ರಾಣಿಬೆನ್ನೂರ: ಆರೋಗ್ಯಕರ ಬದುಕು ಸಾಗಿಸಲು ಉತ್ತಮ ಜೀವನ ಶೈಲಿ ಹಾಗೂ ಉತ್ತಮ ಪರಿಸರ ಅಗತ್ಯವಾಗಿದೆ. ಮರ-ಗಿಡ ಬೆಳೆಸುವ ಮೂಲಕ ಪ್ರಕೃತಿಗೆ ಕೊಡುಗೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಬಿಎಜೆಎಸ್‌ಎಸ್ ಕಾಲೇಜಿನ ಪ್ರಾಚಾರ್ಯ ಪ್ರಕಾಶ ಬಸಪ್ಪನವರ ಹೇಳಿದರು.
ಇಲ್ಲಿನ ಬಿಎಜೆಎಸ್‌ಎಸ್ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಎನ್‌ಎಸ್‌ಎಸ್ ಘಟಕದ ವತಿಯಿಂದ ನಡೆದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ದಿನೇ ದಿನೇ ಹೆಚ್ಚುತ್ತಿರುವ ಭೂಮಿಯ ತಾಪಮಾನವನ್ನು ಕಡಿಮೆ ಮಾಡಲು ಹಾಗೂ ಹಸಿರನ್ನು ಹೆಚ್ಚಿಸಿ ಶುದ್ಧಗಾಳಿಯನ್ನು ಪಡೆಯಲು ಪ್ರತಿಯೊಬ್ಬ ನಾಗರಿಕರು ಸಸಿ ನೆಟ್ಟು ಬೆಳೆಸಬೇಕಾದ ಅಗತ್ಯವಿದೆ ಎಂದರು.
ಎನ್‌ಎಸ್‌ಎಸ್ ಅಧಿಕಾರಿ ರವೀಂದ್ರಕುಮಾರ ಬಣಕಾರ ಮಾತನಾಡಿ, ಮನುಷ್ಯ ತನ್ನ ದಿನ ಬಳಕೆಗಾಗಿ ಹಾಗೂ ಕೈಗಾರಿಕೆಗಾಗಿ ಗಿಡ-ಮರ ನಾಶ ಮಾಡುವುದು ಮುಂದುವರಿದರೆ ಮುಂದಿನ ಪೀಳಿಗೆಯ ಯುವಕರು ಮರಗಳನ್ನು ಚಿತ್ರದಲ್ಲಿ ನೋಡುವ ಸ್ಥಿತಿ ನಿರ್ಮಾಣವಾಗಬಹುದು. ನೀರು, ಮಣ್ಣು, ಗಾಳಿ ಮಾನವನ ಬದುಕಿಗೆ ಪ್ರಮುಖವಾದ ಸಂಪತ್ತು. ಆದರೆ ಇಂದಿನ ದಿನಮಾನಗಳಲ್ಲಿ ನಾವು ಎಲ್ಲವನ್ನು ನಾಶ ಮಾಡುವುದರಿಂದ ಹವಾಮಾನ ವೈಪರಿತ್ಯ ಉಂಟಾಗಿ ಪರಿಸರ ನಾಶವಾಗುತ್ತಿದೆ ಎಂದರು.
ಪರಿಸರದ ಮೇಲೆ ಸತತವಾಗಿ ದಾಳಿ ನಡೆಸುತ್ತಿರುವುದರಿಂದ ತಾಪಮಾನದಲ್ಲಿ ಏರುಪೇರು ಉಂಟಾಗಿದೆ. ಪ್ರತಿ ವರ್ಷ ಉಷ್ಣತೆ ಹೆಚ್ಚಾಗುತ್ತಿದೆ. ಸಕಾಲಕ್ಕೆ ಮಳೆಯಾಗುತ್ತಿಲ್ಲ. ಇಷ್ಟೆಲ್ಲ ಆಗುತ್ತಿದ್ದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ, ಭವಿಷ್ಯದಲ್ಲಿ ಗಂಡಾಂತರ ಖಚಿತ. ಹೆಚ್ಚು ಹೆಚ್ಚು ಗಿಡ-ಮರ ಬೆಳೆಸುವ ಸಂಕಲ್ಪ ಪ್ರತಿಯೊಬ್ಬರು ಮಾಡಬೇಕು ಎಂದು ಹೇಳಿದರು.
ಎನ್‌ಎಸ್‌ಎಸ್ ಅಧಿಕಾರಿ ಕುಮಾರ ಬೆಣ್ಣಿ, ಪ್ರೊ| ಲಕ್ಷ ್ಮಣ ಗುಡಗೇರಿ, ಪ್ರೊ| ಸುಮನ್, ಪ್ರೊ| ಸುಧಾ ಕೊಪ್ಪದ, ಪ್ರೊ| ಎಂ.ಡಿ. ಹೊನ್ನಮ್ಮನವರ ಇತರರಿದ್ದರು.