Advertisement

ಮಕ್ಕಳಿಗೆ ಬಾಲ್ಯ ವಿವಾಹ ಅರಿವು ಮೂಡಿಸಿ

02:51 PM Feb 15, 2022 | Team Udayavani |

ಯಾದಗಿರಿ: ಬಾಲ್ಯ ವಿವಾಹ ಕುರಿತಾಗಿ ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿನ ಮಕ್ಕಳಿಗೆ ಅರಿವು ಮೂಡಿಸುವುದು ಅವಶ್ಯಕವಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಡಾ| ಜಯಶ್ರೀ ಚನ್ನಾಳ ಅವರು ಹೇಳಿದರು.

Advertisement

ಇಲ್ಲಿನ ಜಿಪಂ ಸಭಾಂಗಣದಲ್ಲಿ ಸಾರ್ವಜನಿಕ ವಿಚಾರಣೆ (ಆರ್‌ಟಿಇ) ಪೋಕ್ಸೊ, ಜೆಜೆಬಿ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆಗಳ ಕುರಿತು ಹಮ್ಮಿಕೊಂಡ ಮಕ್ಕಳೊಂದಿಗೆ ಸಂವಾದ ಹಾಗೂ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಹವಾಲು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಹಲವಾರು ಮಕ್ಕಳು ಇಂದಿಗೂ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದು, ಅಂತಹ ಮಕ್ಕಳಿಗೆ ಸಾರಿಗೆ ಇಲಾಖೆಯಿಂದ ಬಸ್‌ ಸೌಲಭ್ಯ ಒದಗಿಸುವುದು ಅವಶ್ಯಕವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಎಸ್‌ಪಿ ಡಾ| ಸಿ.ಬಿ. ವೇದಮೂರ್ತಿ ಅವರು, ಮಕ್ಕಳು ಮತ್ತು ಮಹಿಳೆಯರಿಗೆ ತಮ್ಮ ಆಭರಣ ಮತ್ತು ಅವುಗಳ ರಕ್ಷಣೆ ಕುರಿತಾಗಿ ವಿವರಿಸಿದರು. ಒಂಟಿಯಾಗಿ ತಿರುಗಾಡುವ ಸಮಯದಲ್ಲಿ ಜಾಗ್ರತೆ ವಹಿಸಬೇಕು ಎಂದು ಅವರು ಹೇಳಿದರು.

ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾ ಧೀಶರಾದ ಗೌರವಾನ್ವಿತ ಸಾಹಿಲ್‌ ಅಹಮ್ಮದ್‌ ಕುನ್ನಿಭಾವಿ ಅವರು, ಪೋಕ್ಸೊ ಮತ್ತು ಕಾನೂನು ಸೇವಾ ಪ್ರಾಧಿಕಾರದಿಂದ ಸಿಗುವ ಸೇವೆಗಳ ಕುರಿತಾಗಿ ಮತ್ತು ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಿ ಉಚಿತ ಕಾನೂನು ಸೇವಾ ಪಡೆಯುವ ವಿಧಾನಗಳನ್ನು ಕಾರ್ಯಕ್ರಮದಲ್ಲಿ ವಿವರಿಸಿದರು.

Advertisement

ಸಹಾಯಕ ಆಯುಕ್ತರಾದ ಪ್ರಶಾಂತ ಹನಗಂಡಿ ಅವರು ಮಾತನಾಡಿ, ಮಕ್ಕಳಿಗೆ ಸಿಗುವ ಸರಕಾರದ ವಿವಿಧ ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಸುರಪುರ, ಯಾದಗಿರಿ ಹಾಗೂ ಗುರುಮಠಕಲ್‌ ತಾಲೂಕಿನ ಒಟ್ಟು 35 ಮಕ್ಕಳು ಮತ್ತು 35 ಶಿಕ್ಷಕರು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಮ್ಮ ಶಾಲೆಯ ಮೂಲಭೂತ ಸೌಲಭ್ಯಗಳ ಕುರಿತಾಗಿ ಮಕ್ಕಳು ಸಮಸ್ಯೆಗಳನ್ನು ಅಧ್ಯಕ್ಷರ ಮುಂದೆ ಅಹವಾಲು ಸಲ್ಲಿಸಿದರು. ಅದಕ್ಕೆ ಸಂಬಂಧಿ ಸಿದ ಇಲಾಖೆ ಅಡಿಯಲ್ಲಿ ಅವುಗಳನ್ನು ಬಗೆಹರಿಸಲು ಕ್ರಮ ವಹಿಸಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದರು.

ಇದೇ ವೇಳೆ ಮಕ್ಕಳಿಗೆ ಆಯೋಗದ ವತಿಯಿಂದ ಬ್ಯಾಗ್‌ ವಿತರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ಪ್ರಭಾಕರ ಕವಿತಾಳ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಲ್ಲಣ್ಣ ದೇಸಾಯಿ ಮುಂತಾದವರು ಇದ್ದರು. ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಯಲ್ಲಪ್ಪ ಕೆ. ನಿರೂಪಿಸಿದರು. ಯಾದಗಿರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಧಾ ಮಣ್ಣೂರು ಅವರು ವಂದನಾರ್ಪಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next