Advertisement
ಹೆಚ್ಚು ಮೌನ ಕಳೆಯುವುದು ಮಾನ.! ಕೆಲವೊಮ್ಮೆ ನಾವು ಅದೆಷ್ಟು ನಿರಾಶರಾಗುತ್ತೇವೆ ಅಂದ್ರೆ ಎಲ್ಲ ಕಷ್ಟಗಳು ನನಗೆ ಮಾತ್ರ ಬರುವುದು, ನಾನು ಮಾತ್ರ ಸೋಲುವುದು. ನನ್ನೊಟ್ಟಿಗೆ ಮಾತ್ರ ಈ ರೀತಿ ಆಗುವುದು ಅನ್ನುವುದನ್ನು ಗಾಢವಾಗಿ ನಂಬಿ ಬಿಟ್ಟು ಮೌನವಾಗಿಯೇ ಅದೇ ಯೋಚನೆಗಳನ್ನು ಗಟ್ಟಿಯಾಗಿಸಿಕೊಂಡು ಇರುತ್ತೇವೆ. ಈ ಸಮಯದಲ್ಲಿ ಉಂಟಾಗುವ ನಮ್ಮ ಮೌನವೇ ಮುಂದೊಂದು ದಿನ ನಮ್ಮ ಮಾನಕ್ಕೆ ಹಾನಿ ತರಬಹುದು. ಎಲ್ಲಿ ನಮ್ಮ ತಪ್ಪುಗಳಿಲ್ಲದೇ ನಾವು ಸಹಿಸಿಕೊಂಡು ಸುಮ್ಮನೆ ಕೂರುತ್ತೇವೋ ಅಲ್ಲಿ ಮೌನಕ್ಕೂ ಮಾತುಗಳು ಅನಿವಾರ್ಯವಾಗುತ್ತದೆ.
ನಾನು ಅಂದುಕೊಂಡದ್ದು ಆಗಿಲ್ಲ. ನನ್ನ ಮಾತಿಗೆ ಯಾವ ಪ್ರತ್ಯುತ್ತರ ಬರಲಿಲ್ಲ. ನನ್ನ ಭಾವನೆಗಳಿಗೆ ಬೆಲೆ ಕೊಟ್ಟಿಲ್ಲ. ನನಗೆ ಇನ್ನೂ ಏನೂ ಬೇಡ ಎನ್ನುವ ನಿರ್ಧಾರಗಳನ್ನು ಮಾಡುವ ನಾವು ಒಂದೇ ಒಂದು ಸಲ ಯೋಚಿಸುವ ಕ್ಷಣಿಕವನ್ನು ಮರೆತು ಬಿಡುತ್ತೇವೆ. ಸೋಲುಗಳಾದ ಮೇಲೆಯೇ ಗೆಲುವು ಬರುವುದು. ಅವಮಾನ ವಾದ ಮೇಲೆಯೇ ಸಮ್ಮಾನ ಸಿಗುವುದು. ಪ್ರಯತ್ನಗಳಾದ ಮೇಲೆಯೇ ಪ್ರತಿಫಲ ಸಿಗುವುದು ಅನ್ನುವುದನ್ನು ನಾವು ಇನ್ನೊಬ್ಬರಿಗೆ ಹೇಳುತ್ತೇವೆ, ಬೋಧಿಸುತ್ತೇವೆ. ಆದ್ರೆ ನಮ್ಮಲ್ಲಿ ಮಾತ್ರ ಈ ಪ್ರಯತ್ನವನ್ನು ಮಾಡುವುದಿಲ್ಲ. ಜೀವಕ್ಕೆ ಹಾನಿ ಮಾಡಿಕೊಳ್ಳುವ ಮುನ್ನ ಜೀವನಕ್ಕೊಂದು ದಾರಿ ಮಾಡಿಕೊಳ್ಳುವುದು ನಮಗೆ ಮೊದಲು ಅರಿವಾಗಲಿ. -ಸುಹಾನ್ ಶೇಕ್