬಾಬಾ ಸಾಹೇಬರು ಎಂದರು.

ದೇವರು, ಜಾತ್ರೆ, ಇನ್ನಿತರ ಧಾರ್ಮಿಕ ಕಾರ್ಯಗಳಿಗೆ ಖರ್ಚುಮಾಡುವ ಹಣ ಮರಳಿ ಬರುವುದಿಲ್ಲ. ಆದರೆ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಮಾಡಿದ ಖರ್ಚು ದುಪ್ಪಟ್ಟಾಗಿ ಮರಳಿ ಬರುತ್ತದೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿಯಿರಲಿ. ಈ ಸಂಸ್ಥೆಯು ಸಾಮಾಜಿಕ ಜವಾಬ್ದಾರಿಯನ್ನು ಮೆರೆಯುತ್ತಿದೆ. ವಿದ್ಯಾರ್ಥಿಗಳು ಮತ್ತು ಸಾಧಕರನ್ನು ಗುರುತಿಸಿ ಗೌರವಿಸುವುದರ ಮೂಲಕ ಅವರ ಕಾರ್ಯಕ್ಷಮತೆಗೆ ಇನ್ನಷ್ಟು ಬಲ ತುಂಬುತ್ತಿದೆ ಎಂದರು.

ಕಾಣದ ದೇವರನ್ನು ಹುಡುಕಿ ಪ್ರಯೋಜನವಿಲ್ಲ. ನಿಮಗೆ ಆಪತ್ತು ಕಾಲದಲ್ಲಿ ಸಹಾಯ ಮಾಡುವವರೇ ದೇವರು. ಹಣ ಮತ್ತು ಆಸ್ತಿಯನ್ನು ಕಳೆದುಕೊಳ್ಳಬಹುದು. ಆದರೆ ಜ್ಞಾನವನ್ನು ಕಸಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಹೀಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಆದ್ಯತೆ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹತ್ತನೇ ತರಗತಿಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ 18 ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು. ಇದಲ್ಲದೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಲಂಪಿಕ್‌ ಕ್ರೀಡಾಪಟುಗಳಾದ ಸಂಜಯ ಹಮ್ಮಣ್ಣವರ, ರಾಷ್ಟ್ರಪ್ರಶಸ್ತಿ ವಿಜೇತ ಅಂತರಾಷ್ಟ್ರೀಯ ಈಜುಪಟು ರಾಘವೇಂದ್ರ ಅಣವೇಕರ, ಮಹೇಶ ಫೌಂಡೇಶನ್‌ ಸಂಸ್ಥಾಪಕರಾದ ಮಹೇಶ ಜಾಧವ, ಜಿಲ್ಲಾ ಶಿಕ್ಷಕ ಪ್ರಶಸ್ತಿ ಪಡೆದ ಸದಾಶಿವ ಗಸ್ತಿ, ಆಶ್ರಯ ಫೌಂಡೇಶನ ಸಂಸ್ಥಾಪಕ ನಾಗರತ್ನ ರಾಮಗೌಡರ, ವೈದ್ಯಕೀಯ ಹಾಗೂ ಸಮಾಜ ಸೇವಕರಾದ ಲಕ್ಷಣ ಮಾಲಾಯಿ ಮತ್ತು ಸುನಿಲ್‌ ನೇಗಿನಹಾಳ, ಕಲಾವಿದರಾದ ಆಕಾಶ ರುದ್ರಪ್ಪ ಹಲಗೇಕರ ಅವರನ್ನು ಸನ್ಮಾನಿಸಲಾಯಿತು.

Advertisement

ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ನಗರವಲಯದ ಶಿಕ್ಷಣಾಧಿಕಾರಿ ರಿಜ್ವಾನ್‌ ನಾವಗೇಕರ ಮಾತನಾಡಿ, ವಿದ್ಯಾರ್ಥಿಗಳು ದೇಶದ ಭವಿಷ್ಯದ ರೂವಾರಿಗಳು. ಯಾವುದೇ ವಿದ್ಯಾರ್ಥಿ ಆರ್ಥಿಕ ತೊಂದರೆಯಿಂದ ಶಿಕ್ಷಣದಿಂದ ವಂಚಿತನಾಗಬಾರದು. ಅಂಥವರಿಗಾಗಿ ಇಂಥ ಹಲವಾರು ಸಂಘ- ಸಂಸ್ಥೆಗಳು ಸಹಾಯ ಮಾಡಲು ಸಿದ್ಧವಾಗಿವೆ ಎಂದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರಗೌಡ ಪಾಟೀಲ, ಅಖೀಲ ಭಾರತ ದಲಿತ ಯುವ ಸಂಘಟನೆಯ ಅಧ್ಯಕ್ಷ ಮಲ್ಲೇಶ ಚೌಗಲೆ, ಶಾಲೆಯ ಮುಖ್ಯೋಪಾಧ್ಯಾಯರಾದ ದುಂಡಯ್ಯ ಪೂಜೇರಿ, ಎಸ್‌.ಡಿ.ಎಂ.ಸಿ ಅಧ್ಯಕ್ಷ ಈರಪ್ಪ ಜಡಗಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ಬಸವರಾಜ ರಾಯವ್ವಗೋಳ, ಬೆಳಗಾವಿ ಉಪವಿಭಾಗಾಧಿಕಾರಿಗಳ ಕಾರ್ಯಾಲಯದ ತಹಶೀಲ್ದಾರ್‌ ಅಶೋಕ ಮನ್ನಿಕೇರಿ, ಗ್ರಾಮದ ಮುಖಂಡ ಅಂಜನಕುಮಾರ ಗಂಡಗುದ್ರಿ, ಸಾಮಾಜಿಕ ಕಾರ್ಯಕರ್ತ ಗುರುದೇವಗೌಡ ಪಾಟೀಲ, ಬಾಬು ಮೇತ್ರಿ, ಸಂಸ್ಥೆಯ ಅಧ್ಯಕ್ಷ ಆನಂದ ಕೋಲ್ಕಾರ, ಕಾರ್ಯದರ್ಶಿ ಚನ್ನಬಸಪ್ಪ ಟೋಪಿ, ಸದಸ್ಯರಾದ ಅಜೀತ ಕಾಂಬ್ಳೆ, ಸುಚೇತಾ ಗಂಡಗುದರಿ, ಉಪಸ್ಥಿತರಿದ್ದರು.

ಸಂಸ್ಥೆಯ ಉಪಾಧ್ಯಕ್ಷರಾದ ಅಂಜನಕುಮಾರ ಗಂಡಗುದರಿ ಪ್ರಾಸ್ತಾವಿಕ ಮಾತಾಡಿದರು. ಗಂಗಾಧರ ಹೊರಗಿನಮನಿ ನಿರೂಪಿಸಿದರು, ಸಂಸ್ಥೆಯ ಗೌರವಾಧ್ಯಕ್ಷ ಅಕ್ಷಯ ಕೋಲ್ಕಾರ ಸ್ವಾಗತಿಸಿದರು. ಸದಸ್ಯ ಪ್ರಮೋದ ಮೇತ್ರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next