Advertisement

ಜನಸಂಖ್ಯೆ ನಿಯಂತ್ರಣಕ್ಕೆ ಜಾಗೃತಿ ಮೂಡಿಸಿ

07:28 AM Feb 13, 2019 | Team Udayavani |

ಸಂತೆಮರಹಳ್ಳಿ: ಜನಸಂಖ್ಯೆ ನಿಯಂತ್ರಣದ ಬಗ್ಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಆಶಾ ಕಾರ್ಯಕರ್ತೆಯರು ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ಇದರಲ್ಲಿ ಹೆಚ್ಚು ಪ್ರಗತಿ ಕೆಲಸಗಳನ್ನು ಮಾಡಿದ ಕಾರ್ಯಕರ್ತೆಯರನ್ನು ಸನ್ಮಾನಿಸಬೇಕು ಎಂದು ಬಿಳಿಗಿರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಹೇಮಂತ್‌ಕುಮಾರ್‌ ತಿಳಿಸಿದರು.

Advertisement

ಯಳಂದೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ತಾಲೂಕು ಆಡಳಿತ, ತಾಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ಹಮ್ಮಿ ಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಇಂದು ದೇಶದ ಜನಸಂಖ್ಯೆ 136 ಕೋಟಿ ದಾಟಿದೆ. 2030ರ ವೇಳೆಗೆ ಭಾರತ ವಿಶ್ವದಲ್ಲೇ ಮೊದಲ ಸ್ಥಾನಕ್ಕೆ ಏರಲಿದೆ. ವಿಶ್ವದ ಭೂಭಾಗದಲ್ಲಿ 1000 ಕೋಟಿ ಜನರು ವಾಸಿಸಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ 740 ಕೋಟಿ ಜನಸಂಖ್ಯೆ ಇದೆ. ಇದರಲ್ಲಿ ಭಾರತದ ಪಾಲು ಶೇ. 18 ರಷ್ಟಿದೆ. ವಿಶ್ವದ ಭೂಮಿಯಲ್ಲಿ ಭಾರತದ ಪಾಲು ಕೇವಲ ಶೇ. 2.4 ರಷ್ಟು ಮಾತ್ರವಿದೆ. ಇದರಲ್ಲಿ ಒತ್ತಡದಲ್ಲಿ ಬದುಕು ಸಾಗಿಸುವ ಅನಿವಾರ್ಯತೆ ಹೆಚ್ಚಾಗಿದೆ ಎಂದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಕೆ.ಎಂ.ವಿಶ್ವೇಶ್ವರಯ್ಯ ಮಾತನಾಡಿ, ಲಿಂಗ ಅಸಮಾ ನತೆಯೂ ಜನಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಿದೆ. ಹೆಣ್ಣುಮಕ್ಕಳ ಅನುಪಾತ ಸಾವಿರ ಗಂಡುಮಕ್ಕಳಿಗೆ ಕೇವಲ 954 ಆಗಿದೆ. ಈ ಕುಸಿತಕ್ಕೆ ಗಂಡುಮಕ್ಕಳ ವ್ಯಾಮೋಹವೂ ಹೆಚ್ಚಾಗಿರುವುದು ಕಾರಣವಾಗಿದೆ. ಈ ಅಸಮಾನತೆಯನ್ನು ಸರಿದೂಗಿಸಬೇಕಿದೆ ಎಂದು ತಿಳಿಸಿದರು.

ಶಾಲಾ ಮಕ್ಕಳು, ಆಶಾ ಕಾರ್ಯಕರ್ತೆಯರು ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಸಿದರು. ತಹಶೀಲ್ದಾರ್‌ ವರ್ಷ ಒಡೆಯರ್‌ ಹೊಸಹಳ್ಳಿ, ಕುಟುಂಬ ಕಲ್ಯಾಣ ಅಧಿಕಾರಿ ಅಂಕಪ್ಪ, ಆರೋಗ್ಯಾಧಿಕಾರಿ ಡಾ. ಮಂಜುನಾಥ, ಡಾ. ಕೇಶವಮೂರ್ತಿ, ಡಾ. ತನುಜಾ, ಡಾ. ನಾಗರಾಜು ಸಿದ್ಧಾರ್ಥ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ಮಹಾದೇವ, ಶಿಕ್ಷಕ ಗೋಪಾಲ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next