Advertisement

ಮತದಾರರ ಪಟ್ಟಿ ಸಮರ್ಪಕ ಪರಿಷ್ಕರಣೆ ಮಾಡಿ

08:47 PM Jan 12, 2020 | Lakshmi GovindaRaj |

ಚಾಮರಾಜನಗರ: ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕ ಹಾಗೂ ರಾಜ್ಯ ಮಿನರಲ್‌ ಕಾರ್ಪೊರೇಷನ್‌ ವ್ಯವಸ್ಥಾಪಕ ನಿರ್ದೇಶಕ ನವೀನ್‌ರಾಜ್‌ ಸಿಂಗ್‌ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯಲ್ಲಿ ಕೈಗೊಂಡಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಸಲ್ಲಿಕೆಯಾಗುತ್ತಿರುವ ಹಕ್ಕು, ಆಕ್ಷೇಪಣೆಗಳನ್ನು ಪರಿಶೀಲಿಸಬೇಕು. ನಮೂನೆ 6, 7, 8 ಸೇರಿದಂತೆ ಎಲ್ಲಾ ನಮೂನೆಗಳನ್ನು ಅತ್ಯಂತ ಜಾಗರೂಕತೆಯಿಂದ ಪರಿಶೀಲಿಸಿ ಜ.27ರೊಳಗೆ ವಿಲೇವಾರಿ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಕ್ರಮದ ವರದಿ ಸಲ್ಲಿಸಿ: ಹೊರ ಜಿಲ್ಲೆ, ರಾಜ್ಯಗಳಿಂದ ಬಂದಿರುವ ವಿದ್ಯಾರ್ಥಿಗಳ ಹೆಸರು ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಬಗ್ಗೆ ಪರಿಶೀಲಿಸಬೇಕು. ಈಗಾಗಲೇ ವಿದ್ಯಾರ್ಥಿಗಳ ಹೆಸರು ಸಂಬಂಧಿಸಿದ ಜಿಲ್ಲೆ, ರಾಜ್ಯದಲ್ಲಿ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿದೆಯೇ ಎಂಬುದನ್ನು ಗಮನಿಸಬೇಕು. ಎರಡು ಕಡೆ ಹೆಸರು ದಾಖಲಾಗಿರುವುದು ಕಂಡುಬಂದರೆ ಪರಿಶೀಲಿಸಿ, ಒಂದು ಕಡೆ ಹೆಸರು ತೆಗೆದು ಹಾಕುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಬೇಕು. ಅಲ್ಲದೆ, ವಹಿಸಲಾದ ಕ್ರಮದ ಕುರಿತು ವರದಿ ಸಲ್ಲಿಸಬೇಕು ಎಂದರು.

ವಲಸೆ ಹೋಗಿರುವುದನ್ನು ಪರಿಶೀಲಿಸಿ: ಈ ಹಿಂದಿನ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಶೇ.75ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮತದಾನ ನಡೆದಿರುವ ಮತಗಟ್ಟೆಗಳನ್ನು ಗುರುತಿಸಿ, ಮತದಾನ ಪ್ರಮಾಣ ಕಡಿಮೆಯಾಗಲು ಇರುವ ಕಾರಣಗಳನ್ನು ಗಮನಿಸಬೇಕು. ಮತದಾರರು ಬೇರೆ ಕಡೆ ವಲಸೆ ಹೋಗಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಬೇಕು ಎಂದು ತಿಳಿಸಿದರು.

ಹೆಸರು ನೋಂದಣಿಗೆ ಪ್ರಚಾರ ಕೈಗೊಳ್ಳಿ: ಮತದಾರರ ಜಾಗೃತಿ (ಸ್ವೀಪ್‌) ಕಾರ್ಯಕ್ರಮಗಳ ಚಟುವಟಿಕೆಯನ್ನು ಪರಾಮರ್ಶಿಸಿದ ವೀಕ್ಷಕರು, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಸಂಬಂಧ ಜಾಗೃತಿ ಮೂಡಿಸಲು ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಬ್ಯಾನರ್‌, ಪೋಸ್ಟರ್‌, ಕರ ಪತ್ರಗಳನ್ನು ಮುದ್ರಿಸಿ ಅಳವಡಿಸಬೇಕು. ವಿವಿಧ ಮಾಧ್ಯಮಗಳ ಮೂಲಕವು ನೋಂದಣಿ ಕುರಿತು ಆಂದೋಲನ ಪ್ರಕ್ರಿಯೆ ಮಾಹಿತಿ ನೀಡಬೇಕು ಎಂದು ಸೂಚನೆ‌ ನೀಡಿದರು. ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಕುರಿತು ಜಿಲ್ಲೆಯಲ್ಲಿ ಕೈಗೊಂಡಿರುವ ವಿವರಗಳನ್ನು ವೀಕ್ಷಕರಿಗೆ ಒದಗಿಸಿದರು.

ಸಹಾಯವಾಣಿ ಕೇಂದ್ರ ಪರಿಶೀಲನೆ:
ಸಭೆಯ ಬಳಿಕ ಮತದಾರರ ಸಹಾಯವಾಣಿ ಜಿಲ್ಲಾ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದ ವೀಕ್ಷಕ ನವೀನ್‌ ರಾಜ್‌ ಸಿಂಗ್‌ ಅವರು, ಅಲ್ಲಿಯ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಸ್ವೀಕರಿಸಲಾಗುತ್ತಿರುವ ಕರೆಗಳು ಹಾಗೂ ನೀಡಲಾಗುತ್ತಿರುವ ಮಾಹಿತಿ ಕುರಿತು ಜಿಲ್ಲಾ ಸಂಪರ್ಕ ಕೇಂದ್ರದ ಅಧಿಕಾರಿ, ಸಿಬ್ಬಂದಿಯಿಂದ ವಿವರ ಪಡೆದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ಬಿ.ಎಚ್‌. ನಾರಾಯಣರಾವ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌, ಉಪವಿಭಾಗಾಧಿಕಾರಿ ನಿಖೀತಾ ಎಂ. ಚಿನ್ನಸ್ವಾಮಿ, ವಿವಿಧ ತಾಲೂಕುಗಳ ತಹಶೀಲ್ದಾರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next