ನೆಲಮಂಗಲ: ದೇಶದಲ್ಲಿ ವಾಸಿಸುತ್ತಿರುವ ನಕಲಿ ಪ್ರಜೆಗಳಿಂದ ಎಂದಿಗೂ ಅಸಲಿ ರಾಷ್ಟ್ರದ ನಿರ್ಮಾಣ ಸಾಧ್ಯವಿಲ್ಲ ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣ ಸಮೀಪದ ಬೆಂ.ಉತ್ತರ ತಾಲೂಕಿನ ದಾಸನಪುರದ ಆಚಾರ್ಯ ಗುರು ಪರಂಪರಾ ವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ವಾತ್ಸಲ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ತಾಯಂದಿರು ಮಕ್ಕಳನ್ನು ಹೆರುವ ಯಂತ್ರಗಳಾಗಬಾರದು. ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡಬೇಕಾಗಿದೆ. ದೇಶದಲ್ಲಿ ಇಂದು ಅಂಕಪಟ್ಟಿ ನಕಲು, ಪರೀಕ್ಷೆ ನಕಲು, ಪ್ರಮಾಣ ಪತ್ರಗಳು ನಕಲು, ದೇಶದಲ್ಲಿಎಲ್ಲವೂ ನಕಲಾಗಿ ಬಿಟ್ಟಿದೆ. ಹಾಗಾಗಿ ಅಸಲಿ ಪ್ರಜೆಗಳನ್ನು ನಿರ್ಮಾಣ ಮಾಡಬೇಕಾಗಿದೆ. ಜೀವನದಲ್ಲಿ ಶಿಸ್ತು ಇಲ್ಲದಿದ್ದರೆ ಜೀವನವೆ ನಶ್ವರ, ಶಿಕ್ಷಣವೆಂಬುದು ಕೇವಲ ಮಾಹಿತಿ ಸಂಗ್ರಹಕ್ಕೆ ಸೀಮಿತವಾಗದೆ, ಪ್ರಜ್ಞಾವಂತಿಕೆ ಹಾಗೂ ಹೃದಯವಂತಿಕೆಯಾಗಬೇಕು ಎಂದರು.
ಕರ್ನಾಟಕ ಪ್ರಾಂತ ಶಿಶು ವಾಟಿಕಾ ಪ್ರಮುಖ್ ತಾರಾ ಮಾತನಾಡಿ, ತಾಯಿ ಮಗುವನ್ನು ಬೆಳೆಸುವ ಹಂತದಲ್ಲಿ ಅದರ ಹೆಜ್ಜೆಯ ಪಯಣವನ್ನು ಅರಿಯಬೇಕು. ಮಗುವಿನ ಮೇಲಿನ ಪೋಷಕರ ಪ್ರೀತಿ ಅದರ ಜೀವನಕ್ಕೆ ಮುಳುವಾಗಬಾರದು. ತಾಯಿಯ ವಾತ್ಸಲ್ಯ ಮಗುವಿನ ಸಾಧನೆಗೆ ಮೆಟ್ಟಿಲಾಗಬೇಕು ಎಂದರು.
ವಾತ್ಸಲ್ಯ : ಮಕ್ಕಳ ಬಗ್ಗೆ ತಾಯಿ ತಂದೆಯ ವಾತ್ಸಲ್ಯದ ಕ್ಷಣ ಮಗುವಾಗಿದ್ದಾಗ, ಶಿಕ್ಷಣ ಹಂತದಲ್ಲಿ, ಮದುವೆ ಹಂತದಲ್ಲಿ ಯಾವ ರೀತಿ ಇರಬೇಕು ಎಂಬುದಾಗಿ ತಿಳಿಸಿಕೊಟ್ಟರು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿನಿಯರು ನೀಡಿದ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಯಿತು.
ಸಂದರ್ಭದಲ್ಲಿ ಗೋ ಸಂರಕ್ಷಕ ಮಹೇಂದ್ರ ಮುನ್ನೋಟ್, ಶಾಲಾ ಸಂಸ್ಥಾಪಕ ಕಾರ್ಯದರ್ಶಿ ರಂಗಾಚಾರ್ ಆಚಾರ್ಯ, ಪ್ರಾಂಶುಪಾಲ ವೆಂಕಟಸುಬ್ಬು, ಮುಖ್ಯಶಿಕ್ಷಕಿ ಭವ್ಯ, ಆಡಳಿತಾಧಿಕಾರಿ ವಿಷ್ಣು ಚಿತ್ತ, ನಾಗರತ್ನಮ್ಮ, ಕನ್ನಡ ಭಾಗದ ಮುಖಸ್ಥೆ ರಮಾಮಣಿ ಮತ್ತು ಮೀನಾಕ್ಷಿ ದಿವ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.