Advertisement

ಮಲೇರಿಯಾ ರೋಗದ ಬಗ್ಗೆ ಜಾಗೃತಿ ಮೂಡಿಸಿ

04:34 PM Apr 26, 2019 | Suhan S |

ತುಮಕೂರು: ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಮಲೇರಿಯಾ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ ಎಂದು ಜಿಲ್ಲಾಆರೋಗ್ಯ ಮತ್ತು ಕಲ್ಯಾಣಾಧಿಕಾರಿ ಡಾ. ಚಂದ್ರಿಕಾ ತಿಳಿಸಿದರು.

Advertisement

ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿಗಳ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 2011ರಲ್ಲಿ ಒಟ್ಟು 566 ಪ್ರಕರಣಗಳು ವರದಿ ಯಾಗಿದ್ದು, 2018ರಲ್ಲಿ ಪತ್ತೆಯಾದ 103 ಪ್ರಕರಣ ಗಳಲ್ಲಿ ಶೇ.54ರಷ್ಟು ಪ್ರಕರಣಗಳು ಈ ಜಿಲ್ಲೆಗೆ ವಲಸೆ ಬಂದಿರುವ ಜನರಲ್ಲಿ ಪತ್ತೆಯಾಗಿದ್ದು, 2019ರ ಮಾರ್ಚ್‌ ಅಂತ್ಯದವರೆಗೆ 15 ಪ್ರಕರಣಗಳು ವರದಿ ಯಾಗಿವೆ. ಶೇ.80 ರಷ್ಟು ಮಲೇರಿಯಾ ಪ್ರಕರಣಗಳು ಜಿಲ್ಲೆಯಲ್ಲಿ ಇಳಿಮುಖವಾಗಿವೆ ಎಂದರು.

ಸೊಳ್ಳೆ ಪರದೆಗಳ ಬಳಕೆ ಮಾಡಿ: ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಟಿ.ಎನ್‌. ಪುರುಷೋತ್ತಮ್‌ ಮಾತನಾಡಿ, ರಾಜ್ಯದಲ್ಲಿ ಮಲೇರಿಯಾ ರೋಗವನ್ನು 2025ಕ್ಕೆ ನಿವಾರಣೆ ಮಾಡುವ ಗುರಿ ಹೊಂದಲಾಗಿದ್ದು, ಈ ಗುರಿಯನ್ನು ವಿವಿಧ ಜಿಲ್ಲೆಗಳಲ್ಲಿ ಹಂತಹಂತವಾಗಿ ಸಾಧಿಸಲು ಯೋಜಿಸ ಲಾಗುತ್ತಿದೆ.

ಇದರ ಪ್ರಕಾರ ತುಮಕೂರು ಜಿಲ್ಲೆಯಲ್ಲಿ 2020ಕ್ಕೆ ಮಲೇರಿಯಾರೋಗ ನಿವಾರಣೆ ಮಾಡಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ವಿಶ್ವ ಮಲೇರಿಯಾ ದಿನಾಚರಣೆ ಅತ್ಯಂತ ಮಹತ್ವ ಪಡೆದುಕೊಳ್ಳುತ್ತದೆ. ಮಲೇರಿಯಾ ಬರದಂತೆ ತಡೆಯಲು ಸೊಳ್ಳೆ ಪರದೆಗಳ ಬಳಕೆ ಮಾಡಬೇಕು. ನೀರಿನ ತಾಣಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಉಜ್ಜಿ ತೊಳೆದು ಸದಾಕಾಲ ಮುಚ್ಚಳದಿಂದ ಮುಚ್ಚಬೇಕು ಎಂದರು. ಈ ಸಂದರ್ಭದಲ್ಲಿ ಡಾ. ವೀಣಾ ಸೇರಿದಂತೆ ಆರೋಗ್ಯ ಇಲಾಖೆ ಇತರೆ ಸಿಬ್ಬಂದಿಗಳು ಹಾಜರಿದ್ದರು.

ಹುಳಿಯಾರಿನಲ್ಲಿ ವಿಶ್ವ ಮಲೇರಿಯಾ ದಿನ ಆಚರಣೆ:

Advertisement

ಹುಳಿಯಾರು: 2022ರ ವೇಳೆಗೆ ಮಲೇರಿಯಾದಲ್ಲಿ ರಾಜ್ಯ ಶೂನ್ಯ ಹಂತ ಸಾಧಿಸುವ ಗುರಿ ಹೊಂದಿದ್ದು, ಹೀಗಾಗಿ, ಏ.25ರಂದು ವಿಶ್ವ ಮಲೇರಿಯಾ ದಿನದ ಅಂಗವಾಗಿ ಆರೋಗ್ಯ ಇಲಾಖೆ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ‘ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ’ ಘೋಷ ವಾಕ್ಯದೊಂದಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಆರೋಗ್ಯ ಸಹಾಯಕ ವೆಂಟಕರಾಮಯ್ಯ ತಿಳಿಸಿದರು.ಹುಳಿಯಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಆರೋಗ್ಯ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೊಳ್ಳೆ ಪರದೆ ಬಳಸಿ: ಮಲೇರಿಯಾ ಜ್ವರ ಪ್ಲಾಸ್ಮೋಡಿಯಂ ವೈವಾಕ್ಸ್‌ ಹಾಗೂ ಪ್ಲಾಸ್ಮೋಡಿಯಂ ಫಾಲ್ಸಿಫಾರಂ ಎಂಬ ವೈರಾಣುವಿನಿಂದ ಬರುತ್ತಿದ್ದು, ಅನಾಫಿಲಿಸ್‌ ಎಂಬ ಹೆಣ್ಣು ಸೊಳ್ಳೆಯಿಂದ ಹರಡುತ್ತಿದೆ. ವೀಪರೀತ ಜ್ವರ, ಮೈ ಬೆವರುವುದು, ವಾಂತಿ, ಮೈ ಕೈ ನೋವು, ನಿಶ್ಯಕ್ತಿ ಮಲೇರಿಯಾ ರೋಗದ ಪ್ರಮುಖ ಲಕ್ಷಣಗಳಾಗಿವೆ. ರೋಗ ತಡೆಗಟ್ಟಲು ಮನೆ ಸುತ್ತ ಮುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸುವುದು ಅಗತ್ಯ. ರಾತ್ರಿ ಮಲಗುವಾಗ ಸೊಳ್ಳೆ ಪರದೆ ಬಳಸುವುದು, ಸೊಳ್ಳೆ ಕಡಿತಕ್ಕೆ ಒಳಗಾಗದಂತೆ ಜಾಗೃತಿ ವಹಿಸುವುದು, ಜ್ವರ ಕಾಣಿಸಿಕೊಂಡಾಗ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಸಲಹೆ ನೀಡಿದರು.

ಉಚಿತ ವೈದ್ಯಕೀಯ ಚಿಕಿತ್ಸೆ: ಎಲ್ಲಾ ಸರ್ಕಾರಿ ಆಸ್ಪತ್ರೆ ಗಳಲ್ಲಿ ಜ್ವರ ಕಾಣಿಸಿಕೊಂಡವರಿಗೆ ಉಚಿತವಾಗಿ ರಕ್ತ ಲೇಪನ ಸಂಗ್ರಹಿಸಿ ಪರೀಕ್ಷಿಸಲಾಗುತ್ತಿದೆ. ಹಳ್ಳಿಗಳ ನಿವಾಸಿಗಳಿಗೆ ಬಿಟ್ಟುಬಿಡದೆ ಜ್ವರ ಕಾಡಿದರೆ ಆರೋಗ್ಯ ಸಹಾಯಕರು ಅಥವಾ ಆಶಾ ಕಾರ್ಯಕರ್ತೆಯರಿಗೆ ತಿಳಿಸಿದರೆ ಮನೆ ಬಾಗಿಲಿಗೆ ಬಂದು ರಕ್ತದ ಮಾದರಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಒಂದು ವೇಳೆ ಹೆಚ್ಚಿನ ಚಿಕಿತ್ಸೆ ಬೇಕಾದರೆ ಉಚಿತ ವೈದ್ಯಕೀಯ ಚಿಕಿತ್ಸೆ ಸಹಿತ ಔಷಧವನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಆಯುಷ್‌ ವೈದ್ಯೆ ಡಾ.ಚಂದನಾ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಇಲಾಖೆ ಸಿಬ್ಬಂದಿ ಗಳಾದ ರೇಣುಕಾರಾಜ್‌, ಚಂದ್ರಕಾಂತ್‌, ಜ್ಯೋತಿಕಲಾ, ಮಹಾಲಕ್ಷ್ಮೀ, ಮಧು, ಅನುಸೂಯ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next