Advertisement

ಬ್ಯಾಂಕ್‌ನಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೌಂಟರ್‌ ಕಲ್ಪಿಸಿ

04:22 PM Oct 15, 2022 | Team Udayavani |

ಗದಗ: ಬ್ಯಾಂಕ್‌ಗಳಲ್ಲಿ ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ಪ್ರತ್ಯೇಕ ಕೌಂಟರ್‌ ತೆರೆದು ಸೌಜನ್ಯಯುತ ನಡವಳಿಕೆ ಮೂಲಕ ಬ್ಯಾಂಕ್‌ ಸೇವೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

Advertisement

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಲೀಡ್‌ ಬ್ಯಾಂಕ್‌ನ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬ್ಯಾಂಕ್‌ ಸಿಬ್ಬಂದಿ ಸಾರ್ವಜನಿಕರಿಗೆ ಪ್ರಾಮಾಣಿಕ ಸೇವೆ ಒದಗಿಸಲು ಮುಂಗಡವಾಗಿ, ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸಬೇಕು. ಆರ್‌.ಬಿ.ಐ. ಕಾಯ್ದೆ, ನಿಯಮ ಪಾಲಿಸದ ಬ್ಯಾಂಕ್‌ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಸೂಚಿಸಿದರು.

ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಿದವರಿಗೆ ವಿಳಂಬವಿಲ್ಲದೇ ಕೂಲಿ ಹಣ ಪಾವತಿಯಾಗಬೇಕು. ಎನ್‌ಡಿಆರ್‌ಎಫ್‌, ಕಿಸಾನ್‌ ಸಮ್ಮಾನ ಸೇರಿದಂತೆ ಸರ್ಕಾರದ ವಿವಿಧ ಪರಿಹಾರಗಳನ್ನು ಪಾವತಿಸುವಾಗ ಸಾಲಕ್ಕೆ ಮರು ಹೊಂದಾಣಿಕೆ ಮಾಡಿಕೊಳ್ಳದೇ ಪೂರ್ಣ ಹಣವನ್ನು ಫಲಾನುಭವಿಗಳಿಗೆ ಪಾವತಿಸಬೇಕೆಂದರು.

2014ರ ಈಚೆಗೆ ಜನಧನ ಖಾತೆಗಳು ಹೆಚ್ಚಾಗಿ ಆರಂಭವಾಗಿವೆ. ಬ್ಯಾಂಕುಗಳು ಹಾಗೂ ನೌಕರರ ಸಂಖ್ಯೆ ಅಧಿಕವಾಗಬೇಕು. ಗ್ರಾಮೀಣ ಭಾಗದಲ್ಲಿ ಬ್ಯಾಂಕ್‌ಗಳು ತಮ್ಮ ಶಾಖೆಗಳನ್ನು ವಿಸ್ತರಿಸುವ ಮೂಲಕ ಸೇವೆ ಒದಗಿಸಬೇಕು. ಈ ಬಗ್ಗೆ ಆಯಾ ಬ್ಯಾಂಕಿನ ಮೇಲಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದರು.

Advertisement

ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ರೈತರ ಖಾತೆಗಳಿಗೆ ಬೆಳೆ ವಿಮೆ, ಬೆಳೆ ಪರಿಹಾರ ಮೊತ್ತ ಸೇರಿದಂತೆ ಇತರೆ ಪರಿಹಾರ ಮೊತ್ತ ಜಮೆಯಾದಲ್ಲಿ ಅದನ್ನು ಸಾಲಕ್ಕೆ ಮರು ಹೊಂದಾಣಿಕೆ ಮಾಡಿಕೊಳ್ಳದಿರುವಂತೆ ಸಂಬಂಧಿತ ಬ್ಯಾಂಕ್‌ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ತಿಳಿಸಿದರು.

ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಜಬ್ಟಾರ್‌ ಅಹ್ಮದ್‌ ಮಾತನಾಡಿ, ಜಿಲ್ಲೆಯಲ್ಲಿ ಲೀಡ್‌ ಬ್ಯಾಂಕ್‌ನ 173 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ ಸಾಲ ಠೇವಣಿ ಅನುಪಾತ ಜೂನ್‌ 2022ರ ವರೆಗೆ ಶೇ. 90.73ರಷ್ಟಾಗಿದೆ. ಶೇ. 60ಕ್ಕಿಂತ ಸಾಲ ಠೇವಣಿ ಅನುಪಾತದ 16 ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. ಇನ್ನುಳಿದ ಬ್ಯಾಂಕುಗಳಿಗೆ ಸಾಲ ಠೇವಣಿ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದೆ. ಜೂನ್‌ 2022ರ ಅಂತ್ಯದವರೆಗೆ ಜಿಲ್ಲೆಯಲ್ಲಿ ಕೃಷಿ ಸಾಲ 65598.65 ಲಕ್ಷ ರೂ., ಎಂಎಸ್‌ಎಂಇ ಅಡ್ವಾನ್ಸ್‌ 17658.57 ಲಕ್ಷ ರೂ., ಇತರೆ ಆದ್ಯತಾ ಕ್ಷೇತ್ರಕ್ಕೆ 6003.54 ಲಕ್ಷ ರೂ. ಹೀಗೆ ಒಟ್ಟಾರೆ 89260.76 ಲಕ್ಷ ರೂ. ಸಾಲ ನೀಡಿಕೆಯಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಒಟ್ಟಾರೆ 89260.76 ಲಕ್ಷ ರೂ. ಸಾಲ ವಿತರಣೆಯಾಗಿದ್ದು, ಆ ಪೈಕಿ ಕ್ಷೇತ್ರ ವಲಯವಾರು ಗದಗ-36981.34 ಲಕ್ಷ ರೂ., ಗಜೇಂದ್ರಗಡ-3908.58 ಲಕ್ಷ ರೂ., ಲಕ್ಷ್ಮೇಶ್ವರ-3501.58 ಲಕ್ಷ ರೂ., ಮುಂಡರಗಿ-6951.77 ಲಕ್ಷ ರೂ., ನರಗುಂದ-10511.12 ಲಕ್ಷ ರೂ., ರೋಣ-20860.44 ಲಕ್ಷ ರೂ., ಹಾಗೂ ಶಿರಹಟ್ಟಿ-6545.93 ಲಕ್ಷ ರೂ. ಸಾಲ ನೀಡಿಕೆಯಾಗಿದೆ ಎಂದರು. ಪ್ರಧಾನಮಂತ್ರಿ ಸ್ವನಿಧಿ (ಬೀದಿ ಬದಿ ವ್ಯಾಪಾರಸ್ಥರಿಗೆ ನೀಡುವ ಸಾಲ) ಮತ್ತು ಸ್ವನಿಧಿ ಸಮೃದ್ಧಿ ಯೋಜನೆಗೆ ಸಂಬಂಧಿಸಿದಂತೆ 2022ರ ಅಕ್ಟೋಬರ್‌ 10 ರವರೆಗೆ ಒಟ್ಟಾರೆ 5974 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಆ ಪೈಕಿ 4156 ವ್ಯಾಪಾರಸ್ಥರಿಗೆ ಸಾಲ ನೀಡಲಾಗಿದೆ ಎಂದು ಹೇಳಿದರು.

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸರಕಾರದ ಯೋಜನೆಗಳ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯಡಿ ಶಿಶು ಯೋಜನೆಯಲ್ಲಿ 24626 ಖಾತೆಗಳಿಗೆ 4986.10 ಲಕ್ಷ ರೂ., ಕಿಶೋರ ಯೋಜನೆಯಡಿ 22960 ಖಾತೆಗಳಿಗೆ 26299.53 ಲಕ್ಷ ರೂ. ಹಾಗೂ ತರುಣ ಯೋಜನೆಯಡಿ 2005 ಖಾತೆಗಳಿಗೆ 15047.17 ಲಕ್ಷ ರೂ. ವಿತರಣೆಯಾಗಿದೆ ಎಂದು ಲೀಡ್‌ ಬ್ಯಾಂಕ್‌ ಅಧಿಕಾರಿಗಳು ಸಭೆಗೆ ತಿಳಿಸಿದರು.

ಪ್ರಧಾನ ಮಂತ್ರಿ ಜನಧನ್‌ ಯೋಜನೆ (ಪಿಎಂಜೆಡಿವೈ) ಅಡಿ ಗ್ರಾಮೀಣ ನಗರ ಸೇರಿದಂತೆ ಒಟ್ಟಾರೆ 3,39,226 ಖಾತೆಗಳಿದ್ದು, ಈ ಪೈಕಿ 3,03,569 ಖಾತೆಗಳು ಆಧಾರ್‌ ಸೀಡಿಂಗ್‌ ಆಗಿವೆ. ಉಳಿದ ಖಾತೆಗಳನ್ನು ಆಧಾರ್‌ ಸೀಡಿಂಗ್‌ ಮಾಡಲಾಗುತ್ತಿದೆ. ಪ್ರಧಾನ ಮಂತ್ರಿ ಸುರಕ್ಷತಾ ಬಿಮಾ ಯೋಜನೆಯಡಿ ವಾರ್ಷಿಕ 20 ರೂ. ಪಾವತಿಸಿದಲ್ಲಿ ಅಪಘಾತ ಸಂಭವಿಸಿದಲ್ಲಿ 2 ಲಕ್ಷ ರೂ. ಪರಿಹಾರ ವಿತರಿಸುವ ಯೋಜನೆಯಾಗಿದ್ದು, ಈ ಯೋಜನೆಯಡಿ ಜಿಲ್ಲೆಯ 2,50,813 ಖಾತೆದಾರರು ನೋಂದಣಿಯಾಗಿದ್ದಾರೆ. ಈ ಪೈಕಿ 1,57,579 ಖಾತೆದಾರರು ವಿಮಾ ನವೀಕರಣಗೊಳಿಸಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಸಂಸದರು ವಾರ್ಷಿಕ ಸಾಲ ಯೋಜನೆ ಕುರಿತು ಕೈಪಿಡಿ ಬಿಡುಗಡೆಗೊಳಿಸಿದರು.

ಸಭೆಯಲ್ಲಿ ಉದ್ಯೋಗಿನಿ ಯೋಜನೆ, ಸಿಎಂ ಅಮೃತ ಜೀವನ ಯೋಜನೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ಡೇ ನಲ್ಮ ಯೋಜನೆಯ ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆ, ವಸತಿ ಯೋಜನೆ, ಪ್ರಗತಿ ಪರಿಶೀಲನೆ ಮಾಡಲಾಯಿತು.

ಸಭೆಯಲ್ಲಿ ಶಾಸಕ ಕಳಕಪ್ಪ ಬಂಡಿ, ಜಿಪಂ ಸಿಇಒ ಡಾ. ಸುಶೀಲಾ ಬಿ., ಎಸ್‌ಬಿಐ ಎಜಿಎಂ ದೋಣಿ ಪಾಠಕ್‌, ಎಸ್‌ಬಿಐ ಚೀಫ್‌ ಮ್ಯಾನೇಜರ್‌ ಮಹಾಂತೇಶ ಸೇರಿದಂತೆ ವಿವಿಧ ಬ್ಯಾಂಕ್‌ ಗಳ ಪ್ರತಿನಿಧಿಗಳು, ನಿಯಂತ್ರಣಾಧಿಕಾರಿಗಳು, ಇಲಾಖಾ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next