ಹಾವೇರಿ: ನೆರೆ ಪರಿಹಾರ ಕಾರ್ಯಗಳ ಜತೆಗೆ ಮಳೆ ನೀರು ನಿಲ್ಲದೆ ನೀರು ಇಂಗದ ಪ್ರದೇಶಗಳಲ್ಲಿ ಬರುವ ಡಿಸೆಂಬರ್ ವೇಳೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು. ಈಗಿನಿಂದಲೇ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನಕ್ಕೂ ಆದ್ಯತೆ ನೀಡಿ, ಎದುರಾಗುವ ಬರವನ್ನು ಸಮರ್ಥವಾಗಿ ಎದುರಿಸಲು ಸಿದ್ಧವಾಗಿ ಎಂದು ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತರು ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ಡಾ| ವಿಶಾಲ್ ಸೂಚಿಸಿದರು.
ನೆರೆ ಪರಿಹಾರ ಹಾಗೂ ಬರ ನಿರ್ವಹಣೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರಿಶೀಲನಾ ಸಭೆ ನಡೆಸಿ ಈಗಾಗಲೇ ಕುಡಿಯುವ ನೀರಿನ ಎಲ್ಲ ಯೋಜನೆಗಳಿಗೂ ಮಂಜೂರಾತಿ ನೀಡಲಾಗಿದೆ. ಅನುದಾನ ಬಿಡುಗಡೆಯಾಗಿದೆ. ಅಕ್ಟೋಬರ್-ನವೆಂಬರ್ ತಿಂಗಳೊಳಗೆ ಕುಡಿಯುವ ನೀರಿನ ಯೋಜನೆಗಳನ್ನು ಪೂರ್ಣಗೊಳಿಸಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೊರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಹೇಳಿದರು.
ಒತ್ತಡಕ್ಕೆ ಒಳಗಾಗಿ ಸಮಸ್ಯೆ ತಂದುಕೊಳ್ಳಬೇಡಿ: ಅತಿವೃಷ್ಟಿ ಮತ್ತು ನೆರೆಯಿಂದ ಕುಸಿತಕ್ಕೊಳಗಾದ ಮನೆಗಳನ್ನು ಎಚ್ಚರಿಕೆಯಿಂದ ಸರ್ವೇಮಾಡಿ, ಪ್ರತಿ ಮನೆಯ ನಾಲ್ಕು ಫೋಟೋಗಳನ್ನು ಕಡ್ಡಾಯವಾಗಿ ಸಂಗ್ರಹಿಸಿ ಯಾವುದೇ ಒತ್ತಡಕ್ಕೆ ಒಳಗಾಗಿ ಸಮಸ್ಯೆ ತಂದುಕೊಳ್ಳಬೇಡಿ. ನಿಖರವಾದ ಸಮೀಕ್ಷೆ ಕೈಗೊಂಡು ಸರ್ಕಾರ ವಿಪತ್ತು ನಿರ್ವಹಣಾ ಮಾರ್ಗಸೂಚಿಯಂತೆ ಪರಿಹಾರ ನೀಡಿ. ರಾಜೀವ ಗಾಂಧಿ ವಸತಿ ನಿಗಮದ ವೆಬ್‌ಸೈಟ್‌ಗೆ ವಿಳಂಬವಿಲ್ಲದೆ ಮನೆಹಾನಿ ಫಲಾನುಭಾವಿವಾರು ವಿವರವನ್ನು ದಾಖಲಿಸಿ ಎಂದು ಹೇಳಿದರು.
ಊರಿನ ಮುಖ್ಯ ರಸ್ತೆ ಬಳಿ ಸ್ಥಳಾಂತರ ಮಾಡಿ: ನದಿ ದಡದಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಬಡವರ ಮನೆಗಳನ್ನು ಆದ್ಯತೆ ಮೇರೆಗೆ ಸ್ಥಳಾಂತರ, ಸ್ಥಳಾಂತರವಾಗುವ ನಿವೇಶನ ಊರಿನ ಮುಖ್ಯ ರಸ್ತೆ ಬಳಿಯೇ ಇರಲಿ. ಇದರಿಂದ ಮೂಲ ಸೌಕರ್ಯಗಳನ್ನು ಕಲ್ಪಿಸಲು ಅನುಕೂಲವಾಗಲಿದೆ. ಜಮೀನು ಖರೀದಿಗೆ ದುಬಾರಿಯಾದರು ತೊಂದರೆ ಇಲ್ಲ ಎಂದು ಹೇಳಿದರು.
ಅನರ್ಹರು ಸೌಲಭ್ಯ ಪಡೆಯುವಂತಾಗದಿರಲಿ: ಸಮೀಕ್ಷೆ ಸಂದರ್ಭದಲ್ಲಿ ಮಾಹಿತಿ ನಿಖರವಾಗಿರಲಿ. ಅನರ್ಹರು ಸೌಲಭ್ಯ ಪಡೆಯುವಂತಾಗಬಾರದು. ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆಯಲು ಮುಂದಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಫೀಲ್ಡ್ಲೆವೆಲ್ ಆಫೀಸರ್‌ಗಳು ನೀಡುವ ಮಾಹಿತಿಯನ್ನು ಶೇ.100ರಷ್ಟು ನಂಬದೆ ಉಪವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳು ಮರು ಪರಿಶೀಲನೆ ನಡೆಸಬೇಕು. ಅರ್ಹರಿಗೆ ಅಗತ್ಯವಾದ ಸೌಲಭ್ಯ ತ್ವರಿತವಾಗಿ ದೊರಕಬೇಕು ಎಂದು ಹೇಳಿದರು.
ಬೆಳೆಹಾನಿ ಮತ್ತು ಭೂಮಿಹಾನಿ ಸಮೀಕ್ಷೆಯನ್ನು ನಿಖರವಾಗಿ ಕೈಗೊಳ್ಳಿ, ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಜಂಟಿ ಸಮೀಕ್ಷೆ ನಡೆಸಬೇಕು ಎಂದು ಸೂಚಿಸಿದರು.
ವಿದ್ಯುತ್, ರಸ್ತೆ, ಸೇತುವೆ ಮೂಲ ಸೌಕರ್ಯಗಳ ಪುನರ್ ಸ್ಥಾಪನೆಗೆ ಆದ್ಯತೆ ನೀಡಿ. ಕುಡಿಯುವ ನೀರಿನ ಮರು ಸ್ಥಾಪನೆ ನಂತರ ಕಡ್ಡಾಯವಾಗಿ ಕುಡಿಯಲು ಯೋಗ್ಯವೇ ಎಂದು ಪ್ರಯೋಗಾಲಯದಲ್ಲಿ ಪರೀಕ್ಷೆಮಾಡಿ ನಂತರ ಜನರಿಗೆ ಪೂರೈಕೆ ಮಾಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಜಿಪಂ ಉಪಕಾರ್ಯದರ್ಶಿ ಜಿ.ಗೋವಿಂದಸ್ವಾಮಿ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಜಾಫರ್ ಸುತಾರ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ ಹಾಗೂ ಇತರ ಅಧಿಕಾರಿಗಳು ಇದ್ದರು.