Advertisement

ಎಬಿಎಆರ್‌ಕೆ ಕಾರ್ಡ್‌ ಮಾಡಿಸಿ, ಚಿಕಿತ್ಸೆ ಪಡೆಯಿರಿ

09:53 PM Dec 21, 2019 | Lakshmi GovindaRaj |

ಮೈಸೂರು: ಆರೋಗ್ಯ ರಕ್ಷಣೆಗೆ ಸೂಕ್ತ ಚಿಕಿತ್ಸೆ ಪಡೆಯಲು ಬಡತನ ಅಡ್ಡಿಯಾಗಬಾರದು. ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಕಾರ್ಡ್‌ ಮಾಡಿಸಿ ಉಚಿತ ಚಿಕಿತ್ಸೆ ಪಡೆದು ಆರೋಗ್ಯವನ್ನು ರಕ್ಷಿಸಿಕೊಳ್ಳಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ಕೆ.ಒಂಟಿಗೋಡಿ ಹೇಳಿದರು.

Advertisement

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಸಹಯೋಗದಲ್ಲಿ ಶನಿವಾರ ಮೈಸೂರು ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿ ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್‌ ವಿತರಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

1.5 ಲಕ್ಷದವರೆಗೆ ಉಚಿತ ಚಿಕಿತ್ಸೆ: ಫ‌ಲಾನುಭವಿಗಳು ಆಧಾರ್‌ ಮತ್ತು ಪಡಿತರ ಚೀಟಿಗಳನ್ನು ಹಾಜರುಪಡಿಸಿ ಎಬಿಎಆರ್‌ಕೆ ಕಾರ್ಡ್‌ ಪಡೆಬಹುದಾಗಿದ್ದು, ಬಿಪಿಲ್‌ ಕುಟುಂಬವು ವರ್ಷಕ್ಕೆ 5 ಲಕ್ಷ ರೂ. ಹಾಗೂ ಎಪಿಲ್‌ ಕಾರ್ಡ್‌ದಾರರು ಗರಿಷ್ಠ 1.5 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯಬಹುದಾಗಿದ್ದು, ಈ ಯೋಜನೆಯ ಪ್ರಯೋಜನವನ್ನು ಎಲ್ಲಾ ಫ‌ಲಾನುಭವಿಗಳು ಪಡೆದುಕೊಳ್ಳಿ ಎಂದು ಸಾರ್ವಜನಿಕರಿಗೆ ತಿಳಿಸಿದರು.

ಯೋಜನೆಯ ಸವಲತ್ತು ಪಡೆಯಿರಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವಿಲ್‌ ನ್ಯಾಯಾಧೀಶ ಬಿ.ಪಿ.ದೇವಮಾನೆ ಮಾತನಾಡಿ, ಆರೋಗ್ಯ ಇಲಾಖೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಯುಷ್ಮನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆ ಇರುವಂತೆ ಕಾನೂನು ಸೇವಾ ಪ್ರಾಧಿಕಾರದಿಂದ ನ್ಯಾಯಾಧೀಶರು, ವಕೀಲರು ಹಣವನ್ನು ಭರಿಸಿ ಕಾನೂನು ಸೇವೆ ದೊರೆಯುವಂತ ಯೋಜನೆ ಇದೆ. ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದವರು ಈ ಯೋಜನೆಯ ಸವಲತ್ತು ಪಡೆಯಬಹುದು ಎಂದರು.

ಮಹಿಳೆಯರಿಗೆ ಉಚಿತವಾಗಿ ನ್ಯಾಯ ಸೇವೆ: ಮಹಿಳೆಯರಿಗೆ, ಕಾರ್ಮಿಕರು, ಪ್ರಕೃತಿ ವಿಕೋಪದಿಂದ ಬಾಧಿತರಾದವರು, ತಿಂಗಳಿಗೆ 15 ಸಾವಿರಕ್ಕಿಂತ ಕಡಿಮೆ ಆದಾಯ ಇರುವ ಕಾರ್ಮಿಕರು ನ್ಯಾಯಾಂಗ ಇಲಾಖೆಯಿಂದ ಕಾನೂನು ಸೇವಾ ಯೋಜನೆ ಸೌಲಭ್ಯ ಪಡೆಯಬಹುದಾಗಿದ್ದು, ಅದರಲ್ಲೂ ಮಹಿಳೆಯರಿಗೆ ಉಚಿತವಾಗಿ ನ್ಯಾಯ ಸೇವೆಯನ್ನು ನೀಡಲಾಗುವುದು ಎಂದು ಹೇಳಿದರು.

Advertisement

ಎಬಿಎಆರ್‌ಕೆ ಸೌಲಭ್ಯ ಮಹತ್ವದ್ದು: ಜಿಪಂ ಸಿಇಒ ಕೆ.ಜ್ಯೋತಿ ಮಾತನಾಡಿ, ಈ ಹಿಂದೆ ಕೆಲವು ಸಾರ್ವಜನಿಕರು ಆಧಾರ್‌ ಕಾರ್ಡ್‌, ಪಡಿತರ ಚೀಟಿ ಇಲ್ಲದೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ತೊಂದರೆಗಳನ್ನು ಅನುಭವಿಸುತ್ತಿದ್ದರು. ಸರ್ಕಾರವು ಹಲವಾರು ಸವಲತ್ತುಗಳನ್ನು ಮಾಡಿದೆ. ಅದರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಉಚಿತವಾಗಿ ನೀಡುವ ಎಬಿಎಆರ್‌ಕೆ ಸೌಲಭ್ಯ ಮಹತ್ವದ್ದಾಗಿದ್ದು, ಉಚಿತವಾಗಿ ಚಿಕಿತ್ಸೆಯನ್ನು ಪಡೆಯಬಹುದು ಎಂದರು.

ಹಣ ಕೇಳಿದರೆ ದೂರು ನೀಡಿ: ಎಬಿಎಆರ್‌ಕೆ ಕಾರ್ಡ್‌ ನೋಂದಣಿ ಮಾಡುವ ಫ‌ಲಾನುಭವಿಗಳು ಪಿವಿಸಿ ಅಳತೆಯ ಕಾರ್ಡ್‌ಗೆ 35 ರೂ. ಹಾಗೂ ಎ4 ಅಳತೆಯ ಕಾರ್ಡ್‌ಗೆ 10 ರೂ.ಗಳನ್ನು ನೀಡಿ ಮಾಡಿಸಿ. ಅದಕ್ಕಿಂತ ಹೆಚ್ಚು ಹಣ ಕೇಳಿದರೆ ದೂರು ನೀಡಿ, ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು. ಫ‌ಲಾನುಭವಿಗಳಾದ ಸಿ.ಎ.ರಮೇಶ್‌, ಜಿ.ವೆಂಕಟೇಶ್‌, ಪುರುಷೋತ್ತಮ್‌, ಯಶೋಧಮ್ಮ, ನಾಗರಾಜು ಅವರಿಗೆ ಸಾಂಕೇತಿಕವಾಗಿ ಎಬಿಎಆರ್‌ಕೆ ಕಾರ್ಡ್‌ ವಿತರಿಸಲಾಯಿತು.

ಕೆ.ಆರ್‌.ಆಸ್ಪತ್ರೆಯ ಸ್ಥಾನೀಯ ವೈದ್ಯಾಧಿಕಾರಿ ಡಾ.ಎಂ.ಎಸ್‌.ರಾಜೇಶ್‌ ಕುಮಾರ್‌, ಎಬಿಎಆರ್‌ಕೆ ಡಾ.ಎ.ಬಿ.ಮಂಜುನಾಥ್‌ ಪ್ರಸಾದ್‌, ಕೆ.ಆರ್‌.ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕ ಡಾ.ಬಿ.ಎಲ್.ನಂಜುಂಡಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next