Advertisement
ಪ್ರತಿಯೊಬ್ಬ ನಾಗರಿಕ ಸಾಕಷ್ಟು ಆಲೋಚಿಸಿ, ಪರಾಮರ್ಶಿಸಿ ತನ್ನ ಹಕ್ಕು ಚಲಾಯಿಸಬೇಕು. ಮತ ಚಲಾಯಿಸುವಾಗ ಮತದಾರ ಯಾವುದೇ ನಶೆಯಲ್ಲಿರದೇ ಸ್ವಚ್ಛ ಮನಸ್ಸಿನಿಂದ ಆಲೋಚಿಸಿ ಮತ ಚಲಾಯಿಸಬೇಕು. ಜತೆಗೆ ಮತದಾನ ಸಂದರ್ಭದಲ್ಲಿ ಮದ್ಯದ ಆಮಿಷಕ್ಕೆ ಯಾರೂ ಒಳಗಾಗಬಾರದು ಎಂದು ಚುನಾವಣಾ ಆಯೋಗ ಮತದಾನದ ಮುನ್ನ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡುತ್ತದೆ. ಆದರೂ ಹಲವೆಡೆ ಹಂಚಿಕೆಯಾದ ಉಚಿತ ಮದ್ಯ ಕುಡಿದು, ನಶೆಯಲ್ಲೇ ಮತ ಚಲಾಯಿಸುವುದು ಮಾಮೂಲು ಆಗಿರುವುದು ಕಟು ಸತ್ಯ.
Related Articles
Advertisement
ದಾವಣಗೆರೆಯ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ಚನ್ನಗಿರಿ ಅವರು ಈ ವಿಚಾರವಾಗಿ ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ಚುನಾವಣಾ ಆಯೋಗವು ಮತದಾನದ ಹಿಂದಿನ 48 ಗಂಟೆ ಅವಧಿ ಎಲ್ಲ ತರಹದ ಮದ್ಯದ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್‌ಗಳಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಿದರೂ ಅಕ್ರಮವಾಗಿ ಮದ್ಯ ಶೇಖರಿಸಿ ಮತದಾರರಿಗೆ ಸರಬರಾಜು ಮಾಡುವ ಪ್ರಕ್ರಿಯೆ ನಡೆಯುತ್ತಲೇ ಇರುವುದು ಗುಟ್ಟಾಗಿ ಉಳಿದಿಲ್ಲ.
ಆದ್ದರಿಂದ ಆಯೋಗ ಮತದಾನ ಮಾಡುವ ಸಂದರ್ಭದಲ್ಲಿ ವ್ಯಕ್ತಿ ಮದ್ಯಪಾನ ಮಾಡಿರಬಾರದು ಎಂಬ ನಿಯಮ ಜಾರಿಗೆ ತರಬೇಕು. ಎಲ್ಲ ಮತಗಟ್ಟೆಗಳಲ್ಲಿ ಮತದಾರರ ಉಸಿರು ಪರೀಕ್ಷೆ ಮಾಡುವ ವ್ಯವಸ್ಥೆ ಮಾಡಬೇಕು. ಮದ್ಯ ಸೇವಿಸಿ ಬಂದವರಿಗೆ ಮತದಾನದ ಹಕ್ಕು ನಿರ್ಬಂಧಿಸಬೇಕು. ಇದರಿಂದ ಮತದಾನ ವಿವೇಚನೆಯಿಂದ ಮಾಡಲು ಸಾಧ್ಯವಾಗುತ್ತದೆ. ಕುಡಿದು ಗಲಾಟೆ ಮಾಡುವುದು ನಿಯಂತ್ರಣಕ್ಕೆ ಬರುತ್ತದೆ. ಮತದಾನ ಯೋಗ್ಯರೀತಿಯಲ್ಲಿ ನಡೆದು ಯೋಗ್ಯ ವ್ಯಕ್ತಿ ಆಯ್ಕೆಗೆ ಸಹಕಾರಿಯಾಗಬಹುದು ಎಂದು ಸಲಹೆ ನೀಡಿದ್ದಾರೆ. ಸಾರ್ವಜನಿಕರು ನೀಡುತ್ತಿರುವ ಈ ಸಲಹೆಯನ್ನು ಚುನಾವಣಾ ಆಯೋಗ ಕಾನೂನು ವ್ಯಾಪ್ತಿಯಲ್ಲಿ ಪರಿಶೀಲಿಸಿ, ಸ್ವೀಕರಿಸುತ್ತದೆಯೋ ನಿರಾಕರಿಸುತ್ತದೆಯೋ ಕಾದು ನೋಡಬೇಕಿದೆ.
ಮತದಾನ ಹಕ್ಕು ಮಹತ್ವದ್ದಾಗಿದ್ದು ಇದನ್ನು ಚಲಾಯಿಸುವಾಗ ವ್ಯಕ್ತಿ ಯಾವುದೇ ನಶೆಯಲ್ಲಿರಬಾರದು. ಪ್ರತಿ ಮತಗಟ್ಟೆ ದ್ವಾರದಲ್ಲಿ ಉಸಿರು ತಪಾಸಣೆ ಯಂತ್ರ ಅಳವಡಿಸುವ ಬಗ್ಗೆ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ಪತ್ರ ಬರೆದಿದ್ದೇನೆ. ಆಯೋಗ ಏನು ತೀರ್ಮಾನ ಕೈಗೊಳ್ಳುತ್ತದೆ ಎಂಬುದು ಕುತೂಹಲ ಕೆರಳಿಸಿದೆ. -ಚಂದ್ರಶೇಖರ್ ಚನ್ನಗಿರಿ, ಸಾಮಾಜಿಕ ಕಾರ್ಯಕರ್ತ