ಮುದ್ದೇಬಿಹಾಳ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಶಿಕ್ಷಕರು ತಮ್ಮ ಬುದ್ಧಿಮತ್ತೆಯಿಂದ ಮಕ್ಕಳನ್ನೂ ಬುದ್ಧಿವಂತರಾಗಿ ಮಾಡಲು ಪಣ ತೊಡಬೇಕು. ಶಿಕ್ಷಕ ವೃತ್ತಿ ಸಂಬಳ ತರುವ ನೌಕರಿ ಎಂದು ಪರಿಗಣಿಸದೇ ತಮ್ಮ ಪಾಂಡಿತ್ಯ ಪ್ರದರ್ಶನ, ದೇಶಕ್ಕೆ ಜ್ಞಾನವಂತರು, ಬುದ್ಧಿವಂತರನ್ನು ಕೊಡುಗೆಯಾಗಿ ನೀಡುವ ಸದವಕಾಶವೆಂದು ತಿಳಿದು ಕೆಲಸ ಮಾಡಬೇಕು ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ಮುದ್ದೇಬಿಹಾಳ ತಾಲೂಕಿನ ಗೋನಾಳ ಪಿಬಿ, ಕೊಪ್ಪ, ಕೊಪ್ಪ ತಾಂಡಾ, ಗುಂಡಕರ್ಚಗಿ, ಗುಡದಿನ್ನಿ, ಆಲಕೊಪ್ಪರ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ತಮ್ಮಕುಟುಂಬದಿಂದ ಕೊಡ ಮಾಡುತ್ತಿರುವ ಉಚಿತ ನೋಟ್‌ಬುಕ್ ವಿತರಿಸಿ, ನಂತರ ನಡೆದ ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರಿ ಶಾಲೆ ಮಕ್ಕಳು ಬಡಕುಟುಂಬಕ್ಕೆ ಸೇರಿದವರಾಗಿರುತ್ತಾರೆ. ಇವರಿಗೆ ಖಾಸಗಿ ಶಾಲೆಗಳಲ್ಲಿ ಹೆಚ್ಚು ಶುಲ್ಕ ಕೊಟ್ಟು ಕಲಿಯುವ ಶಕ್ತಿ ಇರುವುದಿಲ್ಲ. ಇದನ್ನು ಶಿಕ್ಷಕರು ಗಂಭೀರವಾಗಿ ಪರಿಗಣಿಸಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಬೇಕು. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆಗೊಂಡು ಶಿಕ್ಷಕರಾಗಿ ನೇಮಕಗೊಳ್ಳುವ ಬುದ್ಧಿವಂತ ಶಿಕ್ಷಕರು ತಮ್ಮ ಸಾಮರ್ಥ್ಯ ಒರೆಗೆ ಹಚ್ಚಿ ತೋರಿಸಬೇಕಿದೆ ಎಂದರು.
ಪ್ರತಿ ಶಾಲೆಯಲ್ಲೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಶಾಸಕರು ವಿದ್ಯಾರ್ಥಿಗಳಿಂದ ಬಂದ ಸಲಹೆ ದಾಖಲಿಸಿಕೊಂಡರು. ವಿದ್ಯಾರ್ಥಿಗಳ ಭವಿಷ್ಯದ ಅನಿಸಿಕೆ ಅವರಿಂದಲೇ ಕೇಳಿ ತಿಳಿದು ಪ್ರೋತ್ಸಾಹಿಸಿದರು. ಜಾಣ ಮಕ್ಕಳ ಶಿಕ್ಷಣ ಅರ್ಧಕ್ಕೆ ನಿಲ್ಲಿಸದಂತೆ, ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣ ಮೊಟಕುಗೊಳಿದಂತೆ ಪಾಲಕರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಬಸರಕೋಡ ಶ್ರೀ ಪವಾಡ ಬಸವೇಶ್ವರ ಸಂಸ್ಥೆ ಅಧ್ಯಕ್ಷ ಕೆ.ವೈ. ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿ ವೀರೇಶ ಜೇವರಗಿ, ಶಿಕ್ಷಣ ಸಂಯೋಜಕ ಎಚ್.ಎ. ಮೇಟಿ ಸೇರಿದಂತೆ ಗಣ್ಯರು, ಮುಖ್ಯಾಧ್ಯಾಪಕರು, ಶಿಕ್ಷಕರು ಇದ್ದರು.