Advertisement
‘ಹುಲಿ ಬದಲು ಗೋವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಬೇಕು. ಗೋ ಹತ್ಯೆ ಮಾಡುವವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಜತೆ ಮಾತುಕತೆ ನಡೆಸಿ ಶೀಘ್ರ ಸೂಕ್ತ ತೀಮಾನಕ್ಕೆ ಬನ್ನಿ,’ ಎಂದು ರಾಜಸ್ಥಾನ ಹೈಕೋರ್ಟ್ ನ್ಯಾಯಮೂರ್ತಿ ಅಲ್ಲಿನ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದರೆ, ‘ಕೇಂದ್ರದ ಹೊಸ ಅಧಿಸೂಚನೆ, ವಧೆಗಾಗಿ ಜಾನುವಾರುಗಳನ್ನು ಮಾರುವುದನ್ನು ನಿಷೇಧಿಸುತ್ತದೆಯೇ ವಿನಾ, ಗೋಮಾಂಸ ಸೇವನೆ, ಹತ್ಯೆಯನ್ನು ನಿಷೇಧಿಸುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆೆ.
Related Articles
Advertisement
ನವಿಲು ಬ್ರಹ್ಮಚಾರಿ!‘ರಾಷ್ಟ್ರ ಪಕ್ಷಿಯಾಗಿರುವ ನವಿಲು ಬ್ರಹ್ಮಚಾರಿ’. ಇದು, ‘ಗೋವನ್ನು ರಾಷ್ಟ್ರಪ್ರಾಣಿಯನ್ನಾಗಿ ಘೋಷಿಸಬೇಕು,’ ಎಂದು ಸಲಹೆ ನೀಡಿರುವ ರಾಜಸ್ಥಾನ ಹೈಕೋರ್ಟ್ ನ್ಯಾ| ಮಹೇಶ್ ಚಂದ್ ಶರ್ಮಾ ಅವರ ಅಭಿಪ್ರಾಯ. ‘ಸಿಎನ್‌ಎನ್ -ನ್ಯೂಸ್18ಗೆ,’ ಸಂದರ್ಶನ ನೀಡಿರುವ ನ್ಯಾ| ಶರ್ಮಾ, ‘ಬ್ರಹ್ಮಚಾರಿಯಾಗಿರುವ ನವಿಲು ಹೆಣ್ಣು ನವಿಲಿನ ಜೊತೆ ಲೈಂಗಿಕ ಸಂಪರ್ಕ ಹೊಂದುವುದಿಲ್ಲ. ಗಂಡು ನವಿಲಿನ ಕಣ್ಣೀರು ಸೇವಿಸುವ ಮೂಲಕ ಹೆಣ್ಣು ನವಿಲು ಗರ್ಭಧರಿಸುತ್ತದೆ,’ ಎಂದಿದ್ದಾರೆ. ಅಲ್ಲದೆ, ‘ಗೋವನ್ನು ರಾಷ್ಟ್ರಪ್ರಾಣಿಯನ್ನಾಗಿ ಘೋಷಿಸಬೇಕು ಎಂದು ಆದೇಶಿಸುವ ಮೊದಲು ನಾನು ಸಾಕಷ್ಟು ಅಧ್ಯಯನ ನಡೆಸಿದ್ದೇನೆ ಎಂದಿದ್ದಾರೆ. ನಾನು ನನ್ನ 140 ಪುಟಗಳ ತೀರ್ಪಿನಲ್ಲಿ, ಋಗ್ವೇದ, ಅಥರ್ವಣವೇದ, ಯಜುರ್ವೇದ ಮತ್ತು ಸಾಮವೇದವ ಸಾಲುಗಳನ್ನು ಉಲ್ಲೇಖೀಸಿದ್ದೇನೆ. ಉತ್ತರಾಖಂಡ ಹೈಕೋರ್ಟ್ ಹೇಗೆ ಗಂಗೆ ಮತ್ತು ಯಮುನೆಗೆ ‘ಮಾನವ’ ಸ್ಥಾನಮಾನ ಕೊಟ್ಟಿತೋ, ಅದೇ ರೀತಿ ಗೋವುಗಳಿಗೂ ಅಂಥದ್ದೇ ಸ್ಥಾನಮಾನ ಕೊಡಬೇಕು ಎಂದಿದ್ದಾರೆ. ಜತೆಗೆ, ಗೋವು ಕಾಸ್ಮಿಕ್ ಶಕ್ತಿಯನ್ನು ಒಳಗೆಳೆದುಕೊಂಡು, ಆಮ್ಲಜನಕವನ್ನು ಹೊರಬಿಡುವ ವಿಶಿಷ್ಟ ಪ್ರಾಣಿ ಎಂದಿದ್ದಾರೆ. ಹುಲಿಯೇ ರಾಷ್ಟ್ರೀಯ ಪ್ರಾಣಿಯಾದದ್ದೇಕೆ?
1972ರಲ್ಲಿ ದೇಶಾದ್ಯಂತ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಯಾಯಿತು. ಅದೇ ವರ್ಷ ‘ರಾಯಲ್ ಬೆಂಗಾಲ್ ಟೈಗರ್’ ಅನ್ನು ಭಾರತದ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲಾಯಿತು. ಇದಕ್ಕೂ ಮುನ್ನ ಸಮಿತಿಯೊಂದನ್ನು ರಚಿಸಲಾಯಿತು. ಸಾಕಷ್ಟು ವನ್ಯ ಮೃಗಗಳನ್ನು ಪರಿಗಣಿಸಿದ ಸಮಿತಿ ಕಡೆಗೆ ಬಂಗಾಲದ ಹುಲಿಗೆ ‘ರಾಷ್ಟ್ರ ಪ್ರಾಣಿ’ ಸ್ಥಾನಮಾನ ನೀಡುವ ತೀರ್ಮಾನಕ್ಕೆ ಬಂದಿತು. ಅದು ಒಂದು ಸ್ಪುರದ್ರೂಪಿ ವನ್ಯಮೃಗ ಎಂಬ ಒಂದೇ ಕಾರಣಕ್ಕೆ ರಾಷ್ಟ್ರೀಯ ಪ್ರಾಣಿಯಾಗಿ ಆಯ್ಕೆಯಾಗಲಿಲ್ಲ. ಬದಲಿಗೆ, ಹುಲಿ ಹೊಂದಿರುವ ಸಾಮರ್ಥ್ಯ, ಚಾಕಚಕ್ಯತೆ ಹಾಗೂ ಸದೃಢ ಮೈಕಟ್ಟನ್ನು ಪರಿಗಣಿಸಿ ಅದಕ್ಕೆ ಆ ಮಾನ್ಯತೆ ನೀಡಲಾಗಿದೆ. ದೇಶದಲ್ಲಿ ಕಾಣಸಿಗುವ 8ಬಗೆಯ ಹುಲಿಗಳ ಪೈಕಿ ಬಂಗಾಲದ ಹುಲಿ ಸಂತತಿ ಅಳಿವಿನಂಚಿನಲ್ಲಿರುವುದನ್ನು ಪರಿಗಣಿಸಿ, 1973ರಲ್ಲಿ ‘ಹುಲಿ ಸಂರಕ್ಷಣಾ ಯೋಜನೆ’ ಜಾರಿಗೊಳಿಸಲಾಯಿತು.